ಪಿರಿಯಾಪಟ್ಟಣ ತಾಲೂಕಿನ ಹುಣಸವಾಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವ ಮೂಲಕ ಮತ್ತೆ ‘ಕೈ’ವಶವಾಗಿದೆ.
ಹುಣಸವಾಡಿ ಗ್ರಾಮದಲ್ಲಿ 11 ನಿರ್ದೆಶಕರ ಸ್ಥಾನಗಳ ಪೈಕಿ 1 ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 10 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಈ ಪೈಕಿ 6 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಹಾಗೂ 4 ಸ್ಥಾನ ಜೆಡಿಎಸ್ ಬೆಂಬಲಿತರು ಆಯ್ಕೆಯಾಗುವ ಮೂಲಕ ಸಂಘದ 5 ವರ್ಷಗಳ ಅವಧಿಯ ಅಧಿಕಾರವನ್ನು ಕಾಂಗ್ರೆಸ್ ಬೆಂಬಲಿತರು ಮತ್ತೆ ಮಡಿಲಿಗೇರಿಸಿಕೊಂಡಿದ್ದಾರೆ.
ಈ ವೇಳೆ ಮುಖಂಡ ಇಂದ್ರೇಶ್ ಮಾತನಾಡಿ, ಮಾಜಿ ಸಚಿವ ಕೆ.ವೆಂಕಟೇಶ್ ಅವರ ನಾಯಕತ್ವ ಮೆಚ್ಚಿ ತಾಲೂಕಿನಾದ್ಯಂತ ಗ್ರಾಮ ಪಂಚಾಯಿತಿ, ಸಹಕಾರ ಸಂಘ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಬೆಂಬಲಿತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಆಯ್ಕೆ ಮಾಡುತ್ತಿರುವುದಕ್ಕೆ ಧನ್ಯವಾದ ಸಲ್ಲಿಸುವೆ. ಜತೆಗೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಹಾಗೂ ಮೈಮುಲ್ ನಿರ್ದೇಶಕ ಪ್ರಕಾಶ್ ಅವರ ಸಹಕಾರದಿಂದ ನಮ್ಮ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹೆಚ್ಚಿನ ನೆರವು ದೊರಕಿದ್ದರಿಂದ ಕಾಂಗ್ರೆಸ್ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಲು ಸಹಕಾರಿಯಾಗಿದೆ ಎಂದರು.
ಸಹಕಾರ ಇಲಾಖೆ ಸಹಾಯಕ ಅಭಿವೃದ್ಧಿ ಅಧಿಕಾರಿ ಹಿತೇಂದ್ರ ಅವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ನಿರ್ದೆಶಕರಾಗಿ ವೆಂಕಟೇಗೌಡ, ಪುಟ್ಟೇಗೌಡ, ಶಿವಣ್ಣೇಗೌಡ, ಈಶ್ವರ್, ತಮ್ಮೇಗೌಡ, ಚಂದ್ರೇಗೌಡ, ಚಂದ್ರಶೇಖರ್, ಸುಬ್ಬಾಚಾರಿ, ಗೋವಿಂದೇಗೌಡ, ನಂಜುಂಡಯ್ಯ, ಲಕ್ಷ್ಮಣನಾಯ್ಕ ಆಯ್ಕೆಯಾದರು. ಸಹಾಯಕ ಚುನಾವಣಾಧಿಕಾರಿಗಳಾಗಿ ಕೃಷ್ಣ ಕುಮಾರ್, ದೇವರಾಜ್, ಕುಮಾರಸ್ವಾಮಿ ಕರ್ತವ್ಯ ನಿರ್ವಹಿಸಿದರು.
ಗ್ರಾಮದ ಮುಖಂಡರಾದ ನಾಗರಾಜ್, ಗೋವಿಂದೇಗೌಡ, ಶಿವಣ್ಣ, ರಾಮೇಗೌಡ, ಈಶ್ವರೇಗೌಡ, ಎಚ್.ಆರ್.ಹರೀಶ್, ಹರ್ಷಾ, ಕೃಷ್ಣೇಗೌಡ, ಸುರೇಶ್, ರಮೇಶ್, ಚಂದ್ರಹಾಸ, ಹರೀಶ್, ಸಂಘದ ಕಾರ್ಯದರ್ಶಿ ದೇವರಾಜ್ ಹಾಲು ಪರೀಕ್ಷಕ ಸಚಿನ್, ವಿಕಾಸ ಇತರರಿದ್ದರು.