

ನವೀನ್ಶೆಟ್ಟಿ ಕೆರಾಡಿ, ಆನೇಕಲ್
ಹೌದು...ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾರಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಂಪೌಂಡ್ ಸುತ್ತಮುತ್ತ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ಗಬ್ಬು ನಾರುತ್ತಿದೆ. ಸಾರ್ವಜನಿಕರು ಹಾಗೂ ರೋಗಿಗಳು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದು, ಈ ಅವ್ಯವಸ್ಥೆಯು ಹೊಸರೋಗವನ್ನು ಅಂಟಿಸುವಂತಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುವ ಬದಲು ಇನ್ನೊಂದು ಸೋಂಕಿಗೆ ಈಡಾಗುವ ಭಯ ಜನರಲ್ಲಿದೆ.
ಆರೋಗ್ಯ ಕೇಂದ್ರದ ಮುಂದೆ ಹಾಗೂ ಕಾಂಪೌಂಡ್ನ ಎಡಭಾಗದಲ್ಲಿ ಅಪಾರ ಪ್ರಮಾಣದ ತ್ಯಾಜ್ಯ ಸುರಿಯಲಾಗಿದ್ದು, ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಓಡಾಡಬೇಕಿದೆ. ಗಾಳಿ ಬೀಸಿದಾಗ ಕಸ ಹಾಗೂ ತ್ಯಾಜ್ಯ ಆಸ್ಪತ್ರೆಯ ಕಾಂಪೌಂಡ್ ಒಳಗೆ ಹಾರಿಬರುತ್ತದೆ. ಹಾರಗದ್ದೆ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ಪ್ರತಿದಿನ ಇದೇ ಪ್ರದೇಶದಲ್ಲಿ ಸಂಚರಿಸುತ್ತಾರೆ. ಆದರೂ ಆಸ್ಪತ್ರೆಯ ಎದುರಿನ ಕಸದ ರಾಶಿ ಅವರ ಗಮನಕ್ಕೆ ಬಂದಿಲ್ಲವೇ ಎಂಬ ಪ್ರಶ್ನೆ ಸ್ಥಳಿಯರನ್ನು ಕಾಡುತ್ತಿದೆ. ಕಸ ತೆರವುಗೊಳಿಸಿ, ಸ್ವಚ್ಛತೆ ಕಾಪಾಡಿ ಎಂದು ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆಸ್ಪತ್ರೆಗೆ ಪ್ರತಿನಿತ್ಯ ಬರುವ ರೋಗಿಗಳು ಹಾಗೂ ಅವರ ಸಂಬಂಧಿಕರು ಔಷಧ ಜತೆಗೆ ರೋಗವನ್ನೂ ಕೊಂಡೊಯ್ಯುವಂತಾಗಿದೆ. ತ್ಯಾಜ್ಯದ ದುರ್ನಾತ ಮತ್ತು ಅನೈರ್ಮಲ್ಯದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕಸದ ರಾಶಿಯಿಂದ ಸೊಳ್ಳೆ, ನೊಣ ಹಾಗೂ ಇತರ ಕೀಟಗಳ ಹಾವಳಿ ಹೆಚ್ಚಿದೆ. ಆರೋಗ್ಯ ಕೇಂದ್ರದ ಸುತ್ತಮುತ್ತಲೇ ಇಂತಹ ಅನೈರ್ಮಲ್ಯ ವಾತಾವರಣ ನಿಮಾರ್ಣವಾಗಿರುವುದು ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಆರೋಗ್ಯ ಕಾಪಾಡಬೇಕಾದ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರೇ ಕಸದ ರಾಶಿ ಬಿದ್ದಿರುವುದು ಅಧಿಕಾರಿಗಳ ರ್ನಿಲಕ್ಷ$್ಯವನ್ನು ತೋರಿಸುತ್ತಿದೆ.ತಕ್ಷಣವೇ ಹಾರಗದ್ದೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಸದ ರಾಶಿಯನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು. ಆಸ್ಪತ್ರೆಯ ಸುತ್ತಮುತ್ತ ನಿಯಮಿತವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳುವುದರ ಜತೆಗೆ ಮುಂದಿನ ದಿನಗಳಲ್ಲಿ ಇಲ್ಲಿ ಕಸ ಸುರಿಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.
ಸರ್ಕಾರಿ ಆಸ್ಪತ್ರೆ ಸುತ್ತಮುತ್ತ ಸ್ಥಳಿಯರು ಕಸ ಹಾಕಿದ್ದಾರೆ. ಆಸ್ಪತ್ರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜತೆ ಚರ್ಚಿಸಿ ತೆರವು ಮಾಡಲಾಗುವುದು.
— > ಮುನಿರಂಗಪ್ಪ ಹಾರಗದ್ದೆ ಗ್ರಾಮ ಪಂಚಾಯಿತಿ ಪಿಡಿಒ