ಪಬ್, ಬಾರ್ ಪ್ರವೇಶಕ್ಕಿನ್ನು ಐಡಿ ಕಡ್ಡಾಯ! ಅಷ್ಟಕ್ಕೂ ವರದಿಯಲ್ಲಿರುವುದೇನು?

ಪಬ್, ಬಾರ್ ಪ್ರವೇಶಕ್ಕಿನ್ನು ಐಡಿ ಕಡ್ಡಾಯ
ಪಬ್, ಬಾರ್ ಪ್ರವೇಶಕ್ಕಿನ್ನು ಐಡಿ ಕಡ್ಡಾಯ
Published on

ಬೆಂಗಳೂರು: ನಗರದ ಪ್ರತಿ ಮೂವರು ವಿದ್ಯಾರ್ಥಿಗಳಲ್ಲಿ ಓರ್ವ ಮದ್ಯ ಮತ್ತು ತಂಬಾಕು ವ್ಯಸನಿಯಾಗಿದ್ದಾನೆಂಬ ಆತಂಕಕಾರಿ ವರದಿ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಪ್ರಾಪ್ತರಿರುವ ಸ್ಥಳಕ್ಕೆ ಮದ್ಯ ಸರಬರಾಜು ಹಾಗೂ ಪೂರೈಸುವುದನ್ನು ನಿರ್ಬಂಧಿಸುವ ಜತೆಗೆ ಪಬ್, ಬಾರ್, ಕ್ಲಬ್, ಲಾಂಜ್, ರೆಸ್ಟೋರೆಂಟ್​ಗಳಿಗೆ ಬರುವವರ ವಯಸ್ಸು ದೃಢಪಡಿಸುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪರಿಶೀಲಿಸಲು ಮಾರ್ಗಸೂಚಿ ಹೊರಡಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ ನೀಡಿದ್ದಾರೆ.

ಬೆಂಗಳೂರಿನಲ್ಲಿ ಹದಿಹರೆಯದವರು ಮತ್ತು ಯುವ ಜನರಲ್ಲಿ ಹೆಚ್ಚುತ್ತಿರುವ ಮದ್ಯಪಾನ ಮತ್ತು ಮಾದಕ ದ್ರವ್ಯ ಬಳಕೆ ಕುರಿತಂತೆ 4 ಶಿಕ್ಷಣ ಸಂಸ್ಥೆಗಳು ಪದವಿ ಪೂರ್ವ (ಪಿಯುಸಿ), ಪದವಿ ಮತ್ತು ಉನ್ನತ ಪ್ರೌಢ ತರಗತಿಗಳ 4,093 ವಿದ್ಯಾರ್ಥಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇದರಲ್ಲಿ ಪ್ರತಿ ಮೂವರು ಅಪ್ರಾಪ್ತರಲ್ಲಿ ಒಬ್ಬ ಮದ್ಯ ಅಥವಾ ತಂಬಾಕು ಬಳಕೆ ಮಾಡಿ ಆರೋಗ್ಯ ಸಮಸ್ಯೆಗೆ ಒಳಗಾಗಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

"

ಮಕ್ಕಳು ಮತ್ತು ಯುವ ಜನರನ್ನು ಮದ್ಯ ಮತ್ತು ಡ್ರಗ್ಸ್ ದುರಭ್ಯಾಸದಿಂದ ರಕ್ಷಿಸಬೇಕಾಗಿದೆ. ವಾಣಿಜ್ಯ ಸಂಸ್ಥೆಗಳು ಯುವ ಪೀಳಿಗೆಯ ಸುರಕ್ಷತೆ ಮತ್ತು ಭವಿಷ್ಯವನ್ನು ಬದಿಗಿಟ್ಟು ಕೇವಲ ಲಾಭ ಗಳಿಕೆಗೆ ಆದ್ಯತೆ ನೀಡಲು ಸಾಧ್ಯವಿಲ್ಲ. ಐಡಿ ಇಲ್ಲದಿದ್ದರೆ ಪ್ರವೇಶವಿಲ್ಲ. ಅಪ್ರಾಪ್ತರಿಗೆ ಮದ್ಯ ಸೇವನೆಗೆ ಕುಮ್ಮಕ್ಕು ನೀಡುವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ.

— | ಪ್ರಿಯಾಂಕ್ ಖರ್ಗೆ ಗೃಹ ಸಚಿವ
ವರದಿಯಲ್ಲಿರುವುದೇನು?

ಅಧ್ಯಯನದ ಪ್ರಕಾರ, ಸಮೀಕ್ಷೆಗೆ ಒಳಪಟ್ಟ ಯುವಕರಲ್ಲಿ ಶೇ.33 ಮಂದಿ ಮದ್ಯ ಸೇವಿಸಿದ್ದರೆ, ಶೇ. 18 ಮಂದಿ ತಂಬಾಕು ಚಟಕ್ಕೆ ದಾಸರಾಗಿದ್ದಾರೆ. ಇದು ತಂಬಾಕು ಬಳಕೆಯ ರಾಷ್ಟ್ರೀಯ ಸರಾಸರಿ (ಶೇ. 8.7) ಮತ್ತು ಮದ್ಯಪಾನದ ರಾಷ್ಟ್ರೀಯ ಸರಾಸರಿಗಿಂತ (ಶೇ. 7.9) ಗಣನೀಯವಾಗಿ ಹೆಚ್ಚಾಗಿದೆ. ಅಷ್ಟೇ ಅಲ್ಲದೆ, ಇದು ರಾಜ್ಯದ ಒಟ್ಟಾರೆ ಸರಾಸರಿ ಶೇ.4.7(ತಂಬಾಕು) ಮತ್ತು ಶೇ. 8.5ಕ್ಕಿಂತಲೂ (ಮದ್ಯಪಾನ) ತೀರಾ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಹದಿಹರೆಯದವರು ಮದ್ಯಪಾನ ಮಾಡಲು ಪ್ರಾರಂಭಿಸುವ ಸರಾಸರಿ ವಯಸ್ಸು 17 ವರ್ಷವಾಗಿದ್ದು, ಕೆಲವರು 8 ವರ್ಷದಲ್ಲೇ ಮದ್ಯ ಸೇವಿಸಲು ಆರಂಭಿಸಿದ್ದಾರೆ ಎಂದು ವರದಿಯಲ್ಲಿ ಬೆಳಕಿಗೆ ಬಂದಿದೆ. 

ಅಪ್ರಾಪ್ತ ವ್ಯಸನಿಗಳು ಹೆಚ್ಚುತ್ತಿರುವ ಮಾಹಿತಿ ಪಡೆದ ಪ್ರಿಯಾಂಕ್ ಖರ್ಗೆ, ಅಪ್ರಾಪ್ತರ ಮದ್ಯಪಾನವನ್ನು ಕೇವಲ ಪರವಾನಗಿ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸದೆ ಯುವಕರ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯದ ಗಂಭೀರ ಕಾಳಜಿ ಎಂದು ಪರಿಗಣಿಸಬೇಕೆಂದು ಪೊಲೀಸರಿಗೆ ಸೂಚಿಸಿದ್ದಾರೆ. ಮದ್ಯ ಸರಬರಾಜು ಮಾಡುವ ಎಲ್ಲ ಸಂಸ್ಥೆಗಳು ಪ್ರವೇಶ ದ್ವಾರದಲ್ಲಿ ಮತ್ತು ಮದ್ಯ ನೀಡುವ ಮೊದಲು ಕಟ್ಟುನಿಟ್ಟಾದ ವಯಸ್ಸಿನ ಪರಿಶೀಲನಾ ನಿಯಮಗಳನ್ನು ಜಾರಿಗೆ ತರಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net