ನೆಲಮಂಗಲ:ಬೆಂಗಳೂರು ಉತ್ತರ ತಾಲೂಕಿನ ಹುಸ್ಕೂರಿನಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಮನೆ ಮುಂದೆ ರಂಗೋಲಿ ಹಾಕುತ್ತಿದ್ದ ಮಂಜುನಾಥ್ ಪತ್ನಿ ಜ್ಯೋತಿ(45) ಅವರ ಚಿನ್ನಾಭರಣ ಕಸಿದ ದುಷ್ಕರ್ಮಿಗಳು ಆಕೆಯನ್ನು ಹತ್ಯೆ ಮಾಡಿದ್ದಾರೆ.
ಬೈಕ್ನಲ್ಲಿ ಬಂದ ಇಬ್ಬರು ಮನೆಯ ಚಿಲಕ ಹಾಕಿ ರಂಗೋಲಿ ಹಾಕುತ್ತಿದ್ದ ಜ್ಯೋತಿ ಅವರ 60 ಗ್ರಾಂ ಚಿನ್ನದ ಮಾಂಗಲ್ಯ ಸರ ಕಿತ್ತುಕೊಳ್ಳಲು ಯತ್ನಿಸಿದ್ದು, ಈ ವೇಳೆ ಪ್ರತಿರೋಧವೊಡ್ಡಿದಾಗ ಬಲವಾಗಿ ತಳ್ಳಿದ್ದಾರೆ. ಆಕೆ, ಬಿದ್ದು ಪ್ರಜ್ಞೆ ತಪ್ಪಿದಬಳಿಕ ಕಿವಿಯಲ್ಲಿದ್ದ 10 ಗ್ರಾಂ ಓಲೆ ಕಸಿದು ಪರಾರಿಯಾಗಿದ್ದಾರೆ.
ಆಸ್ಪತ್ರೆಗೆ ಸಾಗಿಸುವಾಗ ಸಾವು: ನೆಲಕ್ಕೆ ಬಿದ್ದ ಜ್ಯೋತಿಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿದ್ದರಿಂದ ಪ್ರಜ್ಞೆ ಕಳೆದುಕೊಂಡಿದ್ದರು. ಪತ್ನಿ ಬಹಳ ಹೊತ್ತಾದರೂಬಾರದಿದ್ದಾಗ ಬಾಗಿಲು ತೆರೆಯಲು ಪತಿ ಮಂಜುನಾಥ್ ಯತ್ನಿಸಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. ಬಳಿಕ ನೆರಮನೆಯ ನೀಲಮ್ಮ ಎಂಬುವವರು ಬಂದು ನೋಡಿದಾಗ ಜ್ಯೋತಿ ಬಿದ್ದಿರುವುದನ್ನು ಕಂಡು ಬಾಗಿಲ ಚಿಲಕ ತೆಗೆದಿದ್ದಾರೆ. ಕೂಡಲೇ ಸ್ಥಳಿಯರ ನೆರವಿನೊಂದಿಗೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದರು.
ಕುಟುಂಬಸ್ಥರ ಆಕ್ರಂದನ:ವಿಕ್ಟೋರಿಯಾ ಆಸ್ಪತ್ರೆಗೆ ಶವ ರವಾನಿಸಲಾಗಿದೆ. ಆಸ್ಪತ್ರೆ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ವಾಯುವ್ಯ ವಿಭಾಗದ ಡಿಸಿಪಿ ನಾಗೇಶ್, ಆರಕ್ಷಕ ನಿರೀಕ್ಷಕ ಮುರಳೀಧರ್ ಸೇರಿ ಮಾದನಾಯಕನಹಳ್ಳಿ ಪೊಲೀಸರು ಸ್ಥಳ ಪರಿಶೀಲಿಸಿದರು. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾದಚಾರಿ ಮಹಿಳೆಯ ಸರಗಳವು:ಆನೇಕಲ್ ತಾಲೂಕಿನ ಬಿದರಗುಪ್ಪೆಯಲ್ಲಿ ಇತ್ತೀಚೆಗೆ ಅಂಗಡಿಯಿಂದ ಮನೆಗೆ ತೆರಳುತ್ತಿದ್ದ ಮಂಜುಳಮ್ಮ(40) ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಬೈಕ್ನಲ್ಲಿ ಬಂದ ಇಬ್ಬರು ಕಸಿದಿದ್ದಾರೆ.
ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ಚಿನ್ನದ ಸರ ಎಂಬುದನ್ನು ಖಚಿತಪಡಿಸಿಕೊಂಡು ಪಕ್ಕದಲ್ಲಿ ನಿಧಾನವಾಗಿ ಬಂದು 40 ಗ್ರಾಂ ತೂಕದ ಸರ ಕಸಿದಿದ್ದಾರೆ. ಸರಗಳವಿನ ಕೃತ್ಯ ಪಕ್ಕದ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅತ್ತಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.