ರೈತರ ಕಾಳಜಿಯಿದ್ದರೆ ಬೆಂಬಲ ಬೆಲೆ ನಿಗದಿಪಡಿಸಿ / DEVANAHALLI
ದೇವನಹಳ್ಳಿ ತಾಲೂಕು ಸಂಘದ ಕಚೇರಿಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ರೈತರ ದಿನಾಚರಣೆಯಲ್ಲಿ ರಾಜ್ಯ ಯುವ ಘಟಕದ ಅಧ್ಯಕ್ಷ ಡಾ.ಬಿ.ಕೆ.ವಿನೋದಕುಮಾರಗೌಡ, ಡಾ.ಎನ್.ಚಂದ್ರಶೇಖರ್, ಮುನಿರಾಜು ಅಪ್ಪಯ್ಯ, ಬಿ.ಎನ್.ಕೃಷ್ಣಪ್ಪ ಇದ್ದರು.
ದೇವನಹಳ್ಳಿ : ಸರ್ಕಾರಗಳು ಮಾತಿಗಷ್ಟೇ ರೈತರ ಪರ ಇದ್ದೇವೆ ಎನ್ನುತ್ತಾರೆ. ಅವರ ಒಲವು ಏನಿದ್ದರೂ ಕಾಪೋರ್ರೇಟ್ ಕಂಪನಿಗಳತ್ತ. ಇವರಿಗೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದ್ದಲ್ಲಿ ಎಲ್ಲ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸಲಿ. ಆಗ ರೈತ ದಿನಾಚರಣೆ ಆಚರಿಸಿದರೆ ಅದಕ್ಕೊಂದು ಅರ್ಥ ಬರುತ್ತದೆ ಎಂದು ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಡಾ.ಬಿ.ಕೆ.ವಿನೋದಕುಮಾರಗೌಡ ಹೇಳಿದರು.
ಪಟ್ಟಣದ ತಾಲೂಕು ಸಂಘದ ಕಚೇರಿಯಲ್ಲಿ ಏರ್ಪಡಿಸಿದ್ದ ರೈತರ ದಿನಾಚರಣೆಯಲ್ಲಿ ಮಾತನಾಡಿದ ಅವರು, ರೈತರಿಗೆ ಆಧುನಿಕ ಕೃಷಿ ಪದ್ಧತಿ ತರಬೇತಿ, ಯಾವ ಮಣ್ಣಿನಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬುವುದರ ಸಮಗ್ರ ಮಾಹಿತಿ, ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಬೇಕು. ರೈತರಿಗೆ ವಿಮಾ ಸೌಲಭ್ಯ ಸರಿಯಾಗಿ ತಲುಪುತ್ತಿಲ್ಲ. ಚೆಕ್ ಡ್ಯಾಂ ರಾಜಕಾಲುವೆಗಳನ್ನು ಮುಚ್ಚಿದ್ದಾರೆ. ಇವೆಲ್ಲದರ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಡಾ.ಮುನಿರಾಜು ಅಪ್ಪಯ್ಯ ಮಾತನಾಡಿ, ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಜನ್ಮದಿನದ ಪ್ರಯುಕ್ತ ದೇಶದೆಲ್ಲೆಡೆ ಕಿಸಾನ್ ದಿವಸ್ ಆಚರಿಸುವ ಮೂಲಕ ಅನ್ನದಾತರನ್ನು ಸ್ಮರಿಸಲಾಗುತ್ತಿದೆ ಎಂದರು.
ಕಸಾಪ ಜಿಲ್ಲಾ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ಮಾತನಾಡಿ, ಭೂಮಿ ಲವತ್ತತೆ ಹೆಚ್ಚಿಸಲು ಸಾವಯವ ಕೃಷಿಗೆ ಆದ್ಯತೆ ನೀಡಬೇಕು. ಮಣ್ಣಿನ ಫಲವತ್ತತೆ ಜತೆಗೆ ರೈತರು ಹವಾಮಾನ ಆಧಾರಿತವಾಗಿ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಅನುಕೂಲವಾಗುತ್ತದೆ ಎಂದರು.
ರಾಜ್ಯ ಗೌರವಾಧ್ಯಕ್ಷ ಡಾ.ಎನ್.ಚಂದ್ರಶೇಖರ್ ಮಾತನಾಡಿ, ದೇಶ ಕಾಯುವ ಯೋಧರಿಗೆ ಹೇಗೆ ಗೌರವ ನೀಡುತ್ತೇವೆಯೋ ಅದೇ ರೀತಿ ರೈತರಿಗೂ ಗೌರವ ನೀಡಬೇಕು. ರೈತರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಜಯಶಂಕರ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷೆ ರಾಜೇಶ್ವರಿ, ಸಾಹಿತಿ ಶರಣಯ್ಯ ಹಿರೇಮಠ್, ರೈತ ಸಂಘದ ಪದಾಧಿಕಾರಿಗಳಾದ ಗಯಾಜ್, ಬಾಬು, ಮಂಜುನಾಥ್, ಮುನಿಶಾಮಪ್ಪ, ಬೈರೆಗೌಡ, ಕೃಷ್ಣಪ್ಪ, ದೈಹಿಕ ಶಿಕ್ಷಕ ಪುಟ್ಟಸ್ವಾಮಿ ಇತರರಿದ್ದರು.