‘ಇ’ಸ್ವತ್ತು ಇನ್ನೆಷ್ಟು ಹೊತ್ತು?

ಇ-ಸ್ವತ್ತು 2.0
ಇ-ಸ್ವತ್ತು 2.0
Published on
ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳಿಗೆ ಡಿಜಿಟಲ್ ಖಾತಾ (ಇ-ಖಾತಾ) ನೀಡುವ ಇ-ಸ್ವತ್ತು 2.0 ತಂತ್ರಾಂಶ ಸರಿದಾರಿಗೆ ಬರುತ್ತಿಲ್ಲ.ಇ-ಖಾತಾ ಅರ್ಜಿ ವಿಲೇವಾರಿ ಪ್ರಕ್ರಿಯೆಗೆ ದಿನೇ ದಿನೆ ಕಾನೂನಾತ್ಮಕ, ತಾಂತ್ರಿಕ ತೊಡಕು ಹೆಚ್ಚಾಗುತ್ತಿದ್ದು, ಎರಡು ವರ್ಷದಿಂದ ಡಿಜಿಟಲ್ ಖಾತಾ ಸಿಗದೆ ಆಸ್ತಿ ವಾರಸುದಾರರು ಎಪರದಾಡುವಂತಾಗಿದೆ.
ಉಪ ನೋಂದಣಿ ಕಚೇರಿಯಲ್ಲಿ ಸ್ಥಿರಾಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯ ಮಾಡಿ 2024ರ ಅಕ್ಟೋಬರ್‌ನಲ್ಲಿ ಕಂದಾಯ ಇಲಾಖೆ ಕಟ್ಟುನಿಟ್ಟಾಗಿ ಜಾರಿಗೆ ತಂದಿತು. ಆ ವೇಳೆಗಾಗಲೇ ರಾಜ್ಯದಲ್ಲಿ ಕೋಟ್ಯಂತರ ರೆವೆನ್ಯೂ ಸೈಟ್‌ಗಳ ನೋಂದಣಿ ವಹಿವಾಟು ನಡೆದಿತ್ತು. ಕೆಲವರು ಬ್ಯಾಂಕ್‌ನಲ್ಲಿ ಸಾಲ ಮಾಡಿ ಕಷ್ಟಕಾಲಕ್ಕೆಂದು ಸೈಟ್ ಖರೀದಿಸಿದ್ದರೇ ಮತ್ತೆ ಕೆಲವರು ಇ-ಖಾತಾ ಸಿಗದೆ, ಯಾವುದೇ ವಹಿವಾಟು ನಡೆಸುವುದಕ್ಕೂ ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ), ಮಹಾನಗರ ಪಾಲಿಕೆ, ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಸ್ತಿ ತಂತ್ರಾಂಶ ಜಾರಿಗೆ ತಂದು ಕೆಲವೇ ಕೆಲವು ಷರತ್ತು ವಿಧಿಸಿ ಇ-ಖಾತಾ ವಿತರಿಸಲಾಗುತ್ತಿದೆ. ಆದರೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1 ಕೋಟಿ ಆಸ್ತಿಗಳಿಗೆ ಡಿಜಿಟಲ್ ಖಾತಾ ವಿತರಿಸುವ ಜವಾಬ್ದಾರಿ ವಹಿಸಿತ್ತು. ಈ ಸಲುವಾಗಿ 2025ರ ಡಿ.1ರಂದು ವಿಧಾನಸೌಧದಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಕೈಯಲ್ಲಿ ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ ಕೊಡಿಸಲಾಯಿತು.
ಸ್‌ಟಾವೇರ್‌ನಲ್ಲಿ ತಾಂತ್ರಿಕ ಮತ್ತು ಕಾನೂನಾತ್ಮಕ ಸಮಸ್ಯೆಗಳು ಎದುರಾಗಿ ಇಲ್ಲಿಯವರೆಗೂ ಕೇವಲ 2 ಲಕ್ಷ ಆಸ್ತಿಗಳಿಗೆ ಇ-ಖಾತಾ ವಿತರಣೆ ಮಾಡಲು ಸಾಧ್ಯವಾಗಿಲ್ಲ. ಮೊದಲಿದ್ದ ಪಂಚತಂತ್ರ ಮತ್ತು ಇ-ಸ್ವತ್ತು 1.0 ಸ್‌ಟಾವೇರ್‌ಗೂ ಗ್ರಹಣ ಆವರಿಸಿತ್ತು. ಗ್ರಾಮ ಪಂಚಾಯಿತಿಯಲ್ಲಿ ಇ-ಖಾತಾ ವಿತರಣೆ ಸಂಪೂರ್ಣ ಸ್ಥಗಿತವಾಗಿದೆ.

ಸಮಸ್ಯೆಗೆ ಕಾರಣವೇನು?

ಇ-ಸ್ವತ್ತು ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುವಾಗ ಋಣಭಾರ ಪ್ರಮಾಣ ಪತ್ರ(ಇಸಿ) ಅಪ್‌ಲೋಡ್ ಮಾಡಿದರೆ ಕಾವೇರಿ 2.0ಕ್ಕೆ ಲಿಂಕ್ ಆಗುತ್ತಿಲ್ಲ. ಹಲವು ದಶಕಗಳಿಂದ ವಾಸವಾಗಿದ್ದರೂ ಗ್ರಾಮ ಠಾಣಾ ವ್ಯಾಪ್ತಿಯ ಆಸ್ತಿಗಳಿಗೆ ನೋಂದಾಯಿತ ಕ್ರಯಪತ್ರ ಕೇಳುತ್ತಿರುವುದು ದೊಡ್ಡ ಹಿನ್ನಡೆಗೆ ಕಾರಣವಾಗಿದೆ. ಮೊದಲು ಗ್ರಾಮಠಾಣಾ ಆಸ್ತಿಗಳಿಗೆ ಅರ್ಜಿ ಸಲ್ಲಿಸಿದಾಗ ಮೋಜಿಣಿಗೆ ಹೋಗಿ ಅಲ್ಲಿಂದ ಸರ್ವೇಯರ್ ಕೊಡುವ ನಕ್ಷೆ ಮೇಲೆ ಇ-ಖಾತಾ ನೀಡಲಾಗುತ್ತಿತ್ತು. ಇದೀಗ ನೋಂದಾಯಿತ ಕ್ರಯಪತ್ರ ಕಡ್ಡಾಯ ಮಾಡಿರುವುದು ಅವೈಜ್ಞಾನಿಕವಾಗಿದೆ. ಸಿಟಿಜನ್ ಲಾಗಿನ್‌ನಲ್ಲಿ ಅರ್ಜಿ ಸಲ್ಲಿಸಿದ ಮೇಲೆ ನಿಗದಿತ ಸಮಯದಲ್ಲಿ ಪಿಡಿಒ, ಕಾರ್ಯದರ್ಶಿ, ಆಡಳಿತಾಧಿಕಾರಿ, ಇಒ ಅಧಿಕಾರಿಗಳು ವಿಲೇವಾರಿ ಮಾಡದೆ ಇದ್ದರೇ ಸ್ವಯಂಚಾಲಿತವಾಗಿ (ಡೀಮ್ಡ್) ಇ-ಖಾತಾ ಸೃಜನೆ ಆಗಲಿದೆ ಎಂದು ಹೇಳಲಾಗಿತ್ತು. ಈ ವ್ಯವಸ್ಥೆ ಜಾರಿಗೆ ಬಂದಿಲ್ಲ. ಆದರಿಂದ ಅರ್ಜಿಗಳ ವಿಲೇವಾರಿ ಆಗದೆ ಉಳಿದಿವೆ.

ಹಳ್ಳಿ ಸೈಟ್‌ಗೆ ಕಟ್ಟುಪಾಡು

ನಗರ ಪ್ರದೇಶ ವ್ಯಾಪ್ತಿಯ ಅಕ್ರಮ ಬಡಾವಣೆಗಳಿಗೆ ಒಮ್ಮೆ ಇ-ಖಾತಾ ವಿತರಣೆ ನೆಪದಲ್ಲಿ ಕೇವಲ ಕ್ರಯ ಪತ್ರ ಮತ್ತು ಇಸಿ ಸ್ವೀಕರಿಸಿ ಡಿಜಿಟಲ್ ಖಾತಾ ವಿತರಿಸಲಾಗಿದೆ.ಆದರೆ, ಗ್ರಾಮೀಣ ಪಂಚಾಯಿತಿ ವ್ಯಾಪ್ತಿಯ ರೆವೆನ್ಯೂ ಸೈಟ್‌ಗಳಿಗೆ ಇ-ಖಾತಾ ಕೊಡಲು ನೂರೆಂಟು ನಿಯಮ ರೂಪಿಸಲಾಗಿದೆ. ಪಹಣಿಯಲ್ಲಿ ಖರಾಬು, ಸರ್ಕಾರಿ ಭೂಮಿ, ಕಾಲುವೆ, ಬಂಡಿಜಾಡು ಗುರುತಿಸಿ ಆನಂತರ ಇ-ಖಾತಾ ನೀಡಬೇಕೆಂದು ಸೂಚನೆ ನೀಡಲಾಗಿದೆ. ಬೆಂಗಳೂರು ನಗರ ಮತ್ತು ನಗರ, ಪಟ್ಟಣ ಸುತ್ತಮುತ್ತಲ ಗ್ರಾಮ ಪಂಚಾಯಿತಿಗಳಲ್ಲಿ ಮನೆಗಳೇ ನಿರ್ಮಾಣ ಆಗಿವೆ. ಈಗ ಖರಾಬು, ಸರ್ಕಾರಿ ಭೂಮಿ ಗುರುತಿಸುವುದು ಕಷ್ಟವಾಗಿದೆ. ಮತ್ತೊಂದೆಡೆ ಇದನ್ನು ಸರ್ವೇ ಮಾಡಬೇಕಾದ ಜವಾಬ್ದಾರಿ ಕಂದಾಯ ಇಲಾಖೆಗೆ ಬರುವುದರಿಂದ ಇಲಾಖೆಗಳ ನಡುವೆ ಸಮನ್ವಯತೆ ಕೊರತೆ ಕಾಡುತ್ತಿದೆ. ನಗರ ಪ್ರದೇಶದಲ್ಲಿ ಖರಾಬು ಜಮೀನು ಪರಿಗಣಸದೆ ಸರ್ಕಾರ ಇ-ಖಾತಾ ವಿತರಣೆ ಮಾಡಿದೆ ಆದರೆ, ಗ್ರಾಮಗಳಲ್ಲಿ ಪ್ರಶ್ನೆ ತೆಗೆದಿದೆ.

ಸಿಟಿಜನ್ ಲಾಗಿನ್ ಅವ್ಯವಸ್ಥೆ

ಹೊಸ ನಿಯಮದ ಪ್ರಕಾರ ಇ-ಸ್ವತ್ತು 2.0ರಲ್ಲಿ ಸಿಟಿಜನ್ ಲಾಗಿನ್‌ನಲ್ಲಿ ಆಸ್ತಿ ಮಾಲೀಕರು ಅರ್ಜಿ ಸಲ್ಲಿಸಬಹುದು. ತಾಂತ್ರಿಕ ಸಮಸ್ಯೆ ಇದ್ದರೂ ಸೈಬರ್ ಸೆಂಟರ್‌ನಲ್ಲಿ ಹಣದಾಸೆಗೆ ಆಸ್ತಿ ಮಾಲೀಕರಿಂದ ಪ್ರತಿ ಅರ್ಜಿಗೆ 1 ರಿಂದ 2 ಸಾವಿರ ರೂ. ಪಡೆದು ಇ-ಖಾತಾಗೆ ದಾಖಲೆ ಅಪ್‌ಲೋಡ್ ಮಾಡಿದ್ದಾರೆ. ಆರ್‌ಟಿಸಿ ಜಾಗದಲ್ಲಿ ಇಸಿ, ಇಸಿ ಬದಲಿಗೆ ಕ್ರಯ ಪತ್ರ, ಜಿಪಿಎಸ್ ೆಟೋ ಬದಲಿಗೆ ಸಾಮಾನ್ಯ ೆಟೋ ಅಪ್‌ಲೋಡ್ ಮಾಡಿದ್ದಾರೆ. ಲಕ್ಷಾಂತರ ಅರ್ಜಿಗಳು ಅಧಿಕಾರಿಗಳ ಲಾಗಿನ್‌ಗೆ ಬಂದಿದ್ದು, ವಿಲೇವಾರಿ ಮಾಡಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ.

ಗ್ರಾ.ಪಂ ಅಧಿಕಾರಿಗಳ ಸಮಸ್ಯೆ

- ಲೇಔಟ್‌ನಲ್ಲಿ ಖರಾಬು ಭೂಮಿ ಗುರುತು ಮಾಡುವುದು ಕಷ್ಟಸಾಧ್ಯ
- ಪಿಡಿಒ, ಕಾರ್ಯದರ್ಶಿ, ಇಒ ಲಾಗಿನ್‌ನಲ್ಲಿರುವ ಅರ್ಜಿ ವಿಲೇವಾರಿ
- ಸ್ಥಳ ಮಹಜರು ಮಾಡುವಾಗ ಸೈಟ್ ಲೋಕೇಷನ್ ಸಿಗದಿರುವುದು
- ಒಂದೇ ಸೈಟ್‌ಗೆ ಇಬ್ಬರು, ಮೂವರು ಮಾಲೀಕರ ಹಾಜರು ಗೊಂದಲ
- ಬಹುತೇಕ ಅರ್ಜಿಗಳಲ್ಲಿ ಲೋಪ, ತಿದ್ದಲು ಅವಕಾಶ ನೀಡದಿರುವುದು
- ಕ್ರಯ ಪತ್ರದಲ್ಲಿ ಆರ್‌ಟಿಸಿ ನಂಬರ್ ಹಾಕದೆ ಕಾನಿಸ್ಕೆ ನಂಬರ್ ಉಲ್ಲೇಖ
- ಕ್ರಯ ಪತ್ರದ ಮೇಲೆ ಇ-ಖಾತಾ ನೀಡಿದರೆ ಪಹಣಿ ಮಾಲೀಕರ ಆಕ್ಷೇಪ

ಸುಲಲಿತ ಸೇವೆಗೆ ಪರಿಹಾರ

- ಖಾಸಗಿ ಏಜೆನ್ಸಿಯಿಂದ ಗ್ರಾಪಂಗಳಲ್ಲೇ ಅರ್ಜಿ ಅಪ್‌ಲೋಡ್ ಅವಕಾಶ
- ಖರಾಬು ಭೂಮಿ ಪತ್ತೆಹಚ್ಚುವುದರ ಬಗ್ಗೆ ಕೂಡಲೇ ಕ್ರಮ ವಹಿಸಬೇಕು
- ಸದ್ಯ ಅಧಿಕಾರಿಗಳ ಲಾಗಿನ್‌ನಲ್ಲಿರುವ ಅರ್ಜಿ ವಿಲೇವಾರಿ ಸರಳವಾಗಲಿ
- ಇ-ಸ್ವತ್ತು 2.0 ತಂತ್ರಾಂಶದಲ್ಲಿನ ತಾಂತ್ರಿಕ ಸಮಸ್ಯೆ ಪರಿಹರಿಸುವುದು
- ಸಲ್ಲಿಕೆ ಆಗಿರುವ ಅರ್ಜಿಗಳ ಲೋಪ ತಿದ್ದಲು ಅಧಿಕಾರಿಗಳಿಗೆ ಅವಕಾಶ
- ಲೋಪ ಸರಿಪಡಿಸಿ ವಿಲೇವಾರಿಗೆ ಸಮಯಾವಕಾಶವನ್ನು ಕಲ್ಪಿಸುವುದು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net