ಹೈದರಾಬಾದ್ ಕರ್ನಾಟಕ ಪ್ರಾದೇಶಿಕ ಸ್ಥಳೀಯ ಮೀಸಲಾತಿಯಿಂದ ಒಕ್ಕಲಿಗರಿಗೆ ಅನ್ಯಾಯ: ಸಮಸ್ಯೆ ಸರಿಪಡಿಸದಿದ್ದರೆ ಬೃಹತ್ ಹೋರಾಟ- Local Reservation

ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ
ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ
Published on
ಬೆಂಗಳೂರು: ಹೈದರಾಬಾದ್ ಕರ್ನಾಟಕ ಭಾಗಕ್ಕೆ ಅನುಕೂಲವಾಗಲೆಂದು ‘371 ಜೆ’ ಅಡಿ ತಂದಿರುವ ಮೀಸಲಾತಿಯಿಂದ ಒಕ್ಕಲಿಗರು ಸೇರಿ ಕೆಲ ಸಮುದಾಯಗಳಿಗೆ ಅನ್ಯಾಯವಾಗಿದೆ. ಹಾಗಾಗಿ, ಇದನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಕಿತ್ತೂರು, ಹಳೆ ಮೈಸೂರು ಮತ್ತು ಕರಾವಳಿ ಕರ್ನಾಟಕದ ಜನರನ್ನು ಒಟ್ಟುಗೂಡಿಸಿ ಬೃಹತ್ ಹೋರಾಟ ನಡೆಸುವುದಾಗಿ ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ, ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದೆ.
ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಎಂ.ನಾಗರಾಜ್ ಮಾತನಾಡಿ, ಹೈದರಾಬಾದ್ ಕರ್ನಾಟಕ ಪ್ರಾದೇಶಿಕ ಸ್ಥಳೀಯ ಮೀಸಲಾತಿಯಿಂದ ಇತರ ಭಾಗದ ನಿರುದ್ಯೋಗಿಗಳಿಗೆ ಮತ್ತು ನೌಕರರಿಗೆ ಅನ್ಯಾಯವಾಗುತ್ತಿದೆ. ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಕೊಟ್ಟಿರುವ ವಿಶೇಷ ಮೀಸಲಾತಿಗೆ ನಮಗೆ ಆಕ್ಷೇಪ ಇಲ್ಲ. ಆದರೆ, ಆ ಭಾಗದಲ್ಲಿರುವ ಕೆಲ ಜಾತಿಗಳಿಗೆ ಮಾತ್ರ ಈ ಮೀಸಲಾತಿ ಅನುಕೂಲವಾಗಿದ್ದು, ತಳಮಟ್ಟದ ಸಮುದಾಯಗಳಿಗೆ ಅನನುಕೂಲಕರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆ ಭಾಗದಲ್ಲಿ ಒಕ್ಕಲಿಗ ಸಮುದಾಯವರು ನೆಲಸಿಲ್ಲ. ಹಾಗಾಗಿ, ನಮ್ಮ ಸಮುದಾಯದ ಯಾವೊಬ್ಬ ಅಭ್ಯರ್ಥಿ ಮೀಸಲಾತಿಯದಡಿ ಬರಲ್ಲ. ಇದು ನಮ್ಮ ಸಮುದಾಯವನ್ನು ವ್ಯವಸ್ಥಿತವಾಗಿ ತುಳಿಯುವ ಭಾಗವಾಗಿದೆ. ರಾಜ್ಯಮಟ್ಟದ ವ್ಯಾಪ್ತಿಗೆ ಬರುವ ಕಚೇರಿ ಅಥವಾ ಪ್ರಾಧಿಕಾರದ ಹುದ್ದೆಗಳಲ್ಲೂ ಶೇ.8 ನೇಮಕಾತಿ,ಬಡ್ತಿಗಳನ್ನು ಹೈದರಾಬಾದ್ ಕರ್ನಾಟಕದ ಸ್ಥಳೀಯ ಅಭ್ಯರ್ಥಿಗಳಿಗೆ ನೀಡಲಾಗುತ್ತಿದೆ. ಇದರಿಂದಾಗಿ ಇತರ ಭಾಗದವರಿಗೆ ಅನ್ಯಾಯವಾಗಲಿದೆ ಎಂದರು.
ಪ್ರಧಾನ ಸಂಚಾಲಕ ಆಡಿಟರ್ ನಾಗರಾಜ್ ಯಲಚವಾಡಿ ಮಾತನಾಡಿ, ಹೈದರಾಬಾದ್ ಕರ್ನಾಟಕ ಜನರನ್ನು ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಸಬಲೀಕರಣ ಮಾಡುವುದಕ್ಕೆ ನಮ್ಮ ತಕರಾರಿಲ್ಲ. ಆದರೆ, ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಆಗಿರುವ ದೊಡ್ಡ ತಾರತಮ್ಯ ಸಹಿಸುವುದಿಲ್ಲ. ಹೈದರಾಬಾದ್ ಕರ್ನಾಟಕಕ್ಕೆ ಆಯ್ಕೆಯಾದ ನೌಕರರನ್ನು ಇತರ ಭಾಗಕ್ಕೆ ನಿಯುಕ್ತಿಗೊಳಿಸಬಾರದು.ಎಲ್ಲ ಹಂತಗಳಲ್ಲೂ ಪ್ರತ್ಯೇಕ ಜ್ಯೇಷ್ಠತಾ ಪಟ್ಟಿ ತಯಾರಿಸಿ ಬಡ್ತಿ ನೀಡಬೇಕು. ಪ್ರತ್ಯೇಕ ಹುದ್ದೆ ಗುರುತಿಸಿರುವ ಹಿನ್ನೆಲೆಯಲ್ಲಿ ಇತರ ಭಾಗದ ಹುದ್ದೆಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು. ಸಚಿವ ಸಂಪುಟದ ಉಪಸಮಿತಿ ತೆಗೆದುಕೊಂಡಿರುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದರು.
ಉಪಾಧ್ಯಕ್ಷ ಕೋನಪ್ಪ ರಡ್ಡಿ, ಸಮಿತಿಯ ಪದಾಧಿಕಾರಿಗಳಾದ ಆನಂದ್, ಪುಟ್ಟಸ್ವಾಮಿ, ಮೂಡ್ಲಿಗಿರಿ ಗೌಡ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net