ನುಡಿದಂತೆ ನಡೆಯುವೆ ಜನರಿಗಾಗಿ ದುಡಿಯುವೆ...ಶತದಿನದ ಹೊಸ್ತಿಲಲ್ಲಿ ಸಿಎಂ ಮನದಿಂಗಿತ: ಪ್ರಧಾನಿ ಹೃದಯಶ್ರೀಮಂತಿಕೆ ಬಗ್ಗೆ ಡಿಕೆಶಿ ಹೇಳಿದ್ದೇನು..?

DK SHIVAKUMAR | ಶತದಿನದ ಹೊಸ್ತಿಲಲ್ಲಿ ಸಿಎಂ ಡಿ.ಕೆ.ಶಿವಕುಮಾರ್​ ಮನದಿಂಗಿತ
DK SHIVAKUMAR | ಶತದಿನದ ಹೊಸ್ತಿಲಲ್ಲಿ ಸಿಎಂ ಡಿ.ಕೆ.ಶಿವಕುಮಾರ್​ ಮನದಿಂಗಿತ
Published on
ಬೆಂಗಳೂರು: ಡಿ.ಕೆ.ಶಿವಕುಮಾರ್​ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ನೂರು ದಿನ ಪೂರೈಸಿದ್ದು, ಈ ಸಂದರ್ಭದಲ್ಲಿ ಸುದ್ದಿಮಾಧ್ಯಮಗಳ ಸಂಪಾದಕರ ಜತೆ ಸಂವಾದ ನಡೆಸಿ, ತಮ್ಮ ನೂರು ದಿನಗಳ ಹೆಜ್ಜೆಗುರುತು, ಭವಿಷ್ಯದ ಚಿಂತನೆಗಳನ್ನು ತೆರೆದಿಟ್ಟರು. ತಮ್ಮೆಡೆ ತೂರಿಬಂದ ಹತ್ತಾರು ಪ್ರಶ್ನೆಗಳಿಗೆ ಸಾವಧಾನವಾಗಿ ಉತ್ತರಿಸುತ್ತಲೇ, ಆರೋಗ್ಯ ಸಹಕರಿಸಿದರೆ ಇನ್ನೂ 15 ವರ್ಷ ರಾಜಕೀಯದಲ್ಲಿರುವ ಇಂಗಿತ ವ್ಯಕ್ತಪಡಿಸಿದರು.
ಆರ್ಥಿಕ ಪರಿಸ್ಥಿತಿ ಅರಿವಿದ್ದೇ ಘೋಷಣೆ: ಕಳೆದ ನೂರು ದಿನಗಳಲ್ಲಿ ಅನೇಕ ಯೋಜನೆ ಘೋಷಿಸಿದ್ದೇನೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಗಮನದಲ್ಲಿ ಇಟ್ಟುಕೊಂಡೇ ಘೋಷಣೆ ಮಾಡಿದ್ದೇನೆ. ಯಾವುದನ್ನು ಅನುಷ್ಠಾನ ಮಾಡಲು ಸಾಧ್ಯವೋ ಅದನ್ನೇ ಘೋಷಣೆ ಮಾಡಿದ್ದೇನೆ. ನುಡಿದಂತೆ ನಡೆಯಬೇಕು. ಇಲ್ಲವಾದರೆ ಎಲ್ಲರ ಎದುರು ನಗೆಪಾಟಲಿಗೀಡಾಗುತ್ತೇನೆ ಎಂಬ ಅರಿವಿದೆ. ಅನೇಕ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಲಾಗಿದೆ. ಒಸಿ, ಸಿಸಿಯದ್ದೇ ತೆಗೆದುಕೊಂಡರೆ ಒಂದು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ವಸತಿ ಕಟ್ಟಡಗಳದ್ದು ತೀರ್ಮಾನಿಸಲಾಗಿದೆ, ವಾಣಿಜ್ಯದ್ದೂ ಪರಿಗಣಿಸಿದರೆ ಬೇರೆ ರೀತಿ ಆಗುತ್ತದೆ. ಇನ್ನು ಭೂ ಗ್ಯಾರಂಟಿ ಕೂಡ ಕೊಡಲಾಗಿದೆ.
ಹೊರ ರಾಜ್ಯದವರಿಗೇಕೆ ಗ್ಯಾರಂಟಿ: ಶಕ್ತಿ ಯೋಜನೆಯಡಿ ಫಲಾನುಭವಿಗಳಿಗೆ ಕಾರ್ಡ್​ ಕೊಡಲು ತೀರ್ಮಾನ ಮಾಡಿದ್ದೇವೆ. ಆ ಕಾರ್ಡ್​ ಸ್ಕಾನ್​ ಮಾಡಿ ಓಡಾಡಲಿ. ಸುಮಾರು ಇಲ್ಲೇ ಹೆಚ್ಚುಕಮ್ಮಿ 14 ಲಕ್ಷ ಜನ ಹೊರಗಡೆಯವರು ಬಂದು ಫ್ರೀಯಾಗಿ ಓಡಾಡ್ತಾರೆ. ಹೊರ ರಾಜ್ಯದವರಿಗೆ ಯಾಕೆ ನಾನು ಉಚಿತ ಅವಕಾಶ ಕೊಡಲಿ? ಹೊರ ರಾಜ್ಯದವರಿಗೆ ಏಕೆ ಕರೆಂಟ್​ ಉಚಿತವಾಗಿ ಕೊಡಬೇಕು? ಅದಕ್ಕಾಗಿ ಪರಿಷ್ಕರಣೆಯೂ ನಡೆಯುತ್ತಿದೆ. ಹೀಗೆ ಒಂದೊಂದು ಸಣ್ಣ ವಿಚಾರದಲ್ಲಿ ತೀರ್ಮಾನ ಮಾಡಲಾಗುತ್ತಿದೆ. ಗಟ್ಟಿ ತೀರ್ಮಾನ ಮಾಡದೆ ಹೋದರೆ ನನ್ನ ಕಾಲಿ ಡಬ್ಬ ಅಂದುಬಿಡ್ತಾರೆ ಎಂಬುದು ತಿಳಿದಿದೆ.
ಟನಲ್​ ರಸ್ತೆ ಯಾರಿಗೋಸ್ಕರ?: ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರವಾಗಿ ಟನಲ್​ ರೋಡ್​ ಮಾಡಲು ಎಷ್ಟೆಲ್ಲ ತಡೆಗಳು. ಪಾರ್ಕ್​ನ ಯಾವುದೋ ಮೂಲೆಯಲ್ಲಿ ಒಂದು ಜಾಗ ಬಳಕೆ ಮಾಡುವುದಕ್ಕೂ ಆಕ್ಷೇಪ. ಅಲ್ಲೊಂದು ಸಣ್ಣ ಬಂಡೆ ತೆಗೆಯಬೇಕಾಗಿತ್ತಷ್ಟೆ. ಬೇರೆ ಕಟ್ಟಡ ಒಡೆದು ಹಾಕಲು ಆಗುತ್ತಾ? ಅಂದಹಾಗೆ ಈ ಟನಲ್​ ರೋಡ್​ ಯಾರಿಗೋಸ್ಕರ? ನಾನು ಇಡೀ ಪ್ರಪಂಚ ನೋಡಿದ್ದೀನಿ. ಮಹಾರಾಷ್ಟ್ರದಲ್ಲಿ 7 ಟನಲ್​ ರೋಡ್​ ಮಾಡಲು ಹೊರಟಿದ್ದಾರೆ. ನಮ್ಮ ಡಾಕ್ಯುಮೆಂಟ್​ ತೆಗೆದುಕೊಂಡು ಕೆಲವು ರಾಜ್ಯದಲ್ಲಿ ಅನುಷ್ಠಾನ ಮಾಡುತ್ತಿದ್ದಾರೆ. ಯಾವ ಕಾರಣಕ್ಕೂ ಏನೂ ನಿಲ್ಲೋಕೆ ಸಾಧ್ಯ ಇಲ್ಲ. ಈಗಾಗಲೇ ಅದಕ್ಕೆ ಬಿಲ್ಟ್​ ಆಪರೇಟ್​ ಟ್ರಾನ್ಸ್ಫರ್​ ಪ್ರಕಾರ ನಡೆಸಲು ತೀರ್ಮಾನಿಸಲಾಗಿದೆ. ಬರೀ 4,000 ಕೋಟಿ ರೂಪಾಯಿ ಮಾತ್ರ ಸರ್ಕಾರ ಕೊಡಲಿದೆ. ಮಿಕ್ಕಿದ್ದು ಅವರೇ ಬಂಡವಾಳ ಹಾಕುತ್ತಾರೆ, 25-30 ವರ್ಷ ನಿರ್ವಹಿಸುತ್ತಾರೆ. ದುಡ್ಡು ಇರುವವನು ಟನಲ್​ನಲ್ಲಿ ಓಡಾಡ್ತಾನೆ. ದುಡ್ಡಿಲ್ಲದವನು ಮಾಮೂಲಿ ಮೇಲಿನ ರೋಡಲ್ಲಿ ಓಡಾಡ್ತಾನೆ. 300-400 ಕಟ್ಟಬೇಕು, ದುಡ್ಡುಕೊಡಲು ಸಿದ್ಧ ಇರುವವನು ಯಾಕೆ ಅವನ ಸಮಯ ವ್ಯರ್ಥ ಮಾಡಿಕೊಳ್ಳುತ್ತಾನೆ. ಕನಿಷ್ಠ ಒಂದು ಗಂಟೆ ಉಳಿಸುತ್ತಾನೆ.

ನಿದ್ರೆಗೆ ಕಡಿಮೆ ಸಮಯ

ಎರಡು ದಿನಗಳ ಹಿಂದೆ ರಾತ್ರಿ ಎರಡು ಗಂಟೆಗೆ ಮಲಗಿದೆ, ಬೆಳಗ್ಗೆ ಐದುಕಾಲು ಗಂಟೆಗೆ ಎದ್ದು ಎಪಿಎಂಸಿ ವಿಸಿಟ್​ ಮಾಡಿದೆ. ಒಂಬತ್ತು ಮುಕ್ಕಾಲಿಗೆ ಮುಗಿಸಿಬಂದೆ. ಮೊದಲ ಬಾರಿಗೆ ಮಧ್ಯಾಹ್ನ ದೈಹಿಕವಾಗಿ ವ್ಯತ್ಯಾಸ ಕಾಣಿಸಿತು. ಕಳೆದ 5-6 ವರ್ಷದಿಂದ ನಿದ್ರೆಯ ಅವಧಿ ಬಹಳ ಕಡಿಮೆಯಾಗಿದೆ. ಪಕ್ಷದ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಕನಿಷ್ಠ ಐದಾರು ತಾಸು ವಿಶ್ರಾಂತಿಯೂ ಆಗುತ್ತಿಲ್ಲ. ಗುರಿ ಮುಟ್ಟಬೇಕೆಂಬ ಪ್ರಯತ್ನ ನನ್ನದು. ಪ್ರತಿದಿನ ರಾತ್ರಿ 2 ಗಂಟೆವರೆಗೆ ಯಾರದ್ದಾದರೂ ಭೇಟಿ ಇದ್ದೇ ಇರುತ್ತದೆ, ತೀರ್ಮಾನಗಳನ್ನು ಮಾಡಬೇಕಾಗುತ್ತದೆ. ಬೇರೆ ಕೆಲವರ ಹೆಸರು ಹೇಳಲು ಇಚ್ಛೆಪಡಲ್ಲ, ಬೆಳಗ್ಗೆ 10-11 ಗಂಟೆಗೆ ದಿನ ಶುರು ಮಾಡುತ್ತಾರಂತೆ, ರಾತ್ರಿ 8 ಗಂಟೆಗೆ ದಿನ ಮುಗಿಸುತ್ತಾರೆ. ನನ್ನ ವಿಚಾರದಲ್ಲಿ ನನ್ನ ಕುಟುಂಬ ಪೂರ್ಣ ಸಹಕಾರ ನೀಡುತ್ತಿದೆ. ಅದೇ ನನ್ನ ದೊಡ್ಡ ಶಕ್ತಿ. ನನಗೆ ಯಾವುದು ಬೇರೆ ಅಭ್ಯಾಸ ಮತ್ತೊಂದು ಇಲ್ಲ, ನನಗೆ ರಾಜಕೀಯನೇ ನನ್ನ ದೊಡ್ಡ ಅಭ್ಯಾಸ.
ಸವಾಲುಗಳು ಹಲವಿವೆ: ಕಾಲಾವಧಿ ಕಡಿಮೆ ಇದೆ ಎಂಬ ಅರಿವಿದೆ. ಹಾಗೆಯೇ, ನಮ್ಮದು ಡಿಕ್ಟೇಟರ್​ಶಿಪ್​ ಸರ್ಕಾರವಲ್ಲ, ಡೆಮಾಕ್ರಟಿಕ್​ ಸರ್ಕಾರ. ಒಂದು ಕಡೆ ಕಾರ್ಯಾಂಗ, ಮತ್ತೊಂದೆಡೆ ನ್ಯಾಯಾಂಗ, ಮಾಧ್ಯಮ. ಯಾವುದೇ ತೀರ್ಮಾನ ಮಾಡಿದರೂ ಪ್ರಶ್ನಿಸಲ್ಪಡುತ್ತದೆ. ಯಾವುದೇ ತೀರ್ಮಾನ ಮಾಡಬೇಕೆಂದಾಗಲೂ ಅಧಿಕಾರಿವೃಂದ ಅಷ್ಟು ಸುಲಭವಾಗಿ ಒಪ್ಪಲ್ಲ. ಯಾರೂ ಸಹ ರಿಸ್ಕ್​ ತೆಗೆದುಕೊಳ್ಳಲು ಸಿದ್ಧರಿಲ್ಲ. ನಮ್ಮ ಆಸೆ ಸಾವಿರ ಇರುತ್ತದೆ. ಆದರೆ, ಅದಕ್ಕೆ ಚೆಕ್​ ಅಂಡ್​ ಬ್ಯಾಲೆನ್ಸ್​ ಇರುತ್ತದೆ. ಇನ್ನು ರಾಜಕೀಯದಲ್ಲಿ ಮೇಲೇರುತ್ತಾರೆಂದು ಕಾಲು ಎಳೆಯುವುದು ಸಹಜ. ಇದಕ್ಕೆ ದೊಡ್ಡ ಸಮಯಹೋಗುತ್ತದೆ. ಆಮೇಲೆ, ನ್ಯಾಯಾಂಗ. ಯಾರು ಬೇಕಾದರೂ ಕೋರ್ಟ್​ಗೆ ಹೋಗಬಹುದು, ಒಂದು ತಡೆ ಕೊಟ್ಟರೂ ಮುಗೀತು. ಶಿವರಾಮ ಕಾರಂತ ಬಡಾವಣೆಯದ್ದೇ ತೆಗೆದುಕೊಂಡರೆ 20 ವರ್ಷ ಆಗಿದೆ. ಪ್ರತಿಪಕ್ಷದ ವಿಚಾರಕ್ಕೆ ಬಂದರೆ ಅವರನ್ನು ಯಾವುದೇ ಕಾರಣಕ್ಕೆ ಸರಿಪಡಿಸಲು ಆಗಲ್ಲ. ನಾಯಿ ಬಾಲ ಡೊಂಕೆ. ನಾವು ಹೃದಯ ಬಿಚ್ಚಿ ಎಲ್ಲರೂ ಒಟ್ಟಾಗಿ ರಾಜ್ಯದ ಅಭಿವೃದ್ಧಿಗೆ ಹೋಗೋಣ ಎಂದರೂ ಅವರು ಸುಧಾರಿಸಲ್ಲ. ಹೀಗೆ ಬಹಳಷ್ಟು ಸವಾಲು ಇವೆ.
ಪಿಎಂ-ಸಿಎಂ ಮಾತುಕತೆ ಬಹಿರಂಗಪಡಿಸಲ್ಲ: ಮೈಸೂರಿನಲ್ಲಿ ಪ್ರಧಾನಿಯವರು ಕರೆದು ಮಾತನಾಡಿದರು. ಅದು ಅವರ ಹೃದಯಶ್ರೀಮಂತಿಕೆ. ಜನರ ಬಗ್ಗೆ ಮಾತನಾಡಿದೆವು, ದೇಶದ ಬಗ್ಗೆ ಮಾತನಾಡಿದೆವು, ವಿವೇಕಾನಂದರ ಬಗ್ಗೆ ಮಾತನಾಡಿದೆವು. ರಾಜ್ಯದಲ್ಲಿ ನನ್ನ ರೀತಿ ಯಾರೂ ಅವರ ಪಕ್ಷದಲ್ಲಿ ಇಲ್ಲ ಅನಿಸಿರಬೇಕು. ಅವರ ಪಕ್ಷದಲ್ಲಿ ಮೋದಿಯವರು ಯಾರ ಕೈ ಹಿಡಿದು, ಹೆಗಲ ಮೇಲೆ ಕೈ ಹಾಕಿ ಮಾತನಾಡಿದ್ದು ನೋಡಿಲ್ಲ. ಹಾಗೆಯೇ, ಒಬ್ಬ ಪ್ರಧಾನಿ-ಸಿಎಂ ನಡುವೆ ನಡೆದ ವಿಷಯ ಬಹಿರಂಗಪಡಿಸಲ್ಲ.
ಅದಾನಿ ಭೇಟಿ ಬಗ್ಗೆ ರಾಹುಲ್​ ಏನೂ ಕೇಳಿಲ್ಲ: ಅದಾನಿ ನನಗೆ ಬಹಳ ದಿನಗಳಿಂದಲೂ ಗೊತ್ತು. ವಿದ್ಯುತ್​, ಸಿಮೆಂಟ್​ ಸೇರಿ ವಿವಿಧ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಒಬ್ಬ ಉದ್ಯಮಿಯಾಗಿ ಅದಾನಿಯವರು ರಾಜ್ಯದ ಮುಖ್ಯಮಂತ್ರಿಯನ್ನು ಭೇಟಿ ಮಾಡಿದರು, ಬೇಡ ಎನ್ನಲು ಆಗುತ್ತದೆಯಾ? ಹಾಗೆಯೇ, ರಾಹುಲ್​ ಗಾಂಧಿಯವರು ಅದಾನಿ ಜತೆಗಿನ ಭೇಟಿಯ ಬಗ್ಗೆ ಏನನ್ನೂ ಕೇಳಿಲಿಲ್ಲ.
ವಿ ವಿಲ್​ ಕನ್ವಿನ್ಸ್ಡ್​ ದ ಪೀಪಲ್​!: ಗ್ಯಾರಂಟಿ ಅನುಷ್ಠಾನ ಯಶಸ್ವಿಯಾಗಿ ನಡೆದಿದೆ. ಅನೇಕ ರಾಜ್ಯಗಳಲ್ಲಿ ಘೋಷಣೆ ಮಾಡಿ ಮುಂದುವರಿಸಲು ಸಾಧ್ಯವಾಗಿಲ್ಲ, ನಿಲ್ಲಿಸಿದರು. ನಾವು ಹಾಗಲ್ಲ, ಅಭಿವೃದ್ಧಿಯನ್ನೂ ಮುಂದುವರಿಸಿಕೊಂಡು ಬಂದಿದ್ದೇವೆ. "ವಿ ವಿಲ್​ ಕನ್ವಿನ್ಸ್ಡ್​ ದ ಪೀಪಲ್​, ವಿ ವಿಲ್​ ನಾಟ್​ ಕನ್ಫ್ಯೂಸ್ಡ್​ ದಿ ಪೀಪಲ್​'. ಎಲ್ಲರಿಗೂ ವಿಶ್ವಾಸ ಬಂದಿದೆ.
ಶೇರ್​ ಕೇರ್​ ಅಷ್ಟೇ: ಪಾರ್ಕ್​ ಜಾಗ ಬಳಕೆ ಸೇರಿ ಯಾವುದೇ ವಿಚಾರದಲ್ಲಿ ನಮ್ಮ ಸರ್ಕಾರ ಯಾವುದೇ ಯುಟರ್ನ್​ ಹೊಡೆದಿಲ್ಲ. ನಾಡಿನ ಜನರ ಕುರಿತು ಶೇರ್​ ಮತ್ತು ಕೇರ್​ ಅಷ್ಟೇ. ಜನರ ಭಾವನೆಗಳಿಗೆ ಗೌರವ ಕೊಡಬೇಕು, ಕೊಟ್ಟಿದ್ದೇವೆ.
ಕಸದ್ದೊಂದು ದೊಡ್ಡ ಮಾಫಿಯಾ: ನಮ್ಮ ಮುಂದೆ ಸಮಸ್ಯೆಗಳು ಸಾಕಷ್ಟಿವೆ. ಅದನ್ನು ಪರಿಹಾರ ಮಾಡುವುದು ಸವಾಲಿನದ್ದು. ಬೆಂಗಳೂರು ಕಸದ ಟೆಂಡರ್​ ಅಂತಿಮಗೊಳಿಸಲು 15 ವರ್ಷದಿಂದ ಸಾಧ್ಯವಾಗುತ್ತಿಲ್ಲ. ಅದನ್ನು ಒಂದು ಹಂತಕ್ಕೆ ತರುವ ಪ್ರಯತ್ನ ಮಾಡಿದ್ದೇನೆ. ಕಾಂಗ್ರೆಸ್​, ಬಿಜೆಪಿ, ದಳದ ಸರ್ಕಾರ ಇರಲಿ. ಯಾರಿಂದಲೂ ಸಾಧ್ಯವಾಗಲಿಲ್ಲ. ಅದೊಂದು ದೊಡ್ಡ ಮಾಫಿಯಾ. ಇದೀಗ ಪ್ಯಾಕೇಜ್​ಗಳನ್ನು ಮಾಡಿ ಟೆಂಡರ್​ ಕೊಟ್ಟಿದ್ದೇನೆ. ಕೋರ್ಟ್​ ಮಧ್ಯಪ್ರವೇಶ ಸೇರಿ ಸಾಕಷ್ಟು ವಿಚಾರ ಇದೆ. ಈ ಹಿಂದೆ ವಿದ್ಯುತ್​ ಉತ್ಪಾದನೆ ಮಾಡುತ್ತೇನೆಂದು ಅನೇಕರು ಹೊರಟರು, ಯಾವುದೂ ಯಶಸ್ವಿಯಾಲಿಲ್ಲ. ಕೊನೆಗೆ ಬರಿ ಕೆಪಿಸಿಯವರು ಮಾತ್ರ ಇದ್ದಾರೆ. ಇನ್ನು ನಮ್ಮ ಶಾಸಕರು ತಮ್ಮ ಕ್ಷೇತ್ರದಲ್ಲಿ ಕಸ ತರದಂತೆ ಒತ್ತಡ ಹೇರುತ್ತಾರೆ. ಅವರ ಊರಿನ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಕೊಟ್ಟು ಒಪ್ಪಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net