ಐವಿಎಫ್​ಗೆ ಗಂಡನ ಒಪ್ಪಿಗೆ ಕಡ್ಡಾಯ!

ಐವಿಎಫ್​ಗೆ ಗಂಡನ ಒಪ್ಪಿಗೆ ಕಡ್ಡಾಯ!
ಐವಿಎಫ್​ಗೆ ಗಂಡನ ಒಪ್ಪಿಗೆ ಕಡ್ಡಾಯ!
Published on

ಪ್ರಮುಖ ಮುಖ್ಯಾಂಶಗಳು

  • ಐವಿಎಫ್​ಗೆ ಗಂಡನ ಒಪ್ಪಿಗೆ ಕಡ್ಡಾಯ
  • ಹೈಕೋರ್ಟ್​ಗೆ ತಿಳಿಸಿದ ಕೇಂದ್ರ ವಿಚ್ಛೇದಿತೆ ಮತ್ತು ವಿಧವೆಯರಿಗೆ ಮಾತ್ರ ವಿನಾಯಿತಿ

ಬೆಂಗಳೂರು: ಗಂಡನ ಸಮ್ಮತಿಯಿಲ್ಲದೆ ಆತನ ವೀರ್ಯಾಣು ಬಳಸಿ ಐವಿಫ್ ಮೂಲಕ ಗರ್ಭಧಾರಣೆ ಮಾಡಲು ಪತ್ನಿಗೆ ಅವಕಾಶವಿಲ್ಲ ಮತ್ತು ಪತಿಯು ಮಕ್ಕಳನ್ನು ಹೊಂದಲು ಅಸಮರ್ಥ ಎಂದು ಸಾಬೀತಾಗದ ಹೊರತು ದಾನಿಗಳ ವೀರ್ಯಾಣುವನ್ನು ಚಿಕಿತ್ಸೆಗೆ ಬಳಸುವಂತಿಲ್ಲ ಎಂದು ಹೈಕೋರ್ಟ್​ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಕ್ಲಿನಿಕ್​ನಲ್ಲಿ ಸಂಗ್ರಹಿಸಿಡಲಾಗಿರುವ ಪತಿಯ ವೀರ್ಯಾಣುವನ್ನು ಐವಿಎಫ್​ಗೆ ಬಳಸಲು ಅನುಮತಿ ನೀಡುವಂತೆ ಕೋರಿ ಬೆಂಗಳೂರಿನ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ಆರಂಭದಲ್ಲಿ ಗಂಡ ಒಪ್ಪಿಗೆ ನೀಡಿದ್ದರೂ, ಈಗ ದಾಂಪತ್ಯ ಕಲಹದ ಕಾರಣ ಐವಿಎಫ್​ಗೆ ನಿರಾಕರಿಸಿದ್ದಾರೆ. ಆದ್ದರಿಂದ ಮಹಿಳೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಗೆ ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರದ ಪರ ಅಡೊಷನಲ್ ಸಾಲಿಸಿಟರ್ ಜನರಲ್ ಅರವಿಂದ ಕಾಮತ್, ದಾಂಪತ್ಯ ಜೀವನದಲ್ಲಿ ಇರುವವರೆಗೆ ಪತಿಯ ಸಮ್ಮತಿಯಿಲ್ಲದೆ ಐವಿಎಫ್​ಗೆ ಆತನ ವೀರ್ಯåಣು ಬಳಸುವುದು ಅಥವಾ ದಾನಿಗಳ ವೀರ್ಯಾಣು ಪಡೆಯುವುದು ಸಾಧ್ಯವಿಲ್ಲ. ಅರ್ಜಿದಾರರಿಗೆ ಏಕೈಕ ಆಯ್ಕೆಯೆಂದರೆ ವಿಚ್ಚೇದನದ ಮೂಲಕ ‘ಸಿಂಗಲ್ ವುಮೆನ್’ ಆಗಿ ಚಿಕಿತ್ಸೆ ಪಡೆಯುವುದು ಎಂದು ತಿಳಿಸಿದರು.

ಆ. 20ಕ್ಕೆ ವಿಚಾರಣೆ ಮುಂದೂಡಿಕೆ: ಇನ್ನೂ ಹುಟ್ಟದ ಮಗುವಿನ ಪರವಾಗಿ ಮಹಿಳೆ ಪ್ರಮಾಣಪತ್ರ ನೀಡಲು ಹೇಗೆ ಸಾಧ್ಯ? 22 ವರ್ಷಗಳ ನಂತರ ಆ ಮಗು ಹಕ್ಕು ಕೇಳಿದರೆ ಏನು ಮಾಡುವುದು? ಎಂಬ ಆಲೋಚನೆಯಿಂದಲೇ ಕಾನೂನಿನಲ್ಲಿ ಗಂಡ-ಹೆಂಡತಿ ಇಬ್ಬರ ಸಮ್ಮತಿಯನ್ನೂ ಕಡ್ಡಾಯಗೊಳಿಸಿದೆ. ವಿಚ್ಛೇದಿತೆ ಅಥವಾ ವಿಧವೆಯರಿಗೆ ಮಾತ್ರ ವಿನಾಯಿತಿ ನೀಡಿದೆ ಎಂದು ಸ್ಪಷ್ಟಪಡಿಸಿತು. ಹೆಚ್ಚುವರಿ ವಾದಾಂಶಗಳನ್ನು ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಲಾಗಿದ್ದು, ಮುಂದಿನ ವಿಚಾರಣೆ ಆ. 20ಕ್ಕೆ ನಿಗದಿಯಾಗಿದೆ.

ಆಸ್ತಿ ವಿವಾದದ ಆತಂಕ

ಪತಿಯ ಪರ ವಕೀಲರು ವಾದಿಸಿ, ವಿವಾಹವು ಅಸ್ತಿತ್ವದಲ್ಲಿದ್ದಾಗ ಮೂರನೇ ವ್ಯಕ್ತಿಯ ವೀರ್ಯಾಣುವಿನಿಂದ ಮಗು ಜನಿಸಿದರೆ, ಆ ಮಗುವಿಗೆ ಮಹಿಳೆಯ ಪತಿಯ ಆಸ್ತಿಯಲ್ಲಿ ಹಕ್ಕು ಕೋರುವ ಅಧಿಕಾರ ಸಿಗುತ್ತದೆ. ಇದು ಪತಿಯ ಹಿಂದಿನ ಮಗುವಿನ ಹಕ್ಕುಗಳ ಮೇಲೆಯೂ ಪರಿಣಾಮ ಬೀರುತ್ತದೆ ಎಂದರು. ಆಗ ಪ್ರತಿಕ್ರಿಯಿಸಿದ ಪತ್ನಿ ಪರ ವಕೀಲರು, ಅವರ ಕಾಳಜಿ ಕೇವಲ ಆಸ್ತಿಯ ಮೇಲಿದೆ. ಮಗುವಿಗೆ ಪತಿಯ ಅಥವಾ ಕುಟುಂಬದ ಆಸ್ತಿಯಲ್ಲಿ ಯಾವುದೇ ಹಕ್ಕಿರುವುದಿಲ್ಲ ಎಂದು ಪ್ರಮಾಣಪತ್ರ ನೀಡಲು ಸಿದ್ಧರಿದ್ದೇವೆ ಎಂದು ವಾದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net