

ನವದೆಹಲಿ: ಚುನಾವಣೆಗಳಲ್ಲಿ ಸೋತಾಗಲೆಲ್ಲಾ 'ಇವಿಎಂ (EVM) ಹ್ಯಾಕ್ ಆಗಿದೆ', 'ಮತಯಂತ್ರಗಳಲ್ಲಿ ಗೋಲ್‌ಮಾಲ್ ನಡೆದಿದೆ' ಎಂದು ಬೊಬ್ಬೆ ಹಾಕುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ, ಇತ್ತೀಚೆಗೆ ಬ್ಯಾಲೆಟ್ ಪೇಪರ್ ಮೂಲಕ ನಡೆದ ವಿಧಾನ ಪರಿಷತ್ (MLC) ಚುನಾವಣೆ ಫಲಿತಾಂಶ ತೀವ್ರ ಮುಖಭಂಗಕ್ಕೆ ಕಾರಣವಾಗಿದೆ.
ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ ಮತ್ತು ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕ ಸೇರಿದಂತೆ 4 ಪ್ರಮುಖ ರಾಜ್ಯಗಳ ಒಟ್ಟು 28 ವಿಧಾನ ಪರಿಷತ್ (MLC) ಸ್ಥಾನಗಳಿಗೆ ಮತಪತ್ರಗಳ (Ballot Papers) ಮೂಲಕವೇ ಮತದಾನ ನಡೆದಿತ್ತು. ಆದರೆ, ಫಲಿತಾಂಶ ಹೊರಬೀಳುತ್ತಿದ್ದಂತೆ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಟಾಂಗ್ ಈಗ ಎಲ್ಲಡೆ ವೈರಲ್ ಆಗುತ್ತಿದೆ.
ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ, "ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ ಮತ್ತು ಕರ್ನಾಟಕ ಎಂಬ 4 ದೊಡ್ಡ ರಾಜ್ಯಗಳಲ್ಲಿ 28 ವಿಧಾನ ಪರಿಷತ್ (MLC) ಸ್ಥಾನಗಳಿಗೆ ಚುನಾವಣೆಗಳು ನಡೆದವು. ಈ ಚುನಾವಣೆಗಳು ನಡೆದಿದ್ದು ಮತಪತ್ರಗಳ (Ballot Papers) ಮೂಲಕ. ಹಾಗಾದರೆ ಕಾಂಗ್ರೆಸ್ ಎಷ್ಟು ಸ್ಥಾನಗಳನ್ನು ಗೆದ್ದಿರಬಹುದು ಎಂದು ಸ್ವಲ್ಪ ಊಹಿಸಿ ನೋಡೋಣ?" ಎಂದು ವ್ಯಂಗ್ಯಾತ್ಮಕವಾಗಿ ಪ್ರಧಾನಿ ಪ್ರಶ್ನಿಸಿದ್ದಾರೆ.
ಮತಪತ್ರಗಳ ಮೂಲಕ ನಡೆದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೂ ಸ್ಥಾನ ಗೆಲ್ಲಲಾಗದೆ ಸಂಪೂರ್ಣ 'ಶೂನ್ಯ' ಸುತ್ತಿರುವುದು ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕರ್ನಾಟಕದಲ್ಲಿ ಕ್ಲೀನ್ ಸ್ವೀಪ್: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದರೂ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ 4 ಸ್ಥಾನಗಳಲ್ಲಿ ಕಾಂಗ್ರೆಸ್ ಒಂದನ್ನೂ ಗೆಲ್ಲಲು ಸಾಧ್ಯವಾಗಲಿಲ್ಲ. ಬಿಜೆಪಿ 3 ಸ್ಥಾನಗಳನ್ನು ಗೆದ್ದರೆ, ಮೈತ್ರಿ ಪಕ್ಷ ಜೆಡಿ(ಎಸ್) 1 ಸ್ಥಾನವನ್ನು ತನ್ನದಾಗಿಸಿಕೊಂಡು ಕ್ಲೀನ್ ಸ್ವೀಪ್ ಮಾಡಿದೆ.
ಮಹಾರಾಷ್ಟ್ರದಲ್ಲಿ ಶೂನ್ಯ ಸಂಪಾದನೆ: ಮಹಾರಾಷ್ಟ್ರದಲ್ಲೂ ಕಾಂಗ್ರೆಸ್‌ಗೆ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಬಿಜೆಪಿ, ಏಕನಾಥ್ ಶಿಂಧೆ ಬಣದ ಶಿವಸೇನೆ ಹಾಗೂ ಶರದ್ ಪವಾರ್ ಬಣದ ಎನ್‌ಸಿಪಿ ಜಯಭೇರಿ ಭಾರಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಮಲ-ಸೈಕಲ್ ಕದನ: ಉತ್ತರ ಪ್ರದೇಶದಲ್ಲಿ ಬಿಜೆಪಿ 4 ಸ್ಥಾನಗಳನ್ನು ಗೆದ್ದು 2ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ 2 ಸ್ಥಾನಗಳನ್ನು ಗೆದ್ದು 3ರಲ್ಲಿ ಮುನ್ನಡೆ ಸಾಧಿಸಿದೆ. ಇಲ್ಲಿಯೂ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿದೆ.
ಬಿಹಾರದಲ್ಲಿ ಹೊಸ ಶಕ್ತಿಗಳ ಉದಯ: ಬಿಹಾರದಲ್ಲಿ ಬಿಜೆಪಿಯ ನರೇಂದ್ರ ಪ್ರಸಾದ್ ಸಿಂಗ್, ಜೆಡಿಯುನ ನೀರಜ್ ಕುಮಾರ್, ಆರ್‌ಜೆಡಿಯ ಡಾ. ಸಂಜೀವ್ ಕುಮಾರ್ ಗೆಲುವು ದಾಖಲಿಸಿದ್ದಾರೆ. ಪ್ರಶಾಂತ್ ಕಿಶೋರ್ ಅವರ 'ಜನ್ ಸುರಾಜ್ ಪಾರ್ಟಿ'ಯ ಡಾ. ಸುರೇಶ್ ಪ್ರಸಾದ್ ರಾಯ್ ಜಯಗಳಿಸಿದ್ದು, ಕಾಂಗ್ರೆಸ್ ಹಿರಿಯ ಮುಖಂಡರೇ ಸೋಲನ್ನು ಕಂಡಿದ್ದಾರೆ.
ಪ್ರತಿಯೊಂದು ಸಾರ್ವತ್ರಿಕ ಚುನಾವಣೆ ಮುಗಿದಾಗಲೂ ಕಾಂಗ್ರೆಸ್ ನಾಯಕರು "ಇವಿಎಂ ಬದಲಿಗೆ ಹಳೆಯ ಬ್ಯಾಲೆಟ್ ಪೇಪರ್ ಪದ್ಧತಿಯನ್ನೇ ತನ್ನಿ" ಎಂದು ಪ್ರತಿಭಟಿಸುತ್ತಿದ್ದರು. ಆದರೆ, ಶಿಕ್ಷಕರು ಮತ್ತು ಪದವೀಧರರು ಮತಪತ್ರದ ಮೂಲಕ ಹಕ್ಕು ಚಲಾಯಿಸಿದ ಈ ಪರಿಷತ್ ಚುನಾವಣೆಯಲ್ಲೂ ಜನ ಕಾಂಗ್ರೆಸ್ ಕೈಹಿಡಿದಿಲ್ಲ. ಮತಪತ್ರದ ಚುನಾವಣೆಯಲ್ಲೂ ಮತದಾರ ಕಾಂಗ್ರೆಸ್‌ಗೆ ಮುಖಭಂಗ ಮಾಡಿದ್ದಾನೆ ಎಂಬುದನ್ನು ಎತ್ತಿ ತೋರಿಸಿರುವ ಪ್ರಧಾನಿ ಮೋದಿಯವರ ಈ ಕೌಂಟರ್, ಈಗ ಇವಿಎಂ ಪರ-ವಿರೋಧದ ಚರ್ಚೆಗೆ ಹೊಸ ತಿರುವನ್ನು ನೀಡಿದೆ, (ಏಜೆನ್ಸೀಸ್).