ಪ್ರಸಕ್ತ ವರ್ಷ ಅಕಾಲಿಕ ಮಳೆ, ಮುಂಗಾರು ಪೂರ್ವ ಹಾಗೂ ಇದೀಗ ವಾಯುಭಾರ ಕುಸಿತದಿಂದ ಶಿವಮೊಗ್ಗ ಜಿಲ್ಲಾದ್ಯಂತ ಅಡಿಕೆ, ಬಾಳೆ ಬೆಳೆಗೆ ಹೆಚ್ಚಿನ ಹಾನಿಯಾಗಿದೆ. ಅಕಾಲಿಕ ಮಳೆ-ಗಾಳಿಗೆ ಮೆಸ್ಕಾಂ ವ್ಯಾಪ್ತಿಯಲ್ಲೇ ಬರೋಬ್ಬರಿ 40.44 ಲಕ್ಷ ರೂ. ನಷ್ಟ ಸಂಭವಿಸಿತ್ತು. ಮೂರು ವಾರ ಮುಕ್ತಾಯವಾದರೂ ನೆಲಕ್ಕುರುಳಿದ ಅಡಿಕೆ, ಬಾಳೆ, ತೆಂಗಿನ ಮರಗಳ ಲೆಕ್ಕ ಇನ್ನೂ ಹೊರಬಿದ್ದಿಲ್ಲ. ಭಾನುವಾರ ರಾತ್ರಿ ಸುರಿದ ಮಳೆಗೆ ಶಿವಮೊಗ್ಗ, ಭದ್ರಾವತಿ ತಾಲೂಕಿನ ಹಲವೆಡೆ ಸಾವಿರಾರು ಅಡಿಕೆ ಮರಗಳು, 50ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.