ನಾಳೆ ಎಲ್ಲಾ ಸತ್ಯ ಬಿಚ್ಚಿಡುತ್ತೇನೆ: "ಈ ಕುಮಾರಸ್ವಾಮಿನ ಮುಟ್ಟೋಕೂ ಆಗಲ್ಲ!; ಪೊಲೀಸ್ ಕಮಿಷನರ್, ಪ್ರಿಯಾಂಕ್ ಖರ್ಗೆಗೆ ಹೆಚ್​ಡಿಕೆ ಸವಾಲ್​! HD Kumaraswamy

Siddaramaiah sting case, Kumaraswamy launches a scathing attack
ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣ, ಕುಮಾರಸ್ವಾಮಿ ವಾಗ್ದಾಳಿ
Published on: 

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ತಿರುವು ಪಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ 'ಸ್ಟಿಂಗ್ ಆಪರೇಷನ್' ಪ್ರಕರಣಕ್ಕೆ ಸಂಬಂಧಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಇನ್ನೊಮ್ಮೆ ಅಬ್ಬರಿಸಿದ್ದಾರೆ.

ಸರ್ಕಾರದ ವಿರುದ್ಧ ಮತ್ತೊಮ್ಮೆ ರಣಕಹಳೆ ಊದಿರುವ ಹೆಚ್‌ಡಿಕೆ, ಪೊಲೀಸ್ ಕಮಿಷನರ್ ಅವರಿಂದ ಹಿಡಿದು ಸಚಿವರ ತನಕ, ತಮ್ಮ ವಿರುದ್ಧ ಹೇಳಿಕೆ ನೀಡಿದ ಎಲ್ಲರನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. "ಈ ಸ್ಟಿಂಗ್ ಯಾರಿಗೆ ತಿರುಗುಬಾಣ ಆಗಲಿದೆ ಎಂಬುದನ್ನು ನಾಳೆ ಸಂಪೂರ್ಣ ದಾಖಲೆ ಸಮೇತ ಬಿಚ್ಚಿಡುತ್ತೇನೆ" ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

ಯಾರೀ ಅದು ಕಮಿಷನರ್? ಹೆಡ್ ಕ್ಲರ್ಕ್‌ಗಿಂತ ಕಡೆಯಾಗಿ ಮಾತಾಡ್ತಾರೆ!

ಸುದ್ದಿಗಾರರೊಂದಿಗೆ ಮಾತನಾಡುತ್ತಾ ನೇರವಾಗಿ ಬೆಂಗಳೂರು ಪೊಲೀಸ್ ಕಮಿಷನರ್ ವಿರುದ್ಧವೇ ಕೆಂಡ ಕಾರಿದ ಕುಮಾರಸ್ವಾಮಿ, "ಯಾರೀ ಅದು ಕಮಿಷನರ್? ಅವರು ಪೊಲೀಸ್ ಕಮಿಷನರಾ ಅಥವಾ ಸರ್ಕಾರದ ಗುಲಾಮರಾ? ಹೆಡ್ ಕ್ಲರ್ಕ್‌ಗಿಂತ ಕಡೆಯಾಗಿ ಹೇಳಿಕೆ ಕೊಡ್ತಿದ್ದಾರೆ.

ತಮ್ಮ ಕುರ್ಚಿ ಉಳಿಸಿಕೊಳ್ಳೋಕೆ, ಜಾಗ ಉಳಿಸಿಕೊಳ್ಳೋಕೆ ಏನೆಲ್ಲಾ ಕಸರತ್ತು ಮಾಡ್ತಿದ್ದಾರೆ ಅನ್ನೋದು ಇಡೀ ರಾಜ್ಯಕ್ಕೆ ಗೊತ್ತಿದೆ. ಯಾರ ಹಂಗಿನಲ್ಲಿ ನಿಂತು ಇವರು ಕೆಲಸ ಮಾಡ್ತಿದ್ದಾರೆ?" ಎಂದು ಗುಡುಗಿದ್ದಾರೆ. ಅಧಿಕಾರಿಗಳು ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದನ್ನು ಜನ ಗಮನಿಸುತ್ತಿದ್ದಾರೆ ಎಂದು ಎಚ್ಚರಿಸಿದ್ದಾರೆ.

ನನ್ನ ಮುಟ್ಟೋಕೂ ಆಗಲ್ಲ!

ತನಿಖಾ ಸಂಸ್ಥೆಗಳ ದುರ್ಬಳಕೆ ಬಗ್ಗೆ ಕಿಡಿಕಾರಿದ ಹೆಚ್‌ಡಿಕೆ, "ತನಿಖೆ ಯಾವ ಮಟ್ಟಕ್ಕೆ ಹೋಗ್ತಾ ಇದೆ, ಈ ಸರ್ಕಾರದ ಆಡಳಿತ ಹೇಗಿದೆ ಅನ್ನೋದನ್ನ ನಾಳೆ ಜಗತ್ತಿನ ಮುಂದೆ ಇಡ್ತೀನಿ. ಆದರೆ ಒಂದು ಮಾತು ನೆನಪಿರಲಿ, ಈ ಸರ್ಕಾರಕ್ಕಾಗಲಿ ಅಥವಾ ಇವರ ಕೈಕೆಳಗಿನ ಅಧಿಕಾರಿಗಳಿಗಾಗಲಿ ಈ ಕುಮಾರಸ್ವಾಮಿಯನ್ನ ಮುಟ್ಟೋಕೂ ಆಗಲ್ಲ! ಕುಮಾರಸ್ವಾಮಿನ ಇಷ್ಟು ಸುಲಭವಾಗಿ ಎದುರಿಸೋಕೆ ಇವರ ಕೈಯಲ್ಲಿ ಸಾಧ್ಯವೇ ಇಲ್ಲ" ಎಂದು ಸವಾಲು ಹಾಕಿದ್ದಾರೆ.

Also Read
ಸ್ಟಿಂಗ್ ಆಪರೇಷನ್ ತನಿಖೆಯಲ್ಲಿ ಪ್ರಮುಖ ಸಾಕ್ಷ್ಯಗಳ ಪತ್ತೆ: "ಇದು ಟ್ರೈಲರ್ ಅಷ್ಟೇ, ಸಿನಿಮಾ ಇನ್ನೂ ಬಾಕಿಯಿದೆ"; ಹೆಚ್​ಡಿಕೆ ವಿರುದ್ಧ ಕಿಡಿಕಾರಿದ ಪ್ರಿಯಾಂಕ್​ ಖರ್ಗೆ! Priyank Kharge
Siddaramaiah sting case, Kumaraswamy launches a scathing attack

ಸಿದ್ದರಾಮಯ್ಯ ಸ್ಟೇ ತಗೊಂಡಿದ್ದಾರೆ, ಯತೀಂದ್ರ ಒಪ್ಕೊಂಡಿದ್ದಾರೆ!

ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ಮುಖವಾಡ ಕಳಚಿಬಿದ್ದಿದೆ ಎಂದು ಆರೋಪಿಸಿದ ಹೆಚ್‌ಡಿಕೆ, "ಸರ್ಕಾರ ಯಾರನ್ನೆಲ್ಲಾ ರಕ್ಷಣೆ ಮಾಡಲು ಹೊರಟಿದೆ ಎಂಬುದು ಸ್ಪಷ್ಟವಾಗಿದೆ. ಇತ್ತ ಸಿದ್ದರಾಮಯ್ಯ ಅವರು ನ್ಯಾಯಾಲಯದಿಂದ ಸ್ಟೇ ತಂದಿದ್ದಾರೆ. ಮತ್ತೊಂದೆಡೆ ಅವರ ಮಗ ಯತೀಂದ್ರ, ನಮ್ಮ ಪಕ್ಷದವರೇ ಇದನ್ನೆಲ್ಲಾ ಮಾಡಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಹಾಗಾದರೆ ಇಲ್ಲಿ ಯಾರು ಯಾರನ್ನ ಬಚಾವ್ ಮಾಡ್ತಿದ್ದಾರೆ? ಈ ಒಳಸಂಚು ಯಾರದ್ದು?" ಎಂದು ಪ್ರಶ್ನಿಸಿದ್ದಾರೆ.

ಪ್ರಿಯಾಂಕ್ ಖರ್ಗೆ 'ಟ್ರೈಲರ್' ಮಾತಿಗೆ ಹೆಚ್‌ಡಿಕೆ ತಿರುಗೇಟು

ಇದೇ ವೇಳೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ 'ಇದು ಕೇವಲ ಟ್ರೈಲರ್ ಅಷ್ಟೇ' ಮುಂದೆ ಸಿನಿಮಾ ಬರಲಿದೆ ಎಂಬ ಹೇಳಿಕೆಗೆ ವ್ಯಂಗ್ಯವಾಡಿದ ಕೇಂದ್ರ ಸಚಿವರು, "ಇದೆಲ್ಲಾ ಯಾವ ಲೆಕ್ಕದ ಟ್ರೈಲರ್ ರೀ? ನಾನು ನಿಜವಾದ ಸಿನಿಮಾಗಳನ್ನೇ ನಿರ್ಮಾಣ ಮಾಡಿ ಬಂದವನು. ಇವರು ಈಗಿನ್ನೂ ರಾಜಕೀಯದಲ್ಲಿ ಸಿನಿಮಾ ಮಾಡೋಕೆ ಶುರು ಮಾಡಿದ್ದಾರೆ. ಇವರ ಅಸಲಿ ಸಿನಿಮಾ ಏನು, ಅದರ ಕಥೆ ಏನು ಅನ್ನೋದನ್ನ ನಾಳೆ ನಾನೇ ಡಿಟೇಲ್ ಆಗಿ ಹೇಳ್ತೀನಿ" ಎಂದು ಲೇವಡಿ ಮಾಡಿದ್ದಾರೆ.

Also Read
"ನನಗೆ ಯಾರೂ ಇಲ್ಲ, ನೀವೇ ಬನ್ನಿ": ಅನಾಥ ವರನ ಕರೆಗೆ ಸ್ಪಂದಿಸಿದ ಜನ; ಮದುವೆ ಮಂಟಪಕ್ಕೆ ಹರಿದುಬಂದ ನೆಟ್ಟಿಗರ ಮಹಾಪೂರ! China Orphan Wedding
Siddaramaiah sting case, Kumaraswamy launches a scathing attack

ನಾಳೆ ಬಿರುಗಾಳಿ ಎಬ್ಬಿಸಲಿದ್ದಾರಾ ಕುಮಾರಸ್ವಾಮಿ?

"ಯಾರೂ ಗಾಬರಿ ಆಗಬೇಕಿಲ್ಲ. ಈ ಸ್ಟಿಂಗ್ ಆಪರೇಷನ್ ಯಾರಿಗೆ ಮರಣಮೃದಂಗ ಆಗಲಿದೆ, ಯಾರಿಗೆ ತಿರುಗುಬಾಣವಾಗಲಿದೆ ಎಂಬುದನ್ನು ನಾಳೆ ಎಳೆಎಳೆಯಾಗಿ ಜನರ ಮುಂದಿಡುತ್ತೇನೆ. ಈ ಭ್ರಷ್ಟ ಸರ್ಕಾರದ ಆಡಳಿತದ ಅಸಲಿ ಮುಖವಾಡ ಕಳಚುತ್ತೇನೆ" ಎಂದು ಹೇಳುವ ಮೂಲಕ ನಾಳೆಯ ತಮ್ಮ ಸುದ್ದಿಗೋಷ್ಠಿಯ ಬಗ್ಗೆ ತೀವ್ರ ಕುತೂಹಲ ಸೃಷ್ಟಿಸಿದ್ದಾರೆ.

ಒಟ್ಟಿನಲ್ಲಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಹೈಡ್ರಾಮಾ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಕುಮಾರಸ್ವಾಮಿ ಅವರ ಈ ಆಕ್ರೋಶದ ಮಾತುಗಳು ಆಡಳಿತಾರೂಢ ಕಾಂಗ್ರೆಸ್ ಪಾಳಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ ಎಂದರೆ ಸುಳ್ಳಲ್ಲ.