ನಾನು ಒಂದು ಜಿರಳೆ ಹುಂಡಿಯಲ್ಲಿ ಹಣ

ಸಿಂದಗಿ ನಗರದಲ್ಲಿ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯನ್ನು ಉದ್ಘಾಟಿಸಿದರು. ಸರ್ವಾಧ್ಯಕ್ಷ ಹ.ಮ.ಪೂಜಾರ, ಸವಿತಾ ಇನಾಮದಾರ, ಸಿ.ಎಂ. ಬಂಡಗಾರ, ಹಾಸಿಂಪೀರ ವಾಲಿಕಾರ ಇತರರಿದ್ದರು.
ಸಿಂದಗಿ ನಗರದಲ್ಲಿ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯನ್ನು ಉದ್ಘಾಟಿಸಿದರು. ಸರ್ವಾಧ್ಯಕ್ಷ ಹ.ಮ.ಪೂಜಾರ, ಸವಿತಾ ಇನಾಮದಾರ, ಸಿ.ಎಂ. ಬಂಡಗಾರ, ಹಾಸಿಂಪೀರ ವಾಲಿಕಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಾಸ್ತವಿಕತೆಯನ್ನು ತೆರೆದಿಟ್ಟ ಕಾವ್ಯಗಳು
  • 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ
ಸಿಂದಗಿ: ‘‘ಕತ್ತಲೆ ಕಂಡು ಓಡಲಿಲ್ಲ
ಬೆಳಕ ಕಂಡು ಹೆದರಲಿಲ್ಲ
ಭಯವಿಲ್ಲದೇ ಕಸದೊಡನೆ
ಕಲೆತು ಬದುಕು ಬದುಕಿದ
ನನ್ನದೂ ಒಂದು ಗೌರವದ ಬದುಕು
ನಾನು ಒಂದು ಜಿರಳೆ’’
ಎಂದು ಉಕ್ಕಲಿ ಗ್ರಾಮದ ಚಿಂತನ ಕವಿ ಮಸ್ತಾನ ಗೌಂಡಿ ಅವರ ತಲೆ ಬರಹದ ಕವಿತೆ ನೆರೆದವರಲ್ಲಿ ಮುಸುಮುಸು ನಗುವಿನ ಜತೆಗೆ ದೇಶದ ಗಮನ ಸೆಳೆದ ಸಿಜೆಪಿ (ಕಾರ್ಕೋಚ್ ಜನತಾ ಪಾರ್ಟಿ) ಯ ಭವಿಷ್ಯದ ಭಾರತದ ಕನಸುಗಳನ್ನು, ಮಾತನಾಡದ ಮಾಧ್ಯಮಗಳ ಅನ್ಯಾಯದ ಪರ ನಿಲ್ಲುವ, ನಿರುದ್ಯೋಗ, ಒಂದು ಹುದ್ದೆ ಅಸಂಖ್ಯಾತ ಅರ್ಜಿಗಳು, ಅವಕಾಶ ಕಸಿದುಕೊಂಡ ಆಡಳಿತ ಸೇರಿ, ಪ್ರತಿ ದಿನ ಕೊಲ್ಲುವ ಭ್ರಷ್ಟಾಚಾರದ ಕೊಲ್ಲುವಿಕೆಯನ್ನು ಪ್ರಶ್ನಿಸಿ, ತನ್ನ ಅಳಿದು ಹೋಗುವ ನನಗೆ ಭಯವಿಲ್ಲ. ಗೌರವದ ಬದುಕು ಹುಡುಕುವ ದೇಶದ ಮುಗ್ಧ ಕನಸುಗಳ ಭವಿಷ್ಯದ ಸೋಲಲ್ಲವೇ ಎಂಬ ಪ್ರಶ್ನೆಯೊಂದಿಗೆ ವಾಸ್ತವಿಕತೆಯನ್ನು ಪ್ರಶ್ನಿಸಿದ ‘ನಾನು ಒಂದು ಜಿರಳೆ’ ಕವನ ಸಾಹಿತ್ಯಾಸಕ್ತರ, ವೇದಿಕೆಯ ಗಣ್ಯರ ಚಪ್ಪಾಳೆ ಗಿಟ್ಟಿಸಿತು.
ನಗರದ ಎಚ್.ಜಿ. ಕಾಲೇಜ್ ಆವರಣದಲ್ಲಿ ಬುಧವಾರ ನಡೆದ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಅಂದಾಜು 32ಕ್ಕೂ ಹೆಚ್ಚು ಕವಿ, ಕವಯತ್ರಿಯರು ಮನುಷ್ಯತ್ವ, ಅಸ್ಪಷ್ಟತೆ, ಹೆಣ್ಣು, ಮಳೆ, ಕನ್ನಡ ಪ್ರೇಮ, ಬರೆಯುವ ಬಯಕೆ, ಧರ್ಮಗಳ ಸಂಘರ್ಷ, ಕನ್ನಡಾಂಬೆಗೆ ನಮನ, ಉಗ್ರರಿಗೆ ಎಚ್ಚರಿಕೆ, ತಂತ್ರಜ್ಞಾನದ ಕಪಿಮುಷ್ಠಿ, ಡಾಂಭಿಕ ಶಕ್ತಿ, ನೆನಪು, ಅಮ್ಮ, ಜಿಲ್ಲೆಯ ಒಡಲಾಳ, ಬದಲಾದ ದೃಶ್ಯ, ನಾಡ ಮಂದಿರ, ಭವ್ಯ ಪರಂಪರೆ, ಅಧ್ಯಾತ್ಮ, ಶರಣ ಚಿಂತನೆಯ ವಿಷಯ ವಸ್ತುಗಳಲ್ಲಿ ಅರಳಿದ ಕಾವ್ಯಗಳನ್ನು ವಾಚಿಸಿದರು.
ತಾಳಿಕೋಟಿ ತಾಲೂಕಿನ ಆಲಗೂರಿನ ಯುವ ಕವಿ ಸಾಯಬಣ್ಣ ಮಾದರ ಅವರ ‘ಹುಂಡಿಯಲ್ಲಿ ಹಣ’ ಎಂಬ ತಲೆ ಬರಹದ ಕವನ, ಇತ್ತೀಚೆಗೆ ರಾಮನ ಭಕ್ತರ ನಂಬಿಕೆ ಮತ್ತು ಭಕ್ತಿಯ ಕಾಣಿಕೆಯನ್ನು ಲೂಟಿ ಮಾಡಿದವರ ಕುರಿತು ಎಚ್ಚರಿಕೆ ನೀಡಿ, ಗಮನ ಸೆಳೆಯಿತು.
ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತೆ ಸವಿತಾ ಇನಾಮದಾರ ಮಾತನಾಡಿ, ಕವಿ ಬರೆದಿದ್ದೆಲ್ಲವೂ ಕವಿತೆಯಾಗದು. ಕವಿತೆಯಲ್ಲಿ ಮಾಹಿತಿ ತುಂಬಬಾರದು. ಕಾವ್ಯ, ಹಾಲಿನ ಕೆನೆಯಂತೆ ಹುಟ್ಟಬೇಕು. ಅದರಲ್ಲಿ ಸಾಹಿತ್ಯದ ಗಟ್ಟಿತನ ಮತ್ತು ಅದನ್ನು ಅಪ್ಪಿಕೊಳ್ಳುವ ಕಿವಿಗಳಿಗೆ ಆಪ್ತವಾಗಬೇಕು. ಈ ದಿಸೆಯಲ್ಲಿ ಕವಿಗಳು ಭವಿಷ್ಯ ಕಾಣಬೇಕು ಎಂದರು.
ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ ಹಾಗೂ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಅಧ್ಯಾಪಕ ಸಿ.ಎಂ. ಬಂಡಗಾರ ಮಾತನಾಡಿದರು.
ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು, ಶಾಂತಗಂಗಾಧರ ಮಹಾಸ್ವಾಮಿಗಳು, ಸರ್ವಾಧ್ಯಕ್ಷ ಹ.ಮ. ಪೂಜಾರ, ಮಲ್ಲನಗೌಡ ಪಾಟೀಲ (ಸುಂಗಠಾಣ), ಜಗದೀಶ ಸಾಲಳ್ಳಿ, ಶೋಭಾ ಮೇಡೆಗಾರ, ಮಡಿವಾಳಮ್ಮ ನಾಡಗೌಡ, ಕಮಲಾ ಮುರಾಳ, ಅಂಬಿಕಾ ಕರಕಪ್ಪಗೋಳ, ಭಾಗ್ಯಜೋತಿ ಭಗವಂತಗೌಡರ, ಶೈಲಜಾ ಸ್ಥಾವರಮಠ, ಅನುಸೂಯಾ ಪರಗೊಂಡ, ಶೈಲಶ್ರೀ ಯಡ್ರಾಮಿ, ಸೇರಿ ಜಿಲ್ಲಾ, ತಾಲೂಕು ಕಸಾಪ ಪದಾಧಿಕಾರಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net