ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಯೋಜನೆ ಜಾರಿ: ತಕ್ಷಣ ಕಮಿಟಿ ಸಭೆಗೆ ಕೆಯುಡಬ್ಲ್ಯೂಜೆ ಆಗ್ರಹ
kuwj
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನೂರಾರು ಗ್ರಾಮೀಣ ಪತ್ರಕರ್ತರು ಅರ್ಜಿ ಸಲ್ಲಿಸಿದ್ದರೂ ಇದುವರೆಗೆ ಬಸ್ ಪಾಸ್ ಮಂಜೂರು ಮಾಡುವ ಕಮಿಟಿ ಸಭೆ ನಡೆದಿಲ್ಲ
ಮುಖ್ಯಮಂತ್ರಿ ಮಾಧ್ಯಮ ಆರೋಗ್ಯ ಸಂಜೀವಿನಿ ಯೋಜನೆ ಕೂಡ ಇನ್ನೂ ಜಾರಿಯಾಗಿಲ್ಲ.
ಬೆಂಗಳೂರು:
ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಯೋಜನೆ ಹಾಗೂ ಮುಖ್ಯಮಂತ್ರಿ ಮಾಧ್ಯಮ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ತಕ್ಷಣ ಕಮಿಟಿ ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಈ ಸಂಬಂಧ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಂ.ಎನ್. ಅನುಚೇತ ಅವರನ್ನು ಭೇಟಿಯಾದ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಮನವಿ ಪತ್ರ ಸಲ್ಲಿಸಿ ಎರಡೂ ಮಹತ್ವದ ಕಲ್ಯಾಣ ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸುವಂತೆ ಕೋರಿದರು.
ಮನವಿಯಲ್ಲಿ, ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಯೋಜನೆಗೆ 2025ರ ಜುಲೈ 1ರಂದು ನಡೆದ ಪತ್ರಿಕಾ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಚಾಲನೆ ನೀಡಿದ್ದರು. ಯೋಜನೆಯಡಿ ನೂರಾರು ಗ್ರಾಮೀಣ ಪತ್ರಕರ್ತರು ಅರ್ಜಿ ಸಲ್ಲಿಸಿದ್ದರೂ ಇದುವರೆಗೆ ಬಸ್ ಪಾಸ್ ಮಂಜೂರು ಮಾಡುವ ಕಮಿಟಿ ಸಭೆ ನಡೆದಿಲ್ಲ. ಆದ್ದರಿಂದ ಕೂಡಲೇ ಸಭೆ ಕರೆದು ಅರ್ಜಿಗಳ ಪರಿಶೀಲನೆ ನಡೆಸಿ ಅರ್ಹರಿಗೆ ಬಸ್ ಪಾಸ್ ವಿತರಿಸಬೇಕು ಎಂದು ಒತ್ತಾಯಿಸಲಾಗಿದೆ.
ಅದೇ ರೀತಿ, ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾದ ಮುಖ್ಯಮಂತ್ರಿ ಮಾಧ್ಯಮ ಆರೋಗ್ಯ ಸಂಜೀವಿನಿ ಯೋಜನೆ ಕೂಡ ಇನ್ನೂ ಜಾರಿಯಾಗಿಲ್ಲ. ಪತ್ರಕರ್ತರ ಆರೋಗ್ಯ ಭದ್ರತೆಗೆ ಅತ್ಯಂತ ಅಗತ್ಯವಾದ ಈ ಯೋಜನೆಯನ್ನು ವಿಳಂಬವಿಲ್ಲದೆ ಅನುಷ್ಠಾನಗೊಳಿಸಬೇಕೆಂದು ಸಂಘ ಮನವಿ ಮಾಡಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಎಂ.ಎನ್. ಅನುಚೇತ ಅವರು, ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಯೋಜನೆ ಹಾಗೂ ಮುಖ್ಯಮಂತ್ರಿ ಮಾಧ್ಯಮ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಶೀಘ್ರದಲ್ಲೇ ಕಮಿಟಿ ಸಭೆ ಕರೆಯಲಾಗುವುದು ಎಂದು ಭರವಸೆ ನೀಡಿದರು.
ಪತ್ರಕರ್ತರ ಕಲ್ಯಾಣಕ್ಕೆ ಸಂಬಂಧಿಸಿದ ಈ ಎರಡೂ ಯೋಜನೆಗಳನ್ನು ಸರ್ಕಾರ ಆದ್ಯತೆಯ ಮೇರೆಗೆ ಜಾರಿಗೊಳಿಸಲಿದೆ ಎಂಬ ವಿಶ್ವಾಸವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ವ್ಯಕ್ತಪಡಿಸಿದೆ.
*ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಯೋಜನೆ ಹಾಗೂ ಮುಖ್ಯಮಂತ್ರಿ ಮಾಧ್ಯಮ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಶೀಘ್ರದಲ್ಲೇ ಕಮಿಟಿ ಸಭೆ ಕರೆಯಲಾಗುವುದು.-ಎಂ.ಎನ್. ಅನುಚೇತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ