ಚಿಕ್ಕನಾಯಕನಹಳ್ಳಿಯಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು ರಾಗಿ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ರಾಗಿ ಖರೀದಿ ಕೇಂದ್ರ ಉದ್ಘಾಟಿಸಿದರು. ಜಿಲ್ಲಾ ವ್ಯವಸ್ಥಾಪಕ ತನ್ವಿರ್ ನಿಟ್ಟೂರು, ಎಪಿಎಂಸಿ ವ್ಯವಸ್ಥಾಪಕ ನಾಗೇಂದ್ರಕುಮಾರ್, ರೈತ ಮುಖಂಡರಾದ ತೋಂಟಾರಾದ್ಯ, ಆಹಾರ ಇಲಾಖೆ ಶಿರಸ್ತೆದಾರ್ ಕಿರಣ್ ಕುಮಾರ್, ನಿರೀಕ್ಷಕ ಪ್ರಜ್ವಲ್ ಇದ್ದರು.
ಚಿಕ್ಕನಾಯಕನಹಳ್ಳಿ: ಎಲ್ಲರ ರೀತಿಯಲ್ಲಿ ರೈತರು ಒಂದು ವರ್ಷ ಬೆಳೆ ಬೆಳೆಯುವುದಿಲ್ಲ, ಉಳುಮೆ ಮಾಡುವುದಿಲ್ಲವೆಂದು ಪ್ರತಿಭಟಿಸಿದರೆ ಮನುಷ್ಯ ಜೀವನವೇ ಕಂಗಾಲಾಗುತ್ತದೆ. ರೈತರ ನೆರವಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಪಂದಿಸುವ ಮೂಲಕ ಅವರ ಸಮಸ್ಯೆ ಬಗೆಹರಿಸಬೇಕು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ಉಪ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ಶುಕ್ರವಾರ ರಾಗಿ ಖರೀದಿಕೇಂದ್ರವನ್ನು ರಾಗಿ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗೆ ಸರಿಯಾದ ರೀತಿಯಲ್ಲಿ ಬೆಲೆ ಸಿಗುತ್ತಿಲ್ಲ ಅಂತಹ ಸಂದರ್ಭದಲ್ಲಿ ಸರ್ಕಾರಗಳು ನೆರವಾಗಬೇಕಾಗಿದೆ. ಪಟ್ಟಣದಲ್ಲಿ 50 ಲಕ್ಷ ವೆಚ್ಚದಲ್ಲಿ ಒಂದು ಸಿರಿಧಾನ್ಯ ಸಂಸ್ಕರಣಾ ಘಟಕವನ್ನು ಪ್ರಾರಂಭಿಸಲಾಗಿದೆ. ಚಿಕ್ಕನಾಯಕನಹಳ್ಳಿ ಹಾಗೂ ಹುಳಿಯಾರು ಎರಡು ಎಪಿಎಂಸಿಗಳಲ್ಲೂ ಸುಮಾರು 3 ಲಕ್ಷ ಚೀಲಗಳು ಲಭ್ಯವಾಗಿದ್ದು, ಖರೀದಿ ಪ್ರಾರಂಭಿಸಿದ ನಂತರ ನಿರಂತರವಾಗಿ ಖರೀದಿಯಾಗುವಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು.
ತಹಸೀಲ್ದಾರ್ ಮಮತಾ ಮಾತನಾಡಿ, ರೈತರು ಯಾವುದೇ ಗೊಂದಲ ಮಾಡಿಕೊಳ್ಳದೇ ಸರಿಯಾದ ರೀತಿಯಲ್ಲಿ ರಾಗಿಯನ್ನು ತೆಗೆದುಕೊಂಡುಬಂದು ಸರತಿ ಸಾಲಿನಲ್ಲಿ ಸಲ್ಲಿಸಿ ನಿಮಗಾಗಿ ಅಧಿಕಾರಿಗಳು ಇದ್ದು ಇಲ್ಲಿ ಕುಡಿಯುವ ನೀರು ನೆರಳಿನ ವ್ಯವಸ್ಥೆಯನ್ನು ಮಾಡುತ್ತೇವೆ. ನೀವು ಗುಣಮಟ್ಟದ ರಾಗಿಯನ್ನು ಮಾರಾಟ ಮಾಡಿ ಸಹಕರಿಸಿ, ಈಗಾಗಲೇ ನೊಂದಣಿಯಾಗಿರುವವರಿಂದ ಮಾತ್ರ ಖರೀದಿ ಮಾಡಲಾಗುವುದು ಎಂದರು.
ರೈತಸಂಘದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಮಾತನಾಡಿ, ಈಗಾಗಲೇ ಸರ್ಕಾರ ಈ ಖರೀದಿಯನ್ನು ಒಂದು ತಿಂಗಳ ಮುಂಚೆಯೇ ಮಾಡಬೇಕಿತ್ತು. ಈಗಾಗಲೇ ತಡವಾಗಿದೆ ಇನ್ನು ಮಳೆಗಾಲ ಪ್ರಾರಂಭವಾದರೆ ರೈತರಿಗೆ ಗೊಬ್ಬರ, ಉಳುಮೆಗಾಗಿ ಬಿತ್ತನೆ ಬೀಜಕ್ಕಾಗಿ ಹಣದ ಅವಶ್ಯಕತೆ ಇರುತ್ತದೆ. ಅದ್ದರಿಂದ ರಾಗಿ ಖರೀದಿ ಮಾಡಿದ ತಕ್ಷಣವೇ 2-3 ದಿನಗಳಲ್ಲಿ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು ಎಂದರು.