KSRP ಪರೀಕ್ಷೆಯಲ್ಲಿ 25 ಅಂಕಗಳಿಸಿದ್ದ ಅಭ್ಯರ್ಥಿ VAO ಪರೀಕ್ಷೆಯಲ್ಲಿ 151 ಅಂಕ ಪಡೆದಿದ್ದೇ ಅನುಮಾನ? ಸಮಗ್ರ ತನಿಖೆಗೆ KEA ಆದೇಶ!

Doubts raised regarding the result of a candidate who scored 151 marks in the VAO examination; KEA instructs the Haveri Deputy Commissioner to examine the CCTV footage from the Shiggaon examination center and submit a report.
ವಿಎಒ ಪರೀಕ್ಷೆಯಲ್ಲಿ 151 ಅಂಕ ಗಳಿಸಿದ ಅಭ್ಯರ್ಥಿಯ ಫಲಿತಾಂಶದ ಸುತ್ತ ಅನುಮಾನ; ಶಿಗ್ಗಾಂವಿ ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ವರದಿ ನೀಡುವಂತೆ ಹಾವೇರಿ ಜಿಲ್ಲಾಧಿಕಾರಿಗೆ ಕೆಇಎ ಸೂಚನೆ.
Published on: 

ಹಾವೇರಿ: ಇತ್ತೀಚೆಗೆ ನಡೆದಿದ್ದ ಕರ್ನಾಟಕ ಪೊಲೀಸ್ ಇಲಾಖೆಯ ಕೆಎಸ್‌ಆರ್‌ಪಿ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಕೇವಲ 25 ಅಂಕ ಗಳಿಸಿದ್ದ ಅಭ್ಯರ್ಥಿಯೊಬ್ಬರು ಗ್ರಾಮ ಆಡಳಿತಾಧಿಕಾರಿ (VAO) ನೇಮಕಾತಿ ಪರೀಕ್ಷೆಯಲ್ಲಿ ಬರೋಬ್ಬರಿ 151 ಅಂಕ ಪಡೆದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಅಭ್ಯರ್ಥಿಯ ಅಂಕಗಳಲ್ಲಿನ ಭಾರಿ ವ್ಯತ್ಯಾಸದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಅನುಮಾನಗಳು ವ್ಯಕ್ತವಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಹಾವೇರಿ ಜಿಲ್ಲಾಧಿಕಾರಿಗೆ ಆದೇಶಿಸಿದೆ.

ಒಂದು ಪರೀಕ್ಷೆಯಲ್ಲಿ 25; ಇನ್ನೊಂದರಲ್ಲಿ 151!

ಹಾವೇರಿ ಜಿಲ್ಲೆಯ ಹಾನಗಲ್ಲ ಮೂಲದ ಶಂಕರ ಬನ್ನೂರು ಎಂಬ ಅಭ್ಯರ್ಥಿ ಅಕ್ಟೋಬರ್ 4 ರಂದು ಶಿಗ್ಗಾಂವಿಯ ಪರೀಕ್ಷಾ ಕೇಂದ್ರದಲ್ಲಿ ನಡೆದ ವಿಎಒ ನೇಮಕಾತಿ ಪರೀಕ್ಷೆ ಬರೆದಿದ್ದರು. ಈ ಪರೀಕ್ಷೆಯಲ್ಲಿ ಅವರು 151 ಅಂಕ ಗಳಿಸಿದ್ದಾರೆ. ಈ ಹಿಂದೆ ನಡೆದ ಕೆಎಸ್‌ಆರ್‌ಪಿ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ 25 ಅಂಕ ಪಡೆದಿದ್ದ ಅಭ್ಯರ್ಥಿ, ಈಗ ದಿಢೀರನೇ 151 ಅಂಕ ಗಳಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಅಷ್ಟೇ ಅಲ್ಲ, ಅಭ್ಯರ್ಥಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿಯೂ ಶೇ.50ಕ್ಕಿಂತ ಕಡಿಮೆ ಅಂಕ ಪಡೆದಿದ್ದಾರೆ ಎಂಬ ಮಾಹಿತಿ ಮುನ್ನೆಲೆಗೆ ಬಂದಿದೆ. ಹೀಗಾಗಿ, ವಿವಿಧ ಪರೀಕ್ಷೆಗಳಲ್ಲಿನ ಅಂಕಗಳ ವ್ಯತ್ಯಾಸದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ತೀವ್ರಗೊಂಡಿದೆ.

ಆದರೆ, ಈ ಅಂಶಗಳು ಮಾತ್ರವೇ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬುದಕ್ಕೆ ಪುರಾವೆಯಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಪರೀಕ್ಷಾ ಪ್ರಕ್ರಿಯೆಯ ಸಮಗ್ರ ಪರಿಶೀಲನೆಗೆ ಕೆಇಎ ಮುಂದಾಗಿದೆ.

Also Read
"ಬ್ಯಾಲೆಟ್ ಪೇಪರ್‌ನಲ್ಲಿ ಎಷ್ಟು ಸೀಟ್​ ಗೆದ್ರಿ?": ಪರಿಷತ್​ ಚುನಾವಣೆಯಲ್ಲಿ 'ಶೂನ್ಯ' ಸುತ್ತಿದ ಕಾಂಗ್ರೆಸ್​; ಪ್ರಧಾನಿ ಮೋದಿ ವ್ಯಂಗ್ಯದ ಟ್ವೀಟ್ ವೈರಲ್! PM Modi
Doubts raised regarding the result of a candidate who scored 151 marks in the VAO examination; KEA instructs the Haveri Deputy Commissioner to examine the CCTV footage from the Shiggaon examination center and submit a report.

ಸಿಸಿಟಿವಿ ದೃಶ್ಯಾವಳಿ ಪರಿಶೀಲನೆಗೆ ಸೂಚನೆ

ಶಿಗ್ಗಾಂವ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಯಾವುದೇ ಲೋಪ ಅಥವಾ ಅಕ್ರಮ ನಡೆದಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡುವಂತೆ ಕೆಇಎ ಹಾವೇರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ. ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವುದು, ಅಗತ್ಯ ವಿಚಾರಣೆ ನಡೆಸುವುದು ಹಾಗೂ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ತನಿಖೆಯಲ್ಲಿ ಅಕ್ರಮ ಅಥವಾ ಕಾನೂನುಬಾಹಿರ ಚಟುವಟಿಕೆ ನಡೆದಿರುವುದು ಕಂಡುಬಂದರೆ ಪೊಲೀಸರಿಗೆ ದೂರು ನೀಡುವಂತೆಯೂ ನಿರ್ದೇಶಿಸಲಾಗಿದೆ.

ಅಭ್ಯರ್ಥಿಯ ಗುರುತು ದೃಢ

ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರ ಪ್ರಕಾರ, ಲಭ್ಯ ದಾಖಲೆಗಳಂತೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಯೇ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದಿದ್ದಾರೆ. ಮುಖಚಹರೆ ಗುರುತಿಸುವ ತಂತ್ರಜ್ಞಾನದ ಮೂಲಕವೂ ಅಭ್ಯರ್ಥಿಯ ಗುರುತನ್ನು ದೃಢೀಕರಿಸಲಾಗಿದೆ. ಅಭ್ಯರ್ಥಿಗೆ ನೀಡಲಾಗಿದ್ದ ಒಎಂಆರ್ ಉತ್ತರಪತ್ರಿಕೆಯು ದಾಖಲೆಗಳಿಗೆ ಹೊಂದಿಕೆಯಾಗಿದ್ದು, ಅದನ್ನು ಅಕ್ಟೋಬರ್ 5 ರಂದು ಸ್ಕ್ಯಾನ್ ಮಾಡಿ ಕೆಇಎ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಆದರೆ, ಈ ದಾಖಲೆಗಳಿಂದ ಮಾತ್ರ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಲೋಪ ನಡೆದಿಲ್ಲ ಎಂಬ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಸಿಸಿಟಿವಿ ದೃಶ್ಯಾವಳಿ ಹಾಗೂ ಇತರ ದಾಖಲೆಗಳ ಪರಿಶೀಲನೆಯ ಬಳಿಕವೇ ಪ್ರಕರಣದ ಕುರಿತು ಸ್ಪಷ್ಟತೆ ದೊರೆಯಲಿದೆ.

Also Read
ಆಸ್ಟ್ರೇಲಿಯಾದ ಕಾಡಲ್ಲಿ ಸಿಕ್ಕಿದ 'ಚಿನ್ನದ ಆಲೂಗಡ್ಡೆ'! ಇದರ ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ! Gold Nugget
Doubts raised regarding the result of a candidate who scored 151 marks in the VAO examination; KEA instructs the Haveri Deputy Commissioner to examine the CCTV footage from the Shiggaon examination center and submit a report.

ದಾಖಲೆ ತಿದ್ದುಪಡಿ ಪರಿಶೀಲನೆ

ಅಭ್ಯರ್ಥಿಯ ಶೈಕ್ಷಣಿಕ ದಾಖಲೆಗಳಲ್ಲಿನ ಮಾಹಿತಿಯೂ ಪರಿಶೀಲನೆಯ ವ್ಯಾಪ್ತಿಗೆ ಬಂದಿದೆ. ಕೆಇಎ ಮಾಹಿತಿ ಪ್ರಕಾರ, ಶಂಕರ ಬನ್ನೂರು 2013ರಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ವಿಎಒ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಪದವಿಪೂರ್ವ ಶಿಕ್ಷಣ ಇಲಾಖೆಯ ದತ್ತಾಂಶದೊಂದಿಗೆ ಈ ಮಾಹಿತಿ ಹೊಂದಾಣಿಕೆಯಾಗಿತ್ತು.

ಆದರೆ, ಕೆಎಸ್‌ಆರ್‌ಪಿ ಕಾನ್ಸ್‌ಟೇಬಲ್ ಹುದ್ದೆಗೆ ಸಲ್ಲಿಸಿದ್ದ ಅರ್ಜಿಯಲ್ಲಿ ತಾನು 2026 ರಲ್ಲಿ ಉತ್ತೀರ್ಣನಾಗಿರುವುದಾಗಿ ಅಭ್ಯರ್ಥಿ ತಿದ್ದುಪಡಿ ಮಾಡಿಕೊಂಡಿರುವುದು ಪ್ರಾಧಿಕಾರದ ಸರ್ವರ್‌ನಲ್ಲಿ ದಾಖಲಾಗಿದೆ ಎಂದು ಎಚ್. ಪ್ರಸನ್ನ ತಿಳಿಸಿದ್ದಾರೆ. ಈ ತಿದ್ದುಪಡಿ ಹೇಗೆ ಮತ್ತು ಏಕೆ ನಡೆದಿದೆ ಎಂಬುದರ ಬಗ್ಗೆಯೂ ಪರಿಶೀಲನೆ ನಡೆಸಬೇಕಿದೆ.

ನೇಮಕಾತಿ ಪರೀಕ್ಷೆಗಳ ಪಾರದರ್ಶಕತೆ ಹಾಗೂ ಅಭ್ಯರ್ಥಿಗಳಲ್ಲಿ ವಿಶ್ವಾಸ ಮೂಡಿಸುವ ದೃಷ್ಟಿಯಿಂದ ಕೆಇಎ ತನಿಖೆಗೆ ಮುಂದಾಗಿದೆ. ಸದ್ಯಕ್ಕೆ ಅಂಕಗಳ ವ್ಯತ್ಯಾಸ ಮತ್ತು ದಾಖಲೆಗಳಲ್ಲಿನ ಅಂಶಗಳ ಕುರಿತು ಅನುಮಾನಗಳು ವ್ಯಕ್ತವಾಗಿದ್ದು, ಪರೀಕ್ಷಾ ಕೇಂದ್ರದ ಪರಿಶೀಲನೆ ಹಾಗೂ ಅಧಿಕೃತ ತನಿಖಾ ವರದಿಯ ಬಳಿಕವಷ್ಟೇ ಅಕ್ರಮ ನಡೆದಿದೆಯೇ ಎಂಬುದು ಸ್ಪಷ್ಟವಾಗಲಿದೆ.

ತಂಡ ರಚನೆ: ಅಪರ ಜಿಲ್ಲಾಧಿಕಾರಿ

ಈ ಕುರಿತು ಪ್ರತಿಕ್ರಿಯಿಸಿರುವ ಹಾವೇರಿ ಅಪರ ಜಿಲ್ಲಾಧಿಕಾರಿ ಡಾ. ಎಲ್. ನಾಗರಾಜ, "ಅಭ್ಯರ್ಥಿಯ ಕುರಿತು ಪರಿಶೀಲನೆ ನಡೆಸುವಂತೆ ಆದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ತನಿಖೆಗಾಗಿ ತಂಡವನ್ನೂ ರಚಿಸಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ" ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net