ಇನ್ನೆಂದಿಗೂ ಮರೆಯುವುದಿಲ್ಲ ಕೋ ಅಕ್ಷರವ...!

 I will never forget Ko Akshara
I will never forget Ko Akshara
Published on
ಈ ತಲೆಬರಹವನ್ನು ಓದಿದಾಗ ಏನಿದೆಂದು ನಿಮಗಿದರ ತಲೆಬುಡ ಗೊತ್ತಾಗಲಿಕ್ಕಿಲ್ಲ. ಜೊತೆಯಲ್ಲಿರುವ ಚಿತ್ರವೂ- ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ರಚಿಸಿದ್ದು- ಅಷ್ಟೇನೂ ನೆರವಿಗೆ ಬರಲಿಕ್ಕಿಲ್ಲ. ಆದ್ದರಿಂದ ನಾನೇ ವಿವರಿಸುತ್ತೇನೆ. ಇದನ್ನು ಆತ್ಮಕಥನದ ಚಿಕ್ಕದೊಂದು ತುಣುಕು ಎಂದು ಬೇಕಿದ್ದರೂ ಹೇಳಬಹುದು, ಏಕೆಂದರೆ ನನ್ನದೇ ಬಾಲ್ಯದ, ಅಕ್ಷರಾಭ್ಯಾಸ ಕಾಲದ ಒಂದು ಸ್ವಾರಸ್ಯಕರ ಪ್ರಸಂಗವಿದು.
ನನಗಾಗ ನಾಲ್ಕು ಅಥವಾ ಐದು ವರ್ಷಗಳಿರಬಹುದು. ನಮ್ಮ ಹಳ್ಳಿಯಲ್ಲಿದ್ದದ್ದು ಏಕೋಪಾಧ್ಯಾಯ ಏಕಪ್ರಕೋಷ್ಠ ಸ.ಕಿ.ಪ್ರಾ. ಶಾಲೆ. ಅಲ್ಲಿ ನೇರವಾಗಿ 1ನೇ ತರಗತಿಗೆ ವಿದ್ಯಾರ್ಥಿಗಳ ಸೇರ್ಪಡೆ. ಅದಕ್ಕೆ ಮೊದಲು ಶಿಶುವಿಹಾರ ಅಂಗನವಾಡಿ ಬಾಲವಾಡಿ ಅಥವಾ ಈಗಿನ ಎಲ್​ಕೆಜಿ ಯುಕೆಜಿ ಅಂತೆಲ್ಲ ಏನೂ ಇಲ್ಲ. ಅಕ್ಷರಾಭ್ಯಾಸವನ್ನು ಮನೆಯಲ್ಲೇ ಮಾಡಿಸುತ್ತಿದ್ದರು. ಮರಳ ರಾಶಿಯಲ್ಲಿ ಬೆರಳಿನಿಂದ ಅಲ್ಲ, ಪಾಟಿಯ ಮೇಲೆ ಬಳಪದಿಂದ ಬರೆಯಿಸಿ.
ನಮ್ಮದು ದೊಡ್ಡ ಕುಟುಂಬ ಆದ್ದರಿಂದ ತಂದೆ-ತಾಯಿಗಿಂತ ಅಣ್ಣಂದಿರು, ಅಕ್ಕಂದಿರು ಈ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದರು. ಹಾಗೆ ನನಗೆ ಅಕ್ಷರಾಭ್ಯಾಸ ಮಾಡಿಸಿದ್ದು ನನ್ನ ಅಣ್ಣ. ಅ-ಆದಿಂದ ಆರಂಭಿಸಿ ಸ್ವರಾಕ್ಷರ ಮತ್ತು ವ್ಯಂಜನಗಳನ್ನೆಲ್ಲ ಸರಸರನೆ ಸುಲಭವಾಗಿಯೇ ಕಲಿತೆ. ಕ-ಕಾ ಕಾಗುಣಿತ ಬಳ್ಳಿ ಕಲಿಕೆ ಎನ್ನುವಾಗ ಎಷ್ಟಪ್ಪಾ ಕಲಿಯಲಿಕ್ಕಿದೆ ಅಂತ ಅನಿಸತೊಡಗಿತ್ತು. ಸ್ವಲ್ಪ ಉದಾಸೀನವೂ ಆವರಿಸಿದ್ದಿರಬಹುದು. ಕೆ, ಕೇ, ಕೈ, ಕೊ ವರೆಗೂ ಬಂಡಿ ಹೇಗೋ ಕುಂಟುತ್ತ ಸಾಗಿತು. ‘ಕೋ’ ಮಾತ್ರ... ಊಹುಂ, ಎಷ್ಟು ಸಲ ಹೇಳಿಕೊಟ್ಟರೂ ಸಿದ್ಧಿಸಲೇ ಇಲ್ಲ. ಅದು ಸಹಜವೂ ಎನ್ನಿ. ಏಕೆಂದರೆ ‘ಕೋ’ ಅಕ್ಷರ ಕ-ಬಳ್ಳಿಯಲ್ಲೇ ಅತ್ಯಂತ ಸವಾಲಿನದು. ಅದಕ್ಕೆ ತಲೆಕಟ್ಟು ಸುರುಳಿ ಸುತ್ತಬೇಕು, ಆಮೇಲೆ ಪಕ್ಕದಲ್ಲೊಂದು ಉದ್ದದ ಕೊಂಬು ಹಚ್ಚಬೇಕು, ಅಷ್ಟು ಸಾಲದು ಎಂಬಂತೆ ದೀರ್ಘ ಚಿಹ್ನೆಯೂ ಬೇಕು.
ನಾನು ಮೂರರಲ್ಲಿ ಯಾವುದೇ ಒಂದನ್ನು ತಪ್ಪದೇ ಮರೆಯುತ್ತಿದ್ದೆ. ಸರಿಯಾಗಿ ಬರುವವರೆಗೆ ಅಣ್ಣ ಬಿಡುತ್ತಿರಲಿಲ್ಲ. ಬಳಪ ಹಿಡಿದು ಪಾಟಿಯಲ್ಲಿ ನಾನು ತಿದ್ದಿದ್ದ ‘ಕೋ’ ಏನಿಲ್ಲವೆಂದರೂ ಅರ್ಧ ಇಂಚಿನಷ್ಟು ದಪ್ಪಗೆ ಕೊಬ್ಬಿತ್ತೇನೋ. ಬರೀ ತಿದ್ದುವುದಷ್ಟೇ ಅಲ್ಲ, ‘ಇನ್ನು ಮರೆಯುವುದಿಲ್ಲ ಕೋ!’ ಎಂದು ಬಾಯಿಯಿಂದ ದೊಡ್ಡದಾಗಿ ಹೇಳುತ್ತ ತಿದ್ದಬೇಕಿತ್ತು! ಕಣ್ಣುಗಳಿಂದ ಗಂಗಾ-ಯಮುನಾ ಬಳಬಳನೆ ಹರಿಯುತ್ತಿದ್ದವು. ಕೊನೆಗೂ ‘ಕೋ’ ಕಲಿತ ಕೋವಿದನಾದಾಗ ಮಹದಾನಂದವಾಯಿತು. ‘ಕೋ’ ಮಾತ್ರವಲ್ಲ ಆಗ ಕಲಿತ ಕನ್ನಡ ಅಕ್ಷರಗಳನ್ನು ಎಂದೆಂದಿಗೂ ಮರೆಯದೆ, ಈಗ ಕನ್ನಡ ಪತ್ರಿಕೆಗಳಲ್ಲಿ ನಿಯತವಾಗಿ ಅಂಕಣ ಬರೆಯಲಿಕ್ಕೂ ಬಳಸುತ್ತಿದ್ದೇನೆಂಬ ಸಂಗತಿ- ಬಹುಶಃ ನನಗಿಂತಲೂ ನನ್ನಣ್ಣನಿಗೆ ಹೆಚ್ಚಿನ ಹೆಮ್ಮೆಯದು!
ಕಳೆದ ಸಲ Imposition ಪದವನ್ನು ಸೂಚಿಸುವಾಗಲೇ ನನಗಿದು ನೆನಪಾಗಿತ್ತು. ಓದುಗರಿಗೂ ತಮ್ಮ ಬಾಲ್ಯದಲ್ಲಿ ಮಾಸ್ತರರಿಂದ ‘10 ಸರ್ತಿ ಬರೆ, 50 ಸರ್ತಿ ಬರೆ’ ರೀತಿಯ ಶಿಕ್ಷೆ ಅನುಭವಿಸಿದ್ದು ನೆನಪಾಗಬಹುದೆಂಬ ಅಂದಾಜಿತ್ತು. ಅದು ನಿಜವೂ ಆಯಿತು. ನೆನಪುಗಳಿಂದಾಗಿಯೇ ಇರಬಹುದು, ತರಹೇವಾರಿ ಪ್ರವೇಶಿಕೆಗಳು ಬಂದಿವೆ. ಅವುಗಳಲ್ಲಿ ಕೆಲವನ್ನು ಈಗ ನೋಡೋಣ. ಉಕ್ತಲೇಖನ ಇದ್ದಂತೆ ‘ಪುನರ್ಲೆಖನ’ ಆಗಬಹುದೆಂದವರು ರಂಗನಾಥ ಟಿ.ಕೆ., ಯಶೋದಾ ಗೋಪಿ, ನಿತ್ಯಾನಂದ ಬ್ರಹ್ಮಾವರ. ಅದನ್ನೇ ಅಚ್ಚಕನ್ನಡದಲ್ಲಿ ‘ಮರುಬರೆ’ (ಅಥವಾ ಮರುಬರೆಹ) ಎಂದವರು ಅನಂತಕೃಷ್ಣ ಶಿವಮೊಗ್ಗ, ಪುಷ್ಪಲತಾ ಕೆ.ಎನ್., ಮಮತಾ ಕುಂದಾಪುರ. ಅದೊಂದು ಶಿಕ್ಷೆಯಂತೆ ಬರೆಸುವುದಾದ್ದರಿಂದ ‘ಶಿಕ್ಷಾಲೇಖನ’ (ಬಾಳಾಜಿ ಮುಜುಮದಾರ, ಗಿರೀಶ ಫಡ್ಕೆ, ಅಪ್ಪು ಮುತ್ಯ, ಅರ್ಜುನ್ ಪೆರ್ಲ), ‘ಶಿಕ್ಷಾಕ್ಷರ’ (ನಿರಂಜನಕುಮಾರ್ ಜಿ.ಆರ್.), ‘ಅಕ್ಷರಶಿಕ್ಷೆ’ (ಗಿರೀಶ ಕೆ.ಎಸ್.), ‘ದಂಡಬರೆಹ’ (ನಯನಕುಮಾರ್ ಕಾಡಹಳ್ಳಿ, ಸುಜಯ ಬಿ.ಜಿ.), ‘ಬರೆಹದಂಡನೆ’ (ರಾಜಣ್ಣ ಎಚ್.ಎಂ., ಕಸ್ತೂರಿ ನಾಯಕ್), ‘ಲೇಖನಸಜೆ’ (ಕುಶಲ್ ಭಾರದ್ವಾಜ್, ಎಸ್. ಅನಂತರಾಮ್, ‘ಸಜೆಬರೆಹ’ (ವಿಜಯಕಲ ವಿಟ್ಲ) ಇವಿಷ್ಟು ಮತ್ತೆ ಕೆಲವರ ಆಯ್ಕೆಗಳು. ಒಳ್ಳೆಯ ಉದ್ದೇಶದ ಶಿಕ್ಷೆಯಾದ್ದರಿಂದ ‘ಸುಶಿಕ್ಷೆ’ (ಸುನೀತಾ ಶಿವಾನಂದ, ಮಿಸ್ಕಿನ್ ಕುಟುಂಬ ಸದಸ್ಯರು) ಮತ್ತು ‘ಹಿತಶಿಕ್ಷೆ’ (ಎನ್.ಎಸ್. ಭುಜಂಗ ರಾವ್) ಸಹ ಬಂದಿವೆ. ‘ಹೇರುಬರೆ’ ಎಂದು ವಸಂತಕುಮಾರ್ ಕಲ್ಯಾಣಿಯವರ ಆಯ್ಕೆಯಾದರೆ, ವಿಶೇಷವೆನಿಸಿದ್ದು ಅನ್ನಪೂರ್ಣ ಹೇಮಚಂದ್ರ ಮತ್ತು ಬಿ.ಡಿ. ರವೀಂದ್ರ ಸೂಚಿಸಿದ ‘ಬರೆಬರೆ’. ಇದರಲ್ಲಿ ಬರೆಯುವ ಪ್ರಕ್ರಿಯೆಯೂ ಇದೆ, ಬರೆ ಎಳೆದಂತೆ ಎಂದು ಲಘುವಾಗಿ ಶಿಕ್ಷೆಯೂ ಧ್ವನಿಸಿದೆ! ಶ್ಲೇಷೆಯುಕ್ತ ದ್ವಿರುಕ್ತಿ ಚೆನ್ನಾಗಿದೆ.
ದ್ವಿರುಕ್ತಿಯೆಂದಾಗ ಭಗವದ್ಗೀತೆಯ 18ನೆಯ ಅಧ್ಯಾಯದ 76ನೆಯ ಶ್ಲೋಕವೂ ನೆನಪಾಗುತ್ತದೆ. ‘ರಾಜನ್ ಸಂಸ್ಮೃತ್ಯ ಸಂಸ್ಮೃತ್ಯ ಸಂವಾದಮಿಮಮದ್ಭುತಮ್ ಎನ್ನುತ್ತಾನೆ ಸಂಜಯ, ತಾನು ಕೇಳಿಸಿಕೊಂಡ ಕೃಷ್ಣಾರ್ಜುನರ ಸಂವಾದವನ್ನು ನೆನೆನೆನೆದು. ಅದೇ ಶ್ಲೋಕದಲ್ಲಿ ‘ಹೃಷ್ಯಾಮಿ ಚ ಮುಹುಮುಹುಃ’ ಎನ್ನುತ್ತಾನೆ, ಮತ್ತೆಮತ್ತೆ ಸಂತೋಷಿಸುತ್ತಿದ್ದೇನೆ ಎಂದು. ಮುಹುಮುಹುಃ ಎಂದರೆ ಮತ್ತೆಮತ್ತೆ. ಮುಂದಿನ ಶ್ಲೋಕದಲ್ಲೂ ‘ತಚ್ಚ ಸಂಸ್ಮೃತ್ಯ ಸಂಸ್ಮೃತ್ಯ ರೂಪಮತ್ಯದ್ಭುತಂ ಹರೇಃ’ ಎಂದು ಭಗವಂತನ ವಿಶ್ವರೂಪ ದರ್ಶನವೂ ತನ್ನ ದಿವ್ಯದೃಷ್ಟಿಗೆ ಲಭ್ಯವಾದುದನ್ನು ನೆನೆನೆನೆದು ‘ಹೃಷ್ಯಾಮಿ ಚ ಪುನಃಪುನಃ’ ಎನ್ನುತ್ತಾನೆ. ಪುನಃ ಎಂದರೇನೇ ಮತ್ತೊಮ್ಮೆ; ಪುನಃಪುನಃ ಎಂದರೆ ಮತ್ತೊಮ್ಮೆ ಮಗದೊಮ್ಮೆ! ಅಂದಹಾಗೆ ಭಗವದ್ಗೀತೆಗೂ Imposition ಪದಕ್ಕೂ ಏನೇನೂ ಸಂಬಂಧವಿಲ್ಲ ನಿಜ. ಆದರೆ ಕಳೆದೆರಡು ವರ್ಷಗಳಲ್ಲಿ ಉಡುಪಿಯಲ್ಲಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಪರ್ಯಾಯ ಅವಧಿ ಇದ್ದಾಗ ನಡೆದ ‘ಕೋಟಿಗೀತಾ ಲೇಖನ ಯಜ್ಞ’ದಲ್ಲಿ ಭಾಗವಹಿಸಿದ ಭಕ್ತರನೇಕರು, ಪ್ರಖ್ಯಾತರು ಮತ್ತು ಪ್ರಥಿತರು ಕೂಡ, ಸ್ವಯಂಘೊಷಿತ Imposition ಎಂಬಂತೆ ಇಡೀ ಭಗವದ್ಗೀತೆಯನ್ನು ಕೈಬರಹದಲ್ಲಿ ಒಂದಕ್ಕಿಂತ ಹೆಚ್ಚು ಸರ್ತಿ ಬರೆದಿದ್ದಾರೆ. ಒಂದು ಸರ್ತಿ ನಾನೂ ಬರೆದಿದ್ದೇನೆ. ನನಗೆ ಗೊತ್ತಿರುವವರ ಪೈಕಿ ಬಳ್ಳಾರಿಯ ಶ್ರೀನಿವಾಸ ದೇವಳೆ ಎಂಬುವವರು ಎಲ್ಲ 18 ಅಧ್ಯಾಯಗಳನ್ನು 18 ಸರ್ತಿ ಬರೆದು (ಅಲ್ಲ, ‘ಬರೆಬರೆ’ದು) ಶ್ರೀಕೃಷ್ಣನ ಪದತಲದಲ್ಲಿ ಸಮರ್ಪಿಸಿದ್ದಾರೆ!
ಕಳೆದ ಸಲ ಕೇಳಿದ್ದ Gimmick ಪದ ಇಂಗ್ಲಿಷ್​ನಲ್ಲೂ ತೀರ ಇತ್ತೀಚಿನದೇ. ಅಮೆರಿಕದಲ್ಲಿ 1920ರ ಆಸುಪಾಸಿನಲ್ಲಿ ಹುಟ್ಟಿಕೊಂಡಿದ್ದು, Magic ಪದದ ಉಚ್ಚಾರವನ್ನೇ ಆಚೀಚೆ ಮಾಡಿದ್ದೆನ್ನಲಾಗುತ್ತದೆ. ಯಕ್ಷಿಣಿವಿದ್ಯೆಗೆ ಸಂಬಂಧಿಸಿಯೇ, ಮುಖ್ಯವಾಗಿ ಮಂತ್ರದಂಡ ಮುಂತಾಗಿ ಅವರು ಬಳಸುವ ಪರಿಕರಗಳ ಬಗ್ಗೆಯೇ ಇದು ಶುರುವಾದದ್ದು. ಆಮೇಲೆ ಆ ರೀತಿಯ ಚಮತ್ಕಾರ ತಂತ್ರಗಳನ್ನು ಜೀವನದಲ್ಲಿ ವಿವಿಧ ಸನ್ನಿವೇಶಗಳಲ್ಲಿ ವಿವಿಧ ಉದ್ದೇಶಗಳಿಂದ ಮಾಡುವುದಕ್ಕೂ ಬಳಕೆಯಾಯಿತು. ಕನ್ನಡದಲ್ಲಿ ಸಮಾನಾರ್ಥಕವಾಗಿ ಬೇರೆಬೇರೆ ಸಾಧ್ಯತೆಗಳಿವೆ:
‘ಕಣ್ಕಟ್ಟು’ (ಪ್ರಭುಪ್ರಸಾದ್ ನಡುತೋಟ, ವಿದ್ಯಾಶಂಕರ ಶರ್ಮ, ಕೃಷ್ಣ ಬರ್ವೆ, ಸಂತೋಷರಾವ್ ಕಡಬ), ‘ಚಳಕ’ (ಎನ್.ಆರ್. ರಮೇಶ್, ಉಮಾ ಪ್ರಭು, ಭಾರತಿ ಪ್ರಕಾಶ್, ವರದರಾಜ ಶೆಟ್ಟಿ, ಶಿವಕುಮಾರ ಸಿಂಗಟಗೆರೆ, ಡಾ.ದಯಾನಂದ ಭಟ್ಟ ಮುಂತಾದವರು), ‘ಚಮತ್ಕಾರ’ (ಶೀಲಾ ಜಿ.ಪಿ., ನಳಿನಿ ಭಟ್ ಸೇರಾಜೆ, ಡಾ.ಸಂಗಮೇಶ ಸುರಭಿ, ಕುಸುಮಾ ಡಿ.ಎನ್., ಪರಮೇಶ್ವರ ಶರ್ಮ, ಕಂಪಲಾಪುರ ಶ್ರೀನಿವಾಸ್, ಸತ್ಯ ಹರಿಹಳ್ಳಿ, ಶೋಭಾ ತಿಪಟೂರು, ಶಿವಮೊಗ್ಗದಿಂದ ಗಗನ ಮತ್ತು ಜ್ಯೋತಿಕಾ), ‘ಮೋಡಿ’ (ರೂಪಾ ದಾವಣಗೆರೆ, ಷಡಕ್ಷರಮುನಿ ಸ್ವಾಮೀಜಿ, ಶ್ರೀನಿವಾಸ ಭಟ್ ಹೊಸನಗರ, ಶಾಂತ ಗಿರೀಶ್, ಮಂಜುನಾಥ ಮಾಡ್ಲಮನೆ), ‘ಬೂಟಾಟಿಕೆ’ (ವೇದಾ ವಿ. ಪುರೋಹಿತ) ಎಲ್ಲವೂ ಒಪ್ಪುವಂಥವೇ. ‘ಸೇಳೆ’ (ಅಥವಾ ಶೇಲೆ) ಎಂಬೊಂದು ತುಳು ಮೂಲದ ಪದವನ್ನೂ ನೆನಪಿಸಿದ್ದಾರೆ ಬೆಂಗಳೂರಿನ ವಸಂತಕುಮಾರ್. ಅದು ಬೆಡಗು, ವೈಯಾರ, ಸೋಗು, ಬಿನ್ನಾಣ ಮುಂತಾದ ಅರ್ಥಗಳಲ್ಲಿ ಹೆಚ್ಚಾಗಿ ಬಳಕೆಯಾಗುವುದಾದರೂ ಗಿಮಿಕ್ ಸಹ ಹೆಚ್ಚೂಕಡಿಮೆ ಅದೇ ರೀತಿಯದಾದ್ದರಿಂದ ಹೊಂದಬಹುದು. ಒಟ್ಟಾರೆಯಾಗಿ ಅಪಾಯರಹಿತ, ಅಪ್ಪಟ ಮನೋರಂಜನಾ ಸಂದರ್ಭಗಳಿಗೆ ಇವೆಲ್ಲ ಸೂಕ್ತವಾಗುತ್ತವೆ. ಆದರೆ ರಾಜಕಾರಣಿಗಳು ಗೆಲ್ಲುವುದಕ್ಕೋಸ್ಕರ ಮಾಡುತ್ತಾರಲ್ಲ ಅದನ್ನು ‘ಹುನ್ನಾರ’ (ಅಥವಾ ಹುನಾರು, ಹುನ್ನರ, ಹುನ್ನಾರು, ಹುನ್ನರು ಇತ್ಯಾದಿ) ಎನ್ನುವುದೇ ಸೂಕ್ತವೆನಿಸುತ್ತದೆಂದು ಕೆ.ಎ. ಭಟ್, ಎಂ.ಕೆ. ಬದರಿನಾಥ್, ಕೃಷ್ಣ ಎಸ್. ಕುಲಕರ್ಣಿ ಮುಂತಾದವರ ಅಭಿಪ್ರಾಯ. ‘ಮಂಕುಬೂದಿ’ (ಸುಬ್ರಹ್ಮಣ್ಯ ಎಸ್.) ಸಹ ಪುಢಾರಿಗಳಿಗೇ ಚೆನ್ನಾಗಿ ಹೊಂದುವಂಥದು.
ಕೊನೆಯದಾಗಿ Startup ಸಾಮಾನ್ಯವಾಗಿ ಹೊಸ ಕಲ್ಪನೆ, ಹೊಸ ತಂತ್ರಜ್ಞಾನ, ಹೊಸ ಉತ್ಪನ್ನ ಅಥವಾ ಸೇವೆಯನ್ನು ಅಭಿವೃದ್ಧಿಪಡಿಸಿ ಜನರಿಗೆ ನೀಡಲು ಆರಂಭವಾಗುವ ಉದ್ಯಮ. ಕೆಲವೇ ಉತ್ಸಾಹಿಗಳೊಂದಿಗೆ ಕಾರ್ಯಾರಂಭ, ಬೇಗನೆ ಬೆಳೆಯುವ ಉದ್ದೇಶ, ಅನಿಶ್ಚಿತತೆಯ ನಡುವೆಯೂ ಬಂಡವಾಳ ಹೂಡುವ ಸಾಹಸ- ಮುಖ್ಯ ಲಕ್ಷಣಗಳು. ಭಾರತದಲ್ಲಂತೂ ಪ್ರಧಾನಿ ಮೋದಿಯವರಿಂದ ಭರಪೂರ ಉತ್ತೇಜನ. ಭಾರತೀಯ ಭಾಷೆಗಳೆಲ್ಲವುಗಳಲ್ಲಿ ಬಳಸಬಹುದಾದ ‘ನವೋದ್ಯಮ’ ಎಂಬ ಪದವನ್ನೂ ಮೋದಿಯವರೇ ಸೂಚಿಸಿದ್ದು ಎನ್ನಲಾಗುತ್ತದೆ. ನೂರಕ್ಕಿಂತಲೂ ಅಧಿಕ ಪ್ರವೇಶಿಕೆಗಳಲ್ಲಿ ‘ನವೋದ್ಯಮ’ವೇ ಕಾಣಿಸಿಕೊಂಡಿದೆ. ಡಾ. ರಂಗನಾಥ ಕಟ್ಟಿ, ರಾಜೇಶ್ವರಿ ಶಿವಮೊಗ್ಗ, ಕಲಾ ಚಾರಿ, ಕೆ. ಗುರುಪ್ರಸನ್ನ, ರಘುನಾಥ ಹಿರೇಹಳ್ಳಿ, ಮಿಥುನ್ ಗುಡ್ಡೆತೋಟ, ರಘುಪತಿ ನಕ್ಷತ್ರಿ, ಕಾಡೇಶ ವಿ.ಬಿ., ಮಹಾಂತೇಶ ಗೋಲಪ್ಪನವರ, ಭಾರ್ಗವ ಎಚ್.ಜಿ., ವಿರೂಪಾಕ್ಷಪ್ಪ ಶಾಂತಗೇರಿ, ಸುರೇಂದ್ರ ಪೈ, ಮೀನಾಕ್ಷಿ ಟಕ್ಕಳಕಿ, ಜಿ.ಎಚ್. ಸಂಕಪ್ಪ, ಗೋಪಿನಾಥ ಭರಮಸಾಗರ, ಉಮೇಶ ಪ್ರಭು, ಭಾರತಿ ಭಟ್, ಭಾಗ್ಯಶ್ರೀ ಕೆ.ಸಿ., ಸತೀಶ ಕಬೇಕೋಡಿ, ಗೀತಾ ಪಾಟೀಲ, ಜಿ.ನಾರಾಯಣ ರಾವ್, ಅಂಜಲಿ ಬರ್ವೆ, ವೀರೇಶ ವಾಲಿ, ಡಾ. ವೇಣುಗೋಪಾಲ್, ನರೇಂದ್ರನಾಥ್ ಎಚ್.ಎಂ., ಪಂಪಣ್ಣ ಗೌಡ, ಆನಂದರಾಮ ಮಡಿ, ರಚಿತಾ ಅಶ್ವತ್ಥಪುರ, ಸುಜನಾ ನಿಟ್ಟೂರು, ಪದ್ಮಾ ಬದರಿನಾಥ್, ತೆ.ಸಂ. ನಾಗರಾಜು, ರೇಖಾ ರಾಮಕೃಷ್ಣ, ಡಾ. ಎಂ.ಸಿ. ಪಾಟೀಲ, ಭಾಗ್ಯಶ್ರೀ ಕುಲಕರ್ಣಿ ಮುಂತಾದವರು.
ಹಾಗೆ ನೋಡಿದರೆ ಸಾಂಪ್ರದಾಯಿಕ ಉದ್ಯಮಗಳೆಲ್ಲವೂ ಹೊಸದರಲ್ಲಿ ‘ನವೋದ್ಯಮ’ಗಳೇ! ಆದ್ದರಿಂದ Startup ವೈಶಿಷ್ಟ್ಯಗಳಾದ ಕ್ಷಿಪ್ರ ಮೇಲೇರುವಿಕೆ, ಜಗದ್ವಾ್ಯಪಿಯಾಗುವ ಹಂಬಲಗಳನ್ನು ಸೂರ್ಯೋದಯಕ್ಕೆ ಹೋಲಿಸಿ ‘ಉದಯೋದ್ಯಮ’ (ಪಿ.ಜೆ. ರಾಘವೇಂದ್ರ, ರಜನಿಕಾಂತ್ ಕುಡ್ಪಿ) ಸಹ ಒಳ್ಳೆಯ ಆಯ್ಕೆ. ಅಚ್ಚಕನ್ನಡದ ಆಲೋಚನೆಯಿಂದ ಬಂದ ‘ಚಿಗುರುದ್ದಿಮೆ’ (ವಿಜಯಕಲ ಬೆಂಗಳೂರು), ಮತ್ತು ‘ಮೊದಲಡಿ’ (ಬೃಂದಾ ದತ್ತ, ಶ್ರೀಕಾಂತ್ ಗೋಡಖಿಂಡಿ, ಎನ್.ವಿ. ಶಂಕರ್, ಎಂ.ಕೆ. ರಮೇಶ್) ಕೂಡ ಸಮರ್ಪಕವಾಗಿವೆ. ಅನ್ನಪೂರ್ಣ ಹೇಮಚಂದ್ರ ಸೂಚಿಸಿದ ‘ಓನಾಮ’ ಅಷ್ಟೊಂದು ಸಮಂಜಸ ಎನಿಸದಿದ್ದರೂ ಅವರ ಚಿಂತನೆಯನ್ನು ಮೆಚ್ಚಲೇಬೇಕು.

ಈ ವಾರದ ಮೂರು ಪದಗಳು:

1. Holdall: ಅಕ್ಷರಶಃ ಎಲ್ಲವನ್ನೂ ತುಂಬಿಸಿಡಲಿಕ್ಕಾಗುವ ಪ್ರಯಾಣಸ್ನೇಹಿ ಚೀಲ ಎಂಬ ಉದ್ದದ ವ್ಯಾಖ್ಯಾನಕ್ಕಿಂತ ಚಿಕ್ಕದಾದ ಒಂದು ಪದ ಬೇಕು.
2. Oasis: ಮರಳುಗಾಡಿನ ಮಧ್ಯದಲ್ಲಿ ನೀರು ಸಿಗುವ ಫಲವತ್ತಾದ ಜಾಗ, ಉಪಮಾಲಂಕಾರವಾಗಿ ಬಳಸುವಾಗಲೂ ಓಯಸಿಸ್ ಎಂದೇ ಬರೆಯಬೇಕೇ?
3. Ribbon:: ಟೇಪು ಎನ್ನುವಿರಾದರೆ ಅದೂ ಆಂಗ್ಲದ್ದೇ ಆಯ್ತು, ರಿಬ್ಬನ್ ಕಟ್ ಮಾಡಿ ಹೊಸದೊಂದು ಕನ್ನಡ ಪದಬಳಕೆ ಆರಂಭಿಸೋಣವಂತೆ. ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಕನ್ನಡದಲ್ಲಿ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್​ಆಪ್ ಸಂಖ್ಯೆ: +12404010945
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net