ಹೊಳೆನರಸೀಪುರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ರೇವಣ್ಣ ಪಾಲ್ಗೊಂಡಿದ್ದರು. ಬಿ.ಆರ್.ದೇವರಾಜ್, ಟಿ.ಎಸ್. ಕುಮಾರಸ್ವಾಮಿ, ಪ್ರಾಣೇಶ್‌ರಾವ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಾಸಕ ಎಚ್.ಡಿ.ರೇವಣ್ಣ
ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ
ಹೊಳೆನರಸೀಪುರ: ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕ್ಷೀಣಿಸಿದ್ದು, ಮುಖ್ಯಶಿಕ್ಷಕರು ಹಾಗೂ ಪ್ರಾಂಶುಪಾಲರು ಇದರ ಜವಾಬ್ದಾರಿ ಹೊರಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಸರ್ಕಾರಿ ಶಾಲಾ-ಕಾಲೇಜುಗಳ ಪ್ರಗತಿ ಪರಿಶೀಲನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿನ ಎಲ್ಲ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು, ತಾಲೂಕಿನ 26 ಸಿಆರ್‌ಪಿ, ಸಿಇಒ ಹಾಗೂ ಸಂಬಂಧಪಟ್ಟ ಅನುಷ್ಠಾನಾಧಿಕಾರಿಗಳು ಈ ಬಗ್ಗೆ ಚಿಂತನೆ ನಡೆಸಬೇಕು ಎಂದರು.
ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾತಿ ಕುಸಿತವಾಗಿದೆ. ತಾಲೂಕಿನಲ್ಲಿರುವ ಯಾವುದೇ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಮುಚ್ಚಬಾರದು. ಬದಲಾಗಿ ಮಕ್ಕಳ ದಾಖಲಾತಿ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಬಿಇಒ, ಸಿಆರ್ ಪಿ, ಬಿಆರ್‌ಪಿಗಳಿಗೆ ಸೂಚಿಸಿದರು.
ಖಾಸಗಿ ಶಾಲೆಗೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದು ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪುತ್ತಿವೆ. ಅಧಿಕಾರಿಗಳು ಇಂತಹ ಪ್ರಸಂಗಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚಿಸಲು ಸಂಬಂಧಪಟ್ಟವರು ಸಕಹಾರ ನೀಡಬೇಕು. ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸೇರುವಂತೆ ಪ್ರೌಢಶಾಲಾ ಮಕ್ಕಳ ಮನವೊಲಿಸಿದ ಬಳಿಕ ಅದನ್ನು ಪಾಲಕರ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು.
ಗೃಹ ವಿಜ್ಞಾನ ಕಾಲೇಜಿನ ದಾಖಲಾತಿ ಹೆಚ್ಚಿಸಲು ಹಾಗೂ ಹೆಚ್ಚಿನ ಮಟ್ಟದ ಕೋರ್ಸ್‌ಗಳ ಬಗ್ಗೆ ಮಾಹಿತಿ ಪಡೆದರಲ್ಲದೆ, ಹೋಂ ಸೈನ್ಸ್ ಕಾಲೇಜಿಗೆ ದಾಖಲಾಗುವಂತೆ ಮನವೊಲಿಸಿ ಕಳುಹಿಸಿಕೊಡಬೇಕು ಎಂದು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಿಗೆ ಸೂಚಿಸಿದರು.
ಬಡ ಮಕ್ಕಳ ಶಿಕ್ಷಣದ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಬೇಕು. ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸುವುದರ ಜತೆಗೆ ಖಾಲಿಯಿರುವ ಶಿಕ್ಷಕರು ಹಾಗೂ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಹೇಳಿದರು.
ಪ್ರತಿ ಶಾಲೆ-ಕಾಲೇಜಿಗೆ ಬೇಕಾದ ಸೌಕರ್ಯ, ಖಾಲಿ ಹುದ್ದೆ ಭರ್ತಿ, ಕಟ್ಟಡಗಳ ರಿಪೇರಿ ಕುರಿತು ಎಲ್ಲರಿಂದ ಮಾಹಿತಿ ಪಡೆದರಲ್ಲದೆ, ತಮಗೆ ಬರುವ ಅನುದಾನದಲ್ಲಿ ಮಾಡಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ದಾಖಲಾತಿ ಹೆಚ್ಚಿಸುವ ಮೂಲಕ ಯಾವುದೇ ಶಾಲಾ-ಕಾಲೇಜುಗಳನ್ನು ಮುಚ್ಚ್ಚದಂತೆ ಕ್ರಮ ಕೈಗೊಳ್ಳಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಪಿ.ಗಂಗಾಧರ್‌ಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಬಿ.ಆರ್.ದೇವರಾಜ್, ಪ್ರಾಂಶುಪಾಲ ಟಿ.ಎಸ್. ಕುಮಾರಸ್ವಾಮಿ, ಪ್ರಾಣೇಶ್‌ರಾವ್, ಗೃಹ ವಿಜ್ಞಾನ ಕಾಲೇಜು ಪ್ರಾಂಶುಪಾಲೆ ಆಶಾ ಜ್ಯೋತಿ, ಪ್ರಾಧ್ಯಾಪಕ ಕೃಷ್ಣಮೂರ್ತಿ ಇತರರಿದ್ದರು.