ನ್ಯುಮೋನಿಯಾಗೆ ನೈರ್ಮಲ್ಯ, ಲಸಿಕೆಯೇ ಮದ್ದು ; ನ.12ಕ್ಕೆ ವಿಶ್ವ ನ್ಯುಮೋನಿಯಾ ದಿನ

ನ್ಯುಮೋನಿಯಾದಿಂದ ಶ್ವಾಸಕೋಸಕ್ಕೆ ಅಪಾಯ
ನ್ಯುಮೋನಿಯಾದಿಂದ ಶ್ವಾಸಕೋಸಕ್ಕೆ ಅಪಾಯ
Published on

ಪ್ರಮುಖ ಮುಖ್ಯಾಂಶಗಳು

  • 5 ವರ್ಷದೊಳಗಿನ ಮಕ್ಕಳಲ್ಲಿ ಸಾವಿಗೆ ಪ್ರಮುಖ ಕಾರಣ
  • 70 ವರ್ಷ ಮೇಲ್ಟಪಟ್ಟ ವೃದ್ಧರಿಗೂ ಅಪಾಯ
  • ನ್ಯುಮೋನಿಯಾವನ್ನು ಲಘುವಾಗಿ ಪರಿಗಣಿಸದಿರಿ
ನ್ಯುಮೋನಿಯಾ ಇಡೀ ವಿಶ್ವವನ್ನೇ ಕಾಡುತ್ತಿರುವ ಸಾಂಕ್ರಾಮಿಕವಾಗಿದ್ದು, ಅನೇಕ ಸಾರಿ 5 ವರ್ಷದೊಳಗಿನ ಮಕ್ಕಳು, 70 ವರ್ಷ ಮೇಲ್ಪಟ್ಟ ವೃದ್ಧರ ಬಾಳಿಗೆ ಕಂಟಕವಾಗಿದೆ. ಎಚ್ಚರಿಕೆ ವಹಿಸದಿದ್ದರೆ ಜೀವನವನ್ನೇ ಕಸಿಯುತ್ತದೆ.
ನ್ಯುಮೋನಿಯಾ ತೀವ್ರ ಉಸಿರಾಟದ ತೊಂದರೆ (ಸಾರಿ) ಸಮಸ್ಯೆಯಾಗಿದ್ದು, ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ರಾಜ್ಯದಲ್ಲಿ ಪ್ರಸಕ್ತ ವರ್ಷ 8,202 ಮಂದಿ ನ್ಯುಮೋನಿಯಾದಿಂದ ಬಳಲಿದ್ದು, 9 ಮಂದಿ ಸಾವಿಗೀಡಾಗಿದ್ದಾರೆ. ಕಳೆದ 2024ರಲ್ಲಿ 8,014 ಸೋಂಕಿತರಲ್ಲಿ 15 ಮಂದಿ ಮೃತಪಟ್ಟಿದ್ದರು. 2023ರಲ್ಲಿ 10,239 ಮಂದಿ ಸೋಂಕಿನಿಂದ ಬಳಲಿದ್ದು, ನಾಲ್ವರು ಸಾವಿಗೀಡಾಗಿದ್ದರು.
ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ವರದಿ ಪ್ರಕಾರ 2023ರಲ್ಲಿ ಜಾಗತಿಕವಾಗಿ 2.5 ದಶಲಕ್ಷ ಜನ ನ್ಯುಮೋನಿಯಾಗೆ ಬಲಿಯಾಗಿದ್ದು, ಇದರಲ್ಲಿ 6,10,000 ಐದು ವರ್ಷದೊಳಗಿನ ಮಕ್ಕಳು ಎಂದು ಹೇಳಿದೆ. ಕಡಿಮೆ ಲಸಿಕೀಕರಣ ದರ ಮತ್ತು ಅಪೌಷ್ಟಿಕತೆ ಇರುವ ಪ್ರದೇಶಗಳಲ್ಲಿನ ವಾಸಿಗಳು, ಅಡುಗೆಗೆ ಮಾಲಿನ್ಯಕಾರಕ ಇಂಧನ ಬಳಸುವ ಮನೆಗಳಲ್ಲಿನ ವಾಸಿಗಳು, ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವವರು ಹಾಗೂ ಧೂಮಪಾನಿಗಳಲ್ಲಿ ನ್ಯುಮೋನಿಯ ಅಪಾಯ ಹೆಚ್ಚಿರುತ್ತದೆ.

ನ್ಯೂಮೋನಿಯಾ ಎಂದರೇನು?

ನ್ಯುಮೋನಿಯಾ ಒಂದು ಸೋಂಕು, ಇದು ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ತೀವ್ರತರ ಉಸಿರಾಟದ ಸಮಸ್ಯೆಯಾಗಿದೆ. ಗಾಳಿಯ ಚೀಲಗಳ ಅಂಗಾಂಶ ಉರಿಯೂತದಿಂದ ಕೂಡಿದ್ದು, ದ್ರವ ಅಥವಾ ಕೀವುಗಳಿಂದ ತುಂಬಿರುತ್ತದೆ. ಇದಲ್ಲದೆ ಬ್ಯಾಕ್ಟೀರಿಯಾ, ವೈರಾಣುಗಳು ಅಥವಾ ಶಿಲೀಂಧ್ರಗಳು ಸಹ ಇದಕ್ಕೆ ಕಾರಣವಾಗಬಹುದು. ಆದರೆ ಇದು ತಡೆಗಟ್ಟಬಹುದಾದ ರೋಗವಾಗಿದ್ದು, ಲಸಿಕೆ, ಆರೋಗ್ಯ ಶಿಕ್ಷಣ ಮತ್ತು ಸಮುದಾಯ ಆರೋಗ್ಯ ಶಿಬಿರಗಳ ಮೂಲಕ ಜಾಗೃತಿ ಮೂಡಿಸುವ ಅಗತ್ಯವಿದೆ ಎನ್ನುತ್ತಾರೆ ಶ್ವಾಸಕೋಶ ತಜ್ಞರು.

ರೋಗದ ಲಕ್ಷಣಗಳು

ನಿರಂತರ ಕೆಮ್ಮು: ಕೆಮ್ಮಿದಾಗ ಹಸಿರು, ಹಳದಿ ಅಥವಾ ರಕ್ತಸಿಕ್ತ ಲೋಳೆ ಕಾಣಿಸಿಕೊಳ್ಳುವುದು. ಇದು ಸಾಮಾನ್ಯ ಶೀತಕ್ಕಿಂತ ಭಿನ್ನವಾಗಿದ್ದು, ಕಾಲಾಂತರದಲ್ಲಿ ಹೆಚ್ಚುವರಿ ಎದೆ ನೋವಿನಿಂದ ಕೂಡಿರುತ್ತದೆ.
ತೀವ್ರ ಜ್ವರ ಮತ್ತು ಶೀತ: ನ್ಯುಮೋನಿಯಾದಲ್ಲಿ ಹಠಾತ್ ಜ್ವರ ಕಾಣಿಸಿಕೊಳ್ಳಲಿದ್ದು, ಶೀತ ಮತ್ತು ಬೆವರುವಿಕೆ ಇರುತ್ತದೆ. ದೀರ್ಘಕಾಲದ ಜ್ವರಕ್ಕೆ ವೈದ್ಯಕೀಯ ಚಿಕಿತ್ಸೆ ಅತ್ಯಗತ್ಯ.
* ಉಸಿರಾಟದ ತೊಂದರೆ: ನಡೆಯುವುದು ಅಥವಾ ಮೆಟ್ಟಿಲುಗಳನ್ನು ಹತ್ತುವುದು ಮುಂತಾದ ಕೆಲಸಗಳನ್ನು ಮಾಡುವಾಗಲೂ ಉಸಿರಾಟದ ತೊಂದರೆ ಗಂಭೀರ ಲಕ್ಷಣವಾಗಿರುತ್ತದೆ. ಇದು ಶ್ವಾಸಕೋಶವನ್ನು ಉಬ್ಬಿಸಿ, ಆಮ್ಲಜನಕದ ಸೇವನೆ ನಿಧಾನಗೊಳಿಸುತ್ತದೆ.
* ಎದೆ ನೋವು: ಕೆಮ್ಮುವಾಗ, ಆಳವಾದ ಉಸಿರಾಟದ ವೇಳೆ ಎದೆ ನೋವು ಕಾಣಿಸಿಕೊಂಡರೆ ಅದು ನ್ಯುಮೋನಿಯಾ * ಆಯಾಸ ಮತ್ತು ದೌರ್ಬಲ್ಯ: ದುರ್ಬಲ ಅಥವಾ ದಣಿದ ಭಾವನೆ. ನ್ಯುಮೋನಿಯಾದ ಸೋಂಕಿನ ವಿರುದ್ಧ ಹೋರಾಡಲು ದೇಹವು ಹೆಚ್ಚು ದಣಿಯುತ್ತದೆ.
* ಗೊಂದಲ: ನ್ಯುಮೋನಿಯಾ ರೋಗಿಗಳಲ್ಲಿ ಮಾನಸಿಕ ಅರಿವಿನಲ್ಲಿ ಬದಲಾವಣೆಗಳು ಉಂಟಾಗಿ ಗೊಂದಲಕ್ಕೆ ಒಳಗಾಗಬಹುದು ಅಥವಾ ಏಕಾಗ್ರತೆ ಸಮಸ್ಯೆ ಕಾಣಿಸಬಹುದು. ಇದು ರೋಗದ ತೀವ್ರತೆ ಸೂಚಿಸುತ್ತದೆ.
* ವಾಕರಿಕೆ - ಅತಿಸಾರ: ವಾಕರಿಕೆ, ವಾಂತಿ ಅಥವಾ ಅತಿಸಾರದಂತಹ ಕೆಲವು ಜೀರ್ಣಕಾರಿ ತೊಂದರೆಗಳು ಕಂಡು ಬರುತ್ತವೆ.

ಎಚ್ಚರಿಕೆ ಕ್ರಮಗಳು:

* ನ್ಯುಮೋನಿಯಾಗೆ ಕಾರಣವಾಗುವ ನ್ಯುಮೋಕೊಕಸ್, ಹೆಬ್ ಮತ್ತು ಇನ್ಫೂಯೇಂಜಾದಂತಹ ಬ್ಯಾಕ್ಟೀರಿಯಾ ವಿರುದ್ಧ ಲಸಿಕೆ ಪ್ರೋತ್ಸಾಹಿಸುವುದು.
* ಶಿಶುಗಳಿಗೆ ಎದೆಹಾಲುಣಿಸುವಿಕೆಯಿಂದ ಉತ್ತಮ ಪೋಷಣೆ ಹಾಗೂ ರೋಗನಿರೋಧಕ ಶಕ್ತಿ ಬಲಪಡಿಸುವುದು.
* ಒಳಾಂಗಣ ಹೊಗೆ ಕಡಿಮೆ ಮಾಡಿ ಹೊರಾಂಗಣ ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡುವುದು.
* ಧೂಮಪಾನ - ತಂಬಾಕು ತಪ್ಪಿಸುವುದು.
* ಸಾಂಕ್ರಾಮಿಕ ರೋಗಗಳಿಂದ ಮುಕ್ತರಾಗಲು ಕೈ ತೊಳೆಯುವುದು, ಮಾಸ್ಕ್ ಧರಿಸುವುದು ಸೇರಿ ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡುವುದು.
* ಅಸ್ತಮಾ, ಮಧುಮೇಹ, ಅಧಿಕರಕ್ತದೊತ್ತಡದಂತಹ ದೀರ್ಘಾಕಾಲಿನ ಪರಿಸ್ಥಿತಿಗಳನ್ನು ಉತ್ತಮವಾಗಿ ನಿರ್ವಹಿಸುವುದು.
* ಕಲುಷಿತ ಅಥವಾ ಜನದಟ್ಟಣೆ ಪ್ರದೇಶದಲ್ಲಿ ಅನಗತ್ಯ ಸಂಚಾರ ತಪ್ಪಿಸುವುದು
* ವ್ಯಾಯಾಮ, ಯೋಗ, ಚಟುವಟಿಕೆಗಳು, ಆರೋಗ್ಯಕರ ಆಹಾರ ಸೇವನೆಗೆ ಆದ್ಯತೆ ನೀಡುವುದು.

ಇತಿಹಾಸ:

ವಿಶ್ವ ನ್ಯುಮೋನಿಯಾ ದಿನವನ್ನು ಜಾಗತಿಕ ಒಕ್ಕೂಟವು ಮೊದಲ ಬಾರಿಗೆ 2009ರಲ್ಲಿ ಆಚರಿಸಿತು. ಪ್ರತಿ ವರ್ಷ ನ್ಯೂಮೋನಿಯಾದಿಂದ ಉಂಟಾಗುವ ಲಕ್ಷಾಂತರ ತಡೆಗಟ್ಟಬಹುದಾದ ಸಾವುಗಳ ಬಗ್ಗೆ ಗಮನ ಸೆಳೆಯಲು ಈ ದಿನ ಆಚರಿಸಲಾಗುತ್ತದೆ. ನಂತರದಲ್ಲಿ ಯುನಿಸಿಫ್, ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವಾದ್ಯಂತ ಆರೋಗ್ಯ ರಕ್ಷಣಾ ವ್ಯವಸ್ಥೆಗಳು ಸೇರಿ ಅನೇಕ ಸಂಸ್ಥೆಗಳು ಈ ಆಂದೋಲನದಲ್ಲಿ ಕೈಜೋಡಿಸಿದವು. ಇದೀಗ ಇದು ಜಾಗತಿಕ ಆರೋಗ್ಯ ಜಾಗೃತಿ ಕಾರ್ಯಕ್ರಮವಾಗಿದ್ದು, ಲಸಿಕೆ ಮತ್ತು ಗುಣಮಟ್ಟದ ಚಿಕಿತ್ಸೆಯ ಮಹತ್ವವನ್ನು ತಿಳಿಸಲಿದೆ. ಜತೆಗೆ ಸರ್ಕಾರಗಳು ಉಸಿರಾಟದ ಆರೈಕೆ ಸೇವೆಗಳನ್ನು ಬಲಪಡಿಸಲು ಇದು ಪ್ರೋತ್ಸಾಹಿಸಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net