

ಬೆಂಗಳೂರು: ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ ಮತ್ತು ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ‘ಇಮ್ಮರ್ಸಿವ್ ರೂಮ್ (ತಲ್ಲೀನ ಗೊಳಿಸುವ ಕೊಠಡಿ) ಮತ್ತು ಡಿಜಿಟಲ್ ಮೃಗಾಲಯ ಮಾರ್ಗದರ್ಶಿ’ ಯೋಜನೆಯನ್ನು ಸಾರ್ವಜನಿಕ- ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಯೋಜನೆಗಾಗಿ ಮೈಸೂರು ಮೃಗಾಲಯಕ್ಕೆ 44.62 ಕೋಟಿ ರೂ., ಹಾಗೂ ಬನ್ನೇರುಘಟ್ಟ ಉದ್ಯಾನವನಕ್ಕೆ 35.22 ಕೋಟಿ ರೂ. ನೀಡಲಾಗುತ್ತದೆ.
ಹಾಗೆಯೇ, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಾರ್ವಜನಿಕ ಮತ್ಸಾ್ಯಗಾರ ಅಭಿವೃದ್ಧಿ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ (30 ವರ್ಷಗಳ ಅವಧಿಗೆ) 144 ಕೋಟಿ ರೂ. ಅಂದಾಜು ಮೊತ್ತದಲ್ಲಿ ವಿನ್ಯಾನ, ನಿರ್ವಣ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ ಆಧಾರದ ಮೇಲೆ ಕಾರ್ಯಗತಗೊಳಿಸುವುದಕ್ಕೂ ಸಂಪುಟ ಅನುಮತಿಸಿದೆ.
ದೃಶ್ಯದ ಒಳಗೇ ನಾವಿದ್ದೇವೆ ಎಂಬ ಅನುಭವ ಪಡೆಯುವ ತಂತ್ರಜ್ಞಾನವೇ ‘ಇಮರ್ಷನ್ ರೂಮ್. ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನದಿಂದ ಸಜ್ಜುಗೊಂಡ ಒಂದು ವಿಶೇಷ ಕೊಠಡಿ. ವಿಶೇಷ ಕೊಠಡಿಯೊಳಗೆ ಪ್ರವೇಶಿಸಿದ ವ್ಯಕ್ತಿಗೆ ತಾನು ನಿಜವಾಗಿಯೂ ಆ ದೃಶ್ಯದ ಭಾಗವಾಗಿದ್ದೇನೆ ಎಂಬ ಭ್ರಮೆ ಉಂಟಾಗುತ್ತದೆ. ಉದಾಹರಣೆಗೆ ಕೊಠಡಿಯೊಳಗೆ ನಿಂತಾಗ ಸಮುದ್ರದ ಆಳದ ದೃಶ್ಯಗಳನ್ನು ಬಿತ್ತರಿಸಿದರೆ, ಪ್ರೇಕ್ಷಕ ನಿಜವಾಗಿಯೂ ನೀರಿನ ಒಳಗೆ ಮೀನುಗಳ ಮಧ್ಯೆ ಇದ್ದ ನೈಜ ಅನುಭವ ಆಗುತ್ತದೆ. ಇಲ್ಲಿ 360 ಡಿಗ್ರಿ ಪ್ರೊಡಕ್ಷನ್, ಅಡ್ವಾನ್ಸ್ಡ್ ಆಡಿಯೋ ಮತ್ತು ಲೈಟಿಂಗ್ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಹೀಗಾಗಿ ಬೇರೆಯದೇ ಲೋಕ ಸೃಷ್ಟಿಯಾಗುತ್ತದೆ.
ಗೋಡೆಗಳು, ಕೆಲವೊಮ್ಮೆ ನೆಲದ ಮೇಲೂ ಡಿಜಿಟಲ್ ಚಿತ್ರಗಳನ್ನು ಕಾಣುವಂತೆ ಮಾಡುವ ಮೂಲಕ ಇಡೀ ವಾತಾವರಣವನ್ನು ಸೃಷ್ಟಿಸಲಾಗುತ್ತದೆ. ಕೊಠಡಿಯಲ್ಲಿರುವ ವ್ಯಕ್ತಿಗಳು ಅಲ್ಲಿನ ಡಿಜಿಟಲ್ ವಿಷಯಗಳೊಂದಿಗೆ ಸಂವಹನ ನಡೆಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಮೃಗಾಲಯ ಪರಿಸರದೊಳಗೆ ಹೋದಂತೆ ನೈಜ ಅನುಭವ ನೀಡುತ್ತದೆ. ವರ್ಚುವಲ್ ಪ್ರೊಡಕ್ಷನ್ ಮೂಲಕ ಸ್ಟುಡಿಯೋದಲ್ಲಿ ಬೇಕಾದ ಪರಿಸರವನ್ನು ಸೃಷ್ಟಿಸಲಾಗುತ್ತದೆ.
ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳ ನೇಮಕಾತಿಯಲ್ಲಿ ಶೇ.2 ಮೀಸಲಾತಿ ನೀಡುವ ಉದ್ದೇಶದಿಂದ ‘ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ) ನೇಮಕಾತಿ (ತಿದ್ದುಪಡಿ) ನಿಯಮಗಳು, 2026’ಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ. ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಈ ಮಸೂದೆ ಮಂಡಿಸಲಾಗುತ್ತದೆ. ಅದೇ ರೀತಿ ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತತ ಸಂಬಂಧಿತ ಕಾರ್ವಿುಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ (ತಿದ್ದುಪಡಿ) ವಿಧೇಯಕ 2026ಕ್ಕೆ ಒಪ್ಪಿಗೆ ನೀಡಲಾಗಿದೆ.
ಕಲಬುರಗಿ ಮತ್ತು ಯಾದಗಿರಿ ಭಾಗದಲ್ಲಿ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನ ಮತ್ತು ಸ್ಟೇಟ್ ಸೆಕ್ಟರ್ ಯೋಜನೆಯಡಿ ಹೊಸ ಮೂರು ಕೈಗಾರಿಕಾ ವಸಾಹತುಗಳನ್ನು 200.07 ಕೋಟಿ ರೂ. ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
1. ಮೈಸೂರಿನ ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆಯನ್ನು 400 ಹಾಸಿಗೆ ಸಾಮರ್ಥ್ಯದಿಂದ 600 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ 180 ಕೋಟಿ ರೂ.
2. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯದ ಸಮಗ್ರ ಅಭಿವೃದ್ಧಿ ಕಾಮಗಾರಿಗಳಿಗೆ 23.76 ಕೋಟಿ ರೂ.
3. ದಕ್ಷಿಣ ಕನ್ನಡ ಜಿಲ್ಲೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಮಾಸ್ಟರ್ ಪ್ಲ್ಯಾನ್ ಯೋಜನೆಯ ಮೂರನೇ ಹಂತದ ಕಾಮಗಾರಿಗೆ 604.65 ಕೋಟಿ ರೂ.
4. ಉಡುಪಿ ಜಿಲ್ಲೆ ಬ್ರಹ್ಮಾವರ ಹಾಗೂ ಧಾರವಾಡ ಗ್ರಾಮಾಂತರ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಾಣ ಮಾಡಲು ಕಾಂಗ್ರೆಸ್ ಭವನ ಟ್ರಸ್ಟ್ಗೆ ಜಾಗ ಮಂಜೂರು.
5. ಕೋಲಾರ ಜಿಲ್ಲೆ ಬಂಗಾರಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಜ್ಯ ಹೆದ್ದಾರಿ-5, 95ರಲ್ಲಿ ಒಟ್ಟು 20.74 ಕಿಮೀ ಉದ್ದದ ಚತುಷ್ಪಥ ರಸ್ತೆ ನಿರ್ಮಾಣ ಮಾಡಲು 66 ಕೋಟಿ ರೂ.
6. ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಟೌನ್ಶಿಪ್ ಬಸವಸಾಗರ ಅಣೆಕಟ್ಟಿನಿಂದ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ 132.50 ಕೋಟಿ ರೂ.
7. ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ 22 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲ್ ತಾರಾಲಯವನ್ನು 3ಡಿಯಿಂದ 2ಡಿಗೆ ಪರಿಷ್ಕರಿಸುವ ನಿರ್ಣಯಕ್ಕೆ ಅನುಮೋದನೆ.