ಹೊಸಪೇಟೆ: ತಾಲೂಕಿನ ಗುಂಡ್ಲವದ್ದಿಗೇರಿ ಗ್ರಾಮದ ಹೊಲವೊಂದರಲ್ಲಿ ಹೊಯ್ಸಳ ಕಾಲದ ಅಪ್ರಕಟಿತ ದಾನ ಶಾಸನವನ್ನು ವಿಜಯನಗರ ತಿರುಗಾಟ ಸಂಶೋಧನ ತಂಡದಿಂದ ಶೋಧ ಮಾಡಿದೆ.
ತುಮಕೂರು ಶಶಿಕುಮಾರ ನಾಯಕ ಅವರ ಮಾರ್ಗದರ್ಶನದಲ್ಲಿ ಗುಂಡ್ಲವದ್ದಿಗೆರೆ ಗ್ರಾಮದ ಗೌರವ ಶಿಕ್ಷಕ ಮಂಕಾಳಪ್ಪ, ಮಲ್ಲನಗೌಡ, ಗಂಗಾಧರ ಅವರ ಸಹಕಾರದಿಂದ ಸಂಶೋಧನ ತಂಡದ ಸದಸ್ಯರಾದ ಡಾ.ಗೋವಿಂದ, ಪ್ರೊ.ತಿಪ್ಪೇಸ್ವಾಮಿ, ಡಾ.ಕೃಷ್ಣ್ಣಗೌಡ, ಇಸ್ಮಾಯಿಲ್ ಸಿದ್ದಿಕ್, ಅಶೋಕ ತಲೇಖಾನ್ ಪತ್ತೆ ಹಚ್ಚಿದ್ದಾರೆ.
ಗ್ರಾನೈಟ್ ಕಲ್ಲಿನಲ್ಲಿ ಶಾಸನ ಬರೆಸಲಾಗಿದ್ದು, ಹದಿನೈದು ಸಾಲುಗಳುಳ್ಳ ಶಾಸನ ಎಂಟು ಅಡಿ ಎತ್ತರ, ಒಂದೂವರೆ ಅಡಿ ಅಗಲ ಇದೆ. ಹೊಯ್ಸಳರ ನರಸಿಂಹ ಚಕ್ರವರ್ತಿ ಕಾಲಾವಧಿಯಲ್ಲಿ ಗುಂಡ್ಲವದ್ದಿಗೆರೆಯನ್ನು ಕಾಸಿಗೌಡ ಆಳ್ವಿಕೆ ನಡೆಸುತ್ತಿದ್ದನು.
ಕೆರೆ ಕಟ್ಟಿಸಿ, ದೇಗುಲಕ್ಕೆ ಜಾಗಟೆ, ಕೊಳಗ ನೀಡಿರುವುದು ದಾಖಲಾಗಿದೆ. ಬಡಿಗೇರರ ವೃತ್ತಿ ಕುರಿತು ಉಲ್ಲೇಖವೂ ಇದೆ. ಇದರಿಂದ ಜಿಲ್ಲೆಯಲ್ಲಿ ಹೊಯ್ಸಳ ಅರಸರ ಆಳ್ವಿಕೆ ಇತ್ತೆಂದು ತಿಳಿದು ಬಂದಿದೆ.