ಮುಧೋಳ ಎಸ್.ಆರ್. ಕಂಠಿ ಪದವಿ ಕಾಲೇಜಿನಲ್ಲಿ ಬಾಗಲಕೋಟ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲ ಸಚಿವೆ ಡಾ. ಲತಾ ಕೆ.ಪಿ. ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳೊಂದಿಗೆ ಸಂವಾದ ನೆಡೆಸಿದರು. ಡಾ. ಮಲ್ಲಿಕಾರ್ಜುನ ಜರಕುಂಟಿ, ವಿಶ್ವನಾಥ ಮುನವಳ್ಳಿ, ಮಹಾಂತೇಶ ಹಿರೇಮಠ, ವಿದ್ಯಾರ್ಥಿಗಳಿದ್ದರು.
ಮುಧೋಳ: ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಶ್ರೇಷ್ಠ ಪತ್ರಕರ್ತರಾಗಬೇಕಾದರೆ ಪ್ರತಿದಿನ ತಪ್ಪದೆ ಪತ್ರಿಕೆಗಳನ್ನು ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ಎಂದು ಬಾಗಲಕೋಟೆ ವಿಶ್ವವಿದ್ಯಾಲಯದ ಮೌಲ್ಯ ಮಾಪನ ಕುಲಸಚಿವೆ ಡಾ. ಲತಾ ಕೆ.ಪಿ. ಸಲಹೆ ನೀಡಿದರು.
ನಗರದ ಎಸ್.ಆರ್. ಕಂಠಿ ಮಹಾವಿದ್ಯಾಲಯದ ಬಿಎ., ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳೊಂದಿಗೆ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪತ್ರಿಕೆಯಲ್ಲಿ ಪ್ರಕಟವಾಗುವ ಪ್ರತಿಯೊಂದು ವಿಷಯವನ್ನು ಕೂಲಂಕಷವಾಗಿ ತಿಳಿದುಕೊಂಡು, ತಾವೂ ಕೂಡ ಪತ್ರಿಕೆಗಳಲ್ಲಿ ಹೇಗೆ ವರದಿ ಬರೆಯಬೇಕೆಂಬುದನ್ನು ಕಲಿತುಕೊಂಡರೆ ಮುಂದೊಂದು ದಿನ ಅತ್ಯುತ್ತಮ ಪತ್ರಕರ್ತರಾಗಿ ಹೊರ ಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಕನ್ನಡ ಮತ್ತು ಇಂಗ್ಲಿಷ್ ಸೇರಿ ವಿವಿಧ ಭಾಷೆಗಳ ಮೇಲೆ ಉತ್ತಮ ಪ್ರಭುತ್ವ ಹೊಂದಬೇಕು ಎಂದರು.
ಇದರೊಂದಿಗೆ ರಾಜ್ಯಶಾಸ, ಇತಿಹಾಸ, ಸಮಾಜಶಾಸ, ಅರ್ಥಶಾಸ್ತ್ರ, ವಾಣಿಜ್ಯ, ವಿಜ್ಞಾನ, ತಂತ್ರಜ್ಞಾನ ಹಾಗೂ ಗಣಕಯಂತ್ರ ಮುಂತಾದ ವಿಷಯಗಳ ಕುರಿತು ಕನಿಷ್ಠ ಜ್ಞಾನವನ್ನಾದರೂ ಪಡೆದುಕೊಳ್ಳಬೇಕು. ಇದರಿಂದ ತಾವು ಸಿದ್ಧಪಡಿಸುವ ಸುದ್ದಿಯ ಮೌಲ್ಯವು ಗಣನೀಯವಾಗಿ ಹೆಚ್ಚಾಗಲಿದೆ ಎಂದು ತಿಳಿಸಿದರು.
ಈಗಿನಿಂದಲೇ ಓದುವ, ಬರೆಯುವ ಮತ್ತು ಮಾತನಾಡುವ ಕೌಶಲ ಮೈಗೂಡಿಸಿಕೊಂಡು ಸಮಾಜಮುಖಿ ಪತ್ರಕರ್ತರಾಗಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಕರೆ ನೀಡಿ, ಸೈದ್ಧಾಂತಿಕ ಶಿಕ್ಷಣ ಜೊತೆಗೆ ಪ್ರಾಯೋಗಿಕ ಜ್ಞಾನವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಜರಕುಂಟಿ, ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ವಿಶ್ವನಾಥ ಮುನವಳ್ಳಿ, ಉಪನ್ಯಾಸಕ ಮಹಾಂತೇಶ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.