ಮುದ್ದೇಬಿಹಾಳದ ಪಂಜರಹುಲಿ ಹೋಟೆಲ್‌ನಲ್ಲಿ ನಡೆದ ರೈತ ಸಂಘದ ಸುದ್ದಿಗೋಷ್ಠಿಯಲ್ಲಿ ಶಾಂತಗೌಡ ಪಾಟೀಲ ನಡಹಳ್ಳಿ ಮಾತನಾಡಿದರು. ಚುನಪ್ಪ ಪೂಜೇರಿ, ರಾಹುಲ ಕುಬಕಡ್ಡಿ, ಸಂಗಮೇಶ ಸಗರ ಮತ್ತಿತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ರೈತ ಸಂಘದ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿಕೆ
ಲಕ್ಷ ರೈತರು ಭಾಗಿಯಾಗುವ ನಿರೀಕ್ಷೆ
ಮುದ್ದೇಬಿಹಾಳ: ದೇಶದ ಬೆನ್ನೆಲುಬಾದ ರೈತ ಇಂದು ಸಾಲ ಮತ್ತು ಆತ್ಮಹತ್ಯೆ ಸಂಕೋಲೆಯಲ್ಲಿ ಸಿಲುಕಿ ನಲುಗುತ್ತಿದ್ದಾನೆ. ರೈತರ ಬದುಕು ಹಸನಾಗಲು ಬಲಿಷ್ಠ ಸಂಘಟನೆ ಅನಿವಾರ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಬರುವ ಮೇ 8ರಂದು ವಿಜಯಪುರದಲ್ಲಿ 4ನೇ ಬೃಹತ್ ರೈತ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮೇ 8ರಂದು ಬೆಳಗ್ಗೆ 10 ಗಂಟೆಗೆ ವಿಜಯಪುರದ ದರಬಾರ್ ಗ್ರೌಂಡ್ ಸ್ಟೇಷನ್ ಮುಖ್ಯ ರಸ್ತೆಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ರಾಜ್ಯದ ವಿವಿಧ ಮಠಾಧೀಶರು ಹಾಗೂ ವಿವಿಧೆಡೆಯಿಂದ ಸುಮಾರು 1 ಲಕ್ಷ ರೈತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮುದ್ದೇಬಿಹಾಳ ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾವೇಶ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರ ಕಬ್ಬಿಗೆ ಪ್ರತಿ ಟನ್‌ಗೆ 5,500 ರೂ. ಬೆಲೆ ನೀಡಬೇಕು ಹಾಗೂ ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು. ಹಿಂದೆ 20 ಸಾವಿರ ರೂ. ಗೆ ಸಿಗುತ್ತಿದ್ದ ಟಿಸಿ ಇಂದು 3 ಲಕ್ಷ ರೂ. ಆಗಿದೆ, ಇದು ರೈತರಿಗೆ ಆಘಾತಕಾರಿ ವಿಷಯವಾಗಿದೆ. ಆಲಮಟ್ಟಿ ಅಣೆಕಟ್ಟನ್ನು 524 ಮೀಟರ್ ಎತ್ತರಕ್ಕೆ ಏರಿಸುವಲ್ಲಿ ಸರ್ಕಾರ ನಿರ್ಲಕ್ಷೃ ವಹಿಸಿದೆ. ನಾಗರಬೆಟ್ಟದ ಏತ ನೀರಾವರಿ ಯೋಜನೆ ಶೇ.90ರಷ್ಟು ಮುಗಿದಿದ್ದರೂ ಇಂದಿಗೂ ಚಾಲನೆ ಸಿಕ್ಕಿಲ್ಲ. ಈ ಯೋಜನೆಗೆ ನೀಡಿದ ಒಂದು ತಿಂಗಳ ಕಾಲಾವಧಿಯೊಳಗೆ ಪೂರ್ಣಗೊಳ್ಳದಿದ್ದರೆ, ಆಲಮಟ್ಟಿಯ ಕೆಬಿಜೆಎಎಲ್ ಕಚೇರಿ ಹಾಗೂ ಶಾಸಕರ ಮನೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ಅಧ್ಯಕ್ಷ ಚುನಪ್ಪ ಪೂಜೇರಿ ಮಾತನಾಡಿ, ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ. ಕಬ್ಬು, ಈರುಳ್ಳಿ, ದ್ರಾಕ್ಷಿ, ದಾಳಿಂಬೆ ಬೆಳೆಗಾರರಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಹಳ್ಳಿ
ಹಳ್ಳಿಗಳಲ್ಲಿ ರೈತ ಸಂಘದ ಶಾಖೆಗಳು ಆರಂಭವಾಗುವ ಮೂಲಕ ಸಂಘಟನೆ ಬಲಗೊಳ್ಳಬೇಕು. ಸಮಾವೇಶದಲ್ಲಿ ರಾಜ್ಯದ 11 ಜನ ಪ್ರಗತಿಪರ ರೈತರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಕುಬಕಡ್ಡಿ ಹಾಗೂ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿದರು.
ತಾಲೂಕು ಅಧ್ಯಕ್ಷ ಮಹಾಂತಗೌಡ ಬಿರಾದಾರ, ಸೋಮು ಬಿರಾದಾರ, ಮುತ್ತು ಹಿರೇಮಠ, ಅಪ್ಪುಗೌಡ ಪಾಟೀಲ, ಶಿವನಗೌಡ ಗೌಡರ, ಈಶ್ವರ ಬಡಿಗೇರ, ಶಿವರಾಯ ಪ್ಯಾಟಿ ಮತ್ತಿತರರಿದ್ದರು.