ಜಮಖಂಡಿ: ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಚಟ್ಟುಸಿಂಗ್ ವೃತ್ತದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿ ಶನಿವಾರ ವಾಣಿಜ್ಯ ಮಳಿಗೆಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಕ್ಷೇತ್ರದಾದ್ಯಂತ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಗುಣಮಟ್ಟದ ಕಾಮಗಾರಿ ಮಾಡಬೇಕು. ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.
ರಾಜ್ಯದ ಕಾಂಗ್ರೆಸ್ ಸರ್ಕಾರದ ಎರಡನೇ ಇನ್ನಿಂಗ್ಸ್ ಪ್ರಾರಂಭವಾಗಲಿದ್ದು, ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರೊಂದಿಗೆ ನನಗೆ ಉತ್ತಮ ಬಾಂಧವ್ಯವಿದೆ. ಅವರು ಜಮಖಂಡಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಿದ್ದಾರೆ ಎಂಬ ಭರವಸೆ ಇದೆ.
ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಿಂತನೆಯ ವ್ಯಕ್ತಿಯಾಗಿರುವ ಡಿ.ಕೆ. ಶಿವಕುಮಾರ್ ಅವರು ಮಠಮಾನ್ಯಗಳಿಗೂ ಸಾಕಷ್ಟು ಅನುದಾನ ನೀಡಲಿದ್ದಾರೆ ಎಂಬ ನಂಬಿಕೆಯಿದೆ. ಮುಂಬರುವ ಇನ್ನೆರಡು ವರ್ಷಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಮತ್ತಷ್ಟು ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ ಎಂದು ತಿಳಿಸಿದರು.
ಕೃಷ್ಣಾ ನೀರು ಬತ್ತಿಹೋಗಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈ ಕುರಿತು ಈಗಾಗಲೇ ಟಾಸ್ಕ್ ಪೋರ್ಸ್ ಸಭೆ ನಡೆಸಿ, ಬೋರ್‌ವೆಲ್‌ಗಳ ದುರಸ್ತಿ ಹಾಗೂ ಅಗತ್ಯವಿದ್ದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಮೂಲಕ ಶೇ. 90ರಷ್ಟು ಸಮಸ್ಯೆ ಬಗೆಹರಿಸಲಾಗಿದೆ ಎಂದು ಹೇಳಿದರು.
ಹುನ್ನೂರು ಗ್ರಾಮದಲ್ಲಿ ಚಾವಡಿಯಿಂದ ಶ್ರೀಶೈಲ ಸಾವಳಗಿ ಅವರ ಮನೆಯವರೆಗೆ ಹಾಗೂ ಬಸವೇಶ್ವರ ಕಾಲನಿಯ ಚನ್ನಪ್ಪ ಬಿರಾದಾರ ಅವರ ಮನೆಯ ಎದುರಿನ ರಸ್ತೆ ಸೇರಿ ಒಟ್ಟು 50 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸುವ ಕಾಮಗಾರಿ, ನಗರದ ಎಪಿಎಂಸಿ ಆವರಣದಲ್ಲಿ 69 ಲಕ್ಷ ರೂ. ವೆಚ್ಚದಲ್ಲಿ 5 ಶೆಡ್‌ಗಳು ಮತ್ತು 10 ಚಿಕ್ಕ ಮಳಿಗೆಗಳ ನಿರ್ಮಾಣ ಕಾಮಗಾರಿ, 9 ಲಕ್ಷ ರೂ. ವೆಚ್ಚದಲ್ಲಿ ನೀರಿನ ಹೊಂಡ ನಿರ್ಮಾಣ, 11 ಲಕ್ಷ ರೂ. ವೆಚ್ಚದಲ್ಲಿ ಗೋಠೆ ಗ್ರಾಮದಲ್ಲಿ ಪವಾಡ ಬಸವೇಶ್ವರ ಸಮುದಾಯ ಭವನ ನಿರ್ಮಾಣ ಹಾಗೂ 10 ಲಕ್ಷ ರೂ. ವೆಚ್ಚದಲ್ಲಿ ತುಂಗಳ ಗ್ರಾಮದ ಕಮರೀಮಠದ ಹತ್ತಿರ ಸಮುದಾಯ ಭವನ ನಿರ್ಮಾಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ವಿವರಿಸಿದರು.