_1769883609508.webp?w=480&auto=format%2Ccompress&fit=max)
_1769883609508.webp?w=480&auto=format%2Ccompress&fit=max)
ಮಾನವನ ಜೀವನದಲ್ಲಿ ಕೆಲಸ ಅಥವಾ ಕಾಯಕಕ್ಕೆ ಮಹತ್ವದ ಸ್ಥಾನವಿದೆ. ಕೆಲಸವಿಲ್ಲದೆ ಜೀವನಕ್ಕೆ ಅರ್ಥವಿಲ್ಲ; ಆದರೆ ಬಹುತೇಕ ಜನರಿಗೆ ಕಾಯಕ ಎಂದರೆ ಶ್ರಮ, ಒತ್ತಡ ಎಂಬ ಭಾವನೆಯಿದೆ. ಕೆಲಸವನ್ನು ಹೊರೆ ಎಂದು ಭಾವಿಸಿದಾಗ ಅದು ಒತ್ತಡವಾಗುತ್ತದೆ, ಅದನ್ನು ಆರಾಧನೆ ಅಥವಾ ಸೇವೆ ಎಂದು ಭಾವಿಸಿದಾಗ ಅದು ಆನಂದ ನೀಡುತ್ತದೆ. ಬದುಕಿಗೆ ತೃಪ್ತಿ ನೀಡುತ್ತದೆ. ಕಾಯಕವನ್ನು ಕೇವಲ ಹೊಟ್ಟೆಪಾಡಿಗಾಗಿ ಮಾಡುವ ಕೆಲಸವಾಗಿ ನೋಡಿದಾಗ ಅದು ಕಷ್ಟಕರವಾಗುತ್ತದೆ, ಭಾರವಾಗುತ್ತದೆ. ಅದೇ ಕಾಯಕವನ್ನು ಸೇವೆಯಾಗಿ, ಸಮಾಜಕ್ಕೆ ಕೊಡುಗೆಯಾಗಿ ಅಥವಾ ಆತ್ಮಸಂತೋಷದ ಮಾರ್ಗವಾಗಿ ಕಂಡಾಗ, ಅದರಲ್ಲಿ ದಣಿವಿಗಿಂತ ತೃಪ್ತಿಯೇ ಹೆಚ್ಚು. ಮನಸ್ಸು ಒಪ್ಪಿಕೊಂಡ ಕೆಲಸ ದೇಹಕ್ಕೆ ಕಷ್ಟವಾಗುವುದಿಲ್ಲ ಎಂಬುದು ಬದುಕಿನ ಸತ್ಯ.
ನಮ್ಮ ಹಿರಿಯರು ‘ಕಾಯಕವೇ ಕೈಲಾಸ’ ಎಂದಿದ್ದಾರೆ. ಶ್ರಮವನ್ನು ಆರಾಧನೆಯಾಗಿ ಸ್ವೀಕರಿಸಿದರೆ, ಪ್ರತಿಯೊಂದು ಕೆಲಸವೂ ಸಾಧನೆಯಾಗುತ್ತದೆ. ರೈತ ಬೆಳೆಯುವ ಬೆಳೆ, ಕಾರ್ವಿುಕನ ಶ್ರಮ, ಶಿಕ್ಷಕನ ಪಾಠ, ವೈದ್ಯ, ಯೋಧ, ಇಂಜಿನಿಯರ್ ಸೇವೆ ಇವೆಲ್ಲವೂ ಕಾಯಕವೇ. ದಿನವೂ ರಸ್ತೆ ಸ್ವಚ್ಛಗೊಳಿಸುವ, ಕಸ ವಿಲೇವಾರಿ ಮಾಡುವ ಪೌರ ಕಾರ್ವಿುಕರು, ಹೂ-ಹಣ್ಣು, ಹಾಲು, ತರಕಾರಿ ಮಾರುವವರು ಎಲ್ಲರೂ ತಮ್ಮ ತಮ್ಮ ಕಾಯಕ ಮಾಡುತ್ತಾರೆ. ಈ ಶ್ರಮದ ಕಾಯಕದ ಮೇಲೆ ಪ್ರೀತಿ ಇದ್ದಾಗ ದೇಹ ದಣಿದರೂ ಮನಸ್ಸು ಉಲ್ಲಾಸದಿಂದಿರುತ್ತದೆ. ಯಾವ ಕಾಯಕವೂ ಉಚ್ಚವಲ್ಲ, ಯಾವುದೂ ಕನಿಷ್ಠವಲ್ಲ. ಎಲ್ಲವೂ ತನ್ನದೇ ಆದ ಮೌಲ್ಯ ಹೊಂದಿದೆ.
ಶ್ರೀರಾಮನು ವಾನರ ಸೇನೆಯ ಸಹಾಯದಿಂದ ಲಂಕೆಗೆ ಸೇತುವೆ ನಿರ್ವಿುಸುತ್ತಿದ್ದಾಗ ಅಳಿಲೊಂದು ತನ್ನ ಬಾಲವನ್ನು ನೀರಿನಲ್ಲಿ ಅದ್ದಿ ಮರಳಿನಲ್ಲಿ ಮೆತ್ತಿ, ಆ ಮರಳನ್ನು ಕಲ್ಲುಗಳ ಸಂದುಗಳಲ್ಲಿ ತುಂಬುತ್ತಿತ್ತಂತೆ. ಅದರ ಶಕ್ತಿ ಸಣ್ಣದು, ಕಾರ್ಯವೂ ಅಲ್ಪದಂತೆ ಕಂಡರೂ ಅದರ ಉದ್ದೇಶ ಉನ್ನತವಾಗಿತ್ತು. ಅಳಿಲಿನ ಕಾಯಕ ನಿಷ್ಠೆಯನ್ನು ಗಮನಿಸಿದ ಶ್ರೀರಾಮ ಅದರ ಬೆನ್ನ ಮೇಲೆ ಕೈಯಿಟ್ಟು ಆಶೀರ್ವದಿಸಿದನೆಂಬ ಕಥೆ ಪ್ರಸಿದ್ಧ.
ಯಾವುದೇ ಮಹತ್ವದ ಕಾರ್ಯ ಯಶಸ್ವಿಯಾಗಲು ದೊಡ್ಡ ಯೋಜನೆ ರೂಪಿಸುವ ಇಂಜಿನಿಯರ್ನ ಬುದ್ಧಿವಂತಿಕೆಯಷ್ಟೇ, ಕಲ್ಲು ಹೊರುವ ಕಾರ್ವಿುಕನ ಶ್ರಮವೂ ಅಗತ್ಯ. ಯಾರ ಕೆಲಸವೂ ಸಣ್ಣದಲ್ಲ, ಯಾರ ಪಾತ್ರವೂ ನಗಣ್ಯವಲ್ಲ. ನಿಷ್ಠೆ, ಶ್ರಮ ಮತ್ತು ಸತ್ಯಸಂಕಲ್ಪ ಇದ್ದರೆ, ಅಳಿಲಿನಂತಹ ಸಣ್ಣ ಪ್ರಯತ್ನವೂ ಇತಿಹಾಸ ನಿರ್ವಣದಲ್ಲಿ ತನ್ನ ಗುರುತು ಮೂಡಿಸಬಲ್ಲದು. ಅದರಂತೆ ನಮ್ಮ ಜೀವನದಲ್ಲಿಯೂ, ನಾವು ಮಾಡುವ ಪ್ರತಿಯೊಂದು ಕೆಲಸವನ್ನು ಗೌರವದಿಂದ, ಕಪಟವಿಲ್ಲದೆ ಮಾಡಿದಾಗ ಅದು ಸಮಾಜದ ಸೇತುವೆಯೊಂದನ್ನು ನಿರ್ವಿುಸುವ ಇಟ್ಟಿಗೆಯಾಗಿ ಪರಿಣಮಿಸುತ್ತದೆ.
ಕಾಯಕ ಯಾವುದೇ ಇರಲಿ ಅದನ್ನು ಮನಃಪೂರ್ವಕವಾಗಿ ಮಾಡಬೇಕು. ಕಾಟಾಚಾರಕ್ಕೆ ಅಥವಾ ಕಪಟತನದಿಂದ ಕಾಯಕ ಮಾಡುವುದು ತರವಲ್ಲ ಎಂದು ಭಗವಾನ್ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಅರ್ಜುನನಿಗೆ ಉಪದೇಶಿಸಿದ ನಿಷ್ಕಾಮ ಕರ್ಮತತ್ತ್ವದ ಮೂಲಕ ತಿಳಿಸಿದ್ದಾನೆ. ಫಲದ ಆಸೆ ಇಲ್ಲದೆ, ಮನಸ್ಸು ಶುದ್ಧವಾಗಿಟ್ಟುಕೊಂಡು, ಧರ್ಮದ ಮಾರ್ಗದಲ್ಲಿ ನಡೆಯುವ ಕರ್ಮವೇ ಶ್ರೇಷ್ಠ. ಹೊರಗೆ ಸತ್ಯದಂತೆ ತೋರಿಸಿ ಒಳಗೆ ಬೇರೆ ಉದ್ದೇಶ ಇಟ್ಟುಕೊಂಡಿರುವುದು ಕಪಟ. ಅಂತಹ ಕರ್ಮ ಕ್ಷಣಿಕ ಲಾಭ ಕೊಡಬಹುದು; ಆದರೆ ಮನಃಶಾಂತಿಯನ್ನಾಗಲಿ ಆತ್ಮತೃಪ್ತಿಯನ್ನಾಗಲಿ ನೀಡುವುದಿಲ್ಲ. ಮಾನವನ ಜೀವನದಲ್ಲಿ ಕಾರ್ಯ ಅನಿವಾರ್ಯ. ಕೆಲಸದಿಂದ ದೂರವಿರುವುದು ಸಾಧ್ಯವಿಲ್ಲ; ಆದರೆ ಕಾರ್ಯ ಮಾಡುವ ರೀತಿಯೇ ಜೀವನದ ಮೌಲ್ಯವನ್ನು ನಿರ್ಧರಿಸುತ್ತದೆ.
ಇಂದಿನ ಸಮಾಜದಲ್ಲಿ ಕಾಯಕವನ್ನು ಸೇವೆ ಎಂದು ಪರಿಗಣಿಸುವವರು ಬಹಳ ಕಡಿಮೆ. ಇದು ದೊಡ್ಡ ದೌರ್ಬಲ್ಯವೂ ಹೌದು. ಕಾಯಕವನ್ನು ಸೇವೆಯೆಂದು ನೋಡುವ ದೃಷ್ಟಿ ನಿಧಾನವಾಗಿ ಕ್ಷೀಣಿಸುತ್ತಿದೆ. ನಾನು ಸಂಬಳಕ್ಕಾಗಿ ಕೆಲಸ ಮಾಡುತ್ತೇನೆ, ಅದಕ್ಕಿಂತ ಹೆಚ್ಚು ಏನೂ ಇಲ್ಲ ಎಂಬ ಮನೋಭಾವ ವ್ಯಾಪಕವಾಗುತ್ತಿದೆ. ಇದರಿಂದ ಕೆಲಸ ಒಂದು ವ್ಯಾಪಾರವಾಗುತ್ತದೆ, ಸಾಧನೆ ಆಗುವುದಿಲ್ಲ.
ನಮ್ಮ ಸಂಸ್ಕೃತಿಯಲ್ಲಿ ಕಾಯಕವೇ ಪೂಜೆ. ಕೃಷ್ಣನು ಗೀತೆಯಲ್ಲಿ ಹೇಳಿದಂತೆ ‘ಕರ್ಮಣ್ಯೇವಾಧಿಕಾರಸ್ತೇ..’ ಫಲದ ಆಸೆಗೆಲ್ಲದೇ, ಕರ್ಮವನ್ನು ಶುದ್ಧಭಾವದಿಂದ ಮಾಡಿದಾಗಲೇ ಅದು ಯೋಗವಾಗುತ್ತದೆ. ಜೀವನಕ್ಕೆ ಸಂಬಳ ಅಗತ್ಯ, ಅದರಲ್ಲಿ ಸಂಶಯವಿಲ್ಲ. ಆದರೆ ಕಾಯಕ ನಿಷ್ಠೆಯನ್ನು ಕಳೆದುಕೊಂಡರೆ, ಕೆಲಸದಲ್ಲಿ ತೃಪ್ತಿಯೂ ಇಲ್ಲ, ಸಮಾಜಕ್ಕೂ ಲಾಭವಿಲ್ಲ.
ರಸ್ತೆ ಸ್ವಚ್ಛಗೊಳಿಸುವವನು ತನ್ನ ಕೆಲಸವನ್ನು ಸೇವೆಯಾಗಿ ಕಂಡಾಗಲೇ ಊರು ಸ್ವಚ್ಛವಾಗುತ್ತದೆ; ಶಿಕ್ಷಕ ತನ್ನ ಕರ್ತವ್ಯವನ್ನು ಜ್ಞಾನ ಸೇವೆ ಎಂದು ಭಾವಿಸಿದಾಗಲೇ ವಿದ್ಯಾರ್ಥಿಗಳ ಬದುಕು ರೂಪುಗೊಳ್ಳುತ್ತದೆ; ಇಂಜಿನಿಯರ್ ತನ್ನ ಯೋಜನೆಯಲ್ಲಿ ಹೊಣೆಗಾರಿಕೆಯನ್ನು ಸೇವಾಭಾವದಿಂದ ತೆಗೆದುಕೊಂಡಾಗಲೇ ಸೇತುವೆಗಳು ಸುರಕ್ಷಿತವಾಗುತ್ತವೆ. ಸಂಬಳಕ್ಕಾಗಿ ಮಾಡುವ ಕೆಲಸ ಬದುಕನ್ನು ಸಾಗಿಸಲು ಸಹಾಯ ಮಾಡುತ್ತದೆ; ಸೇವಾಭಾವದಿಂದ ಮಾಡುವ ಕಾಯಕ ಬದುಕಿಗೆ ಅರ್ಥ ನೀಡುತ್ತದೆ. ಈ ಎರಡರ ಮಧ್ಯೆ ಇರುವ ಅಂತರವನ್ನು ಅರಿತಾಗಲೇ, ವ್ಯಕ್ತಿಯೂ ಸಮಾಜವೂ ನಿಜವಾದ ಪ್ರಗತಿಯನ್ನು ಕಾಣಲು ಸಾಧ್ಯ. ಆದುದರಿಂದ ಪ್ರತಿಯೊಬ್ಬರೂ ತಮ್ಮ ಜೀವನದ ಪ್ರತಿಯೊಂದು ಕಾರ್ಯದಲ್ಲೂ ಪ್ರಾಮಾಣಿಕತೆ, ನಿಷ್ಠೆ ಮತ್ತು ಧರ್ಮವನ್ನು ಅಳವಡಿಸಿಕೊಂಡರೆ, ಅದೇ ಭಗವಂತನಿಗೆ ಸಲ್ಲಿಸುವ ನಿಜವಾದ ಸೇವೆಯಾಗುತ್ತದೆ.
ಬಾಲ್ಯದಲ್ಲಿದ್ದಾಗ ನಮ್ಮ ಹಿರಿಯರು ಶ್ರಮಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದರು. ಮನೆಗೆಲಸ, ಹೊಲಗೆಲಸದಲ್ಲಿ ಮಕ್ಕಳನ್ನು ಜತೆಗೂಡಿಸಿಕೊಂಡು ಕಾಯಕ ಪಾಠವನ್ನು ಕಲಿಸುತ್ತಿದ್ದರು. ಮನೆಯಲ್ಲಿ ನಾವು ಊಟ ಮಾಡಿದ ತಟ್ಟೆಯನ್ನು ನಾವೇ ತೊಳೆಯಬೇಕು, ನಮ್ಮ ಬಟ್ಟೆಯನ್ನು ನಾವೇ ಒಗೆಯಬೇಕು. ರಜಾ ದಿನಗಳಲ್ಲಿ ತೋಟಕ್ಕೆ ನೀರು ಹಾಯಿಸಬೇಕು, ಅಡಿಕೆ ಹೆಕ್ಕಬೇಕು, ದನ ಮೇಯಿಸಬೇಕು ಹೀಗೆ ಅನೇಕ ಕೆಲಸಗಳನ್ನು ನಾವು ಮಾಡಬೇಕಿತ್ತು. ಆದರೆ ಈಗ ಅಂಥದ್ದು ಬಹಳ ಕಡಿಮೆಯಾಗಿದೆ. ಕೆಲವು ಮಕ್ಕಳು ತಾವು ತಿಂಡಿ ತಿಂದ ತಟ್ಟೆಯನ್ನೂ ತೊಳೆಯದ ಸ್ಥಿತಿ ಕಾಣಬಹುದು. ಮಕ್ಕಳಲ್ಲಿ ಕಾಯಕಪ್ರೇಮವನ್ನು ಬೆಳೆಸಿದರೆ, ಅವರು ಜೀವನದ ಯಾವುದೇ ಹಂತದಲ್ಲೂ ಕೆಲಸ ಮಾಡಲು ಹಿಂಜರಿಯುವುದಿಲ್ಲ.
ಶ್ರೀ ಕ್ಷೇತ್ರ ಧರ್ಮಸ್ಥಳದ ಸನಿವಾಸ ವಸತಿ ಶಾಲೆ ರತ್ನಮಾನಸ ಹಾಗೂ ಸಿದ್ಧವನ ಗುರುಕುಲಗಳು ಶಾಲಾ ಪಠ್ಯ ಶಿಕ್ಷಣದ ಜತೆಗೆ ಜೀವನದ ಶಿಕ್ಷಣವನ್ನು ಒದಗಿಸುವ ಕಾರ್ಯದಲ್ಲಿ ಅನೇಕ ದಶಕಗಳಿಂದ ನಿರತವಾಗಿವೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಜೀವನದಲ್ಲಿ ಯಾವುದೇ ಸಂದರ್ಭದಲ್ಲೂ ಬದುಕನ್ನು ಕಟ್ಟಿಕೊಳ್ಳಲು ಶಕ್ತರಾಗಿರುತ್ತಾರೆ. ಸ್ವಾವಲಂಬಿಗಳಾಗಿರುತ್ತಾರೆ. ರತ್ನಮಾನಸ ಹಾಗೂ ಸಿದ್ಧವನದಲ್ಲಿದ್ದು ವಿದ್ಯಾಭ್ಯಾಸ ಮಾಡಿ ಜೀವನದಲ್ಲಿ ಯಶಸ್ಸು ಸಾಧಿಸಿದ ಅನೇಕರು ಬೀಡಿನಲ್ಲಿ ನನ್ನನ್ನು ಭೇಟಿಯಾಗಿ ತಾವು ಕಲಿತ ಶಿಕ್ಷಣದಿಂದ ಬದುಕಿನಲ್ಲಿ ಸಫಲತೆ ಕಂಡುಕೊಂಡಿದ್ದೇವೆ ಎಂದು ಅಭಿಮಾನಪೂರ್ವಕವಾಗಿ ಹೇಳಿದಾಗ ನನಗೆ ಅತೀವ ಸಂತೋಷವಾಗುತ್ತದೆ.
ಕಾಯಕದಲ್ಲಿ ಶ್ರದ್ಧೆ, ನಿಷ್ಠ್ಠೆ ಮತ್ತು ಪ್ರಾಮಾಣಿಕತೆ ಇದ್ದರೆ ಅದು ವ್ಯಕ್ತಿತ್ವವನ್ನು ರೂಪಿಸುತ್ತದೆ. ಶ್ರಮಿಸುವ ಕೈಗಳಿಗೆ ಗೌರವ ನೀಡುವ ಸಮಾಜವೇ ಶ್ರೇಷ್ಠ ಸಮಾಜ. ಆದುದರಿಂದ ಪ್ರತಿಯೊಬ್ಬರೂ ತಮ್ಮ ಕಾಯಕವನ್ನು ಧರ್ಮದ ದಾರಿಯಲ್ಲಿ, ಸೇವೆಯ ಭಾವದಿಂದ ನಿರ್ವಹಿಸಿದರೆ, ಅದು ಕೇವಲ ವ್ಯಕ್ತಿಗತ ಯಶಸ್ಸಿಗೆ ಮಾತ್ರವಲ್ಲದೆ ಸಮಾಜದ ಸರ್ವಾಗೀಣ ಏಳಿಗೆಗೂ ಕಾರಣವಾಗುತ್ತದೆ. ಕಾಯಕದಲ್ಲಿ ಅಡಗಿರುವ ಆರಾಧನೆಯನ್ನು ಅರಿತಾಗಲೇ ಮಾನವ ಜೀವನ ಸಾರ್ಥಕವಾಗುತ್ತದೆ.