ಅಭಿವೃದ್ಧಿ ಹೆಸರಲ್ಲಿ ತೋಟಗಾರಿಕೆ ಇಲಾಖೆ ಜಾಗ ಬಳಕೆ ಸಲ್ಲ

ಮದ್ದೂರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮಾತನಾಡಿದರು. ರಾಮಲಿಂಗಯ್ಯ, ಸೋಮಶೇಖರ್ ಇದ್ದರು.
ಮದ್ದೂರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮಾತನಾಡಿದರು. ರಾಮಲಿಂಗಯ್ಯ, ಸೋಮಶೇಖರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರ ವ್ಯಾಪ್ತಿಯಲ್ಲಿರುವ ರೇಷ್ಮೆ ಮತ್ತು ತೋಟಗಾರಿಕೆ ಜಾಗ
  • ಬೇರೆ ಇಲಾಖೆಗಳು ಬಳಕೆ ಮಾಡಿಕೊಳ್ಳುವುದು ಸರಿಯಾದ ಕ್ರಮವಲ್ಲ
ಮದ್ದೂರು: ಅಭಿವೃದ್ಧಿಯ ನೆಪವೊಡ್ಡಿ ನಗರ ವ್ಯಾಪ್ತಿಯಲ್ಲಿರುವ ರೇಷ್ಮೆ ಮತ್ತು ತೋಟಗಾರಿಕೆ ಜಾಗಗಳನ್ನು ಬೇರೆ ಇಲಾಖೆಗಳು ಬಳಕೆ ಮಾಡಿಕೊಳ್ಳುವುದು ಸರಿಯಾದ ಕ್ರಮವಲ್ಲ ಎಂದು ರೈತ ಮುಖಂಡರು ಸೋಮವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯ ರೈತ ಸಂಘದ ಪದಾಧಿಕಾರಿಗಳ ಕುಂದುಕೊರತೆ, ಅಹವಾಲು ಸ್ವೀಕಾರ ಸ್ವೀಕಾರ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳನ್ನು ರೈತ ಮುಖಂಡರು ತರಾಟೆಗೆ ತೆಗೆದುಕೊಂಡರು.
ರೈತ ಮುಖಂಡ ವಿನೋದ್‌ಬಾಬು ಮಾತನಾಡಿ, ಮದ್ದೂರು ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿದ ಬಳಿಕ ಅಭಿವೃದ್ಧಿಯ ನೆಪವೊಡ್ಡಿ ರೈತರಿಗೆ ತರಬೇತಿ ಮತ್ತು ಮಾಹಿತಿ ಕೇಂದ್ರಗಳ ಇಲಾಖೆಯ ವಶದಲ್ಲಿರುವ ರೇಷ್ಮೆ ಮತ್ತು ತೋಟಗಾರಿಕೆ ಜಾಗಗಳನ್ನು ನ್ಯಾಯಾಲಯದ ಸಂಕೀರ್ಣ, ರೈಲು ನಿಲ್ದಾಣ, ನಗರಸಭೆ, ತಾಲೂಕು ಕಚೇರಿ ಹಾಗೂ ಟ್ರಾಮಾ ಕೇರ್ ಸೆಂಟರ್ ಕಟ್ಟಡಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಆದರೆ, ಈ ಕಟ್ಟಡಗಳನ್ನು ಬೇರೆ ಸ್ಥಳಗಳಲ್ಲಿ ನಿರ್ಮಾಣ ಮಾಡಬೇಕು. ಅದು ಬಿಟ್ಟು ಬೇರೆ ಇಲಾಖೆಗಳಿಗೆ ಯಾವುದೇ ಕಾರಣಕ್ಕೂ ನೀಡಬಾರದು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಆತಗೂರು ರೀ ಸರ್ವೆ ಕಾರ್ಯ 20 ವರ್ಷಗಳಿಂದ ನಡೆಯುತ್ತಿದ್ದು, ಯಾವ ಅಧಿಕಾರಿಗಳೂ ಈ ಸಮಸ್ಯೆಯನ್ನು ಬಗೆಹರಿಸಲು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮಾತನಾಡಿ, ಶಾಸಕ ಕೆ.ಎಂ.ಉದಯ್ ಆತಗೂರು ಹೋಬಳಿಯ ರೀ ಸರ್ವೇಯಲ್ಲಿ ಉಂಟಾಗಿರುವ ಸಮಸ್ಯೆ ಬಗ್ಗೆ ಈಗಾಗಲೇ ಸದನದಲ್ಲಿ ಚರ್ಚೆ ನಡೆಸಿ ಸರ್ಕಾರದ ಗಮನಕ್ಕೆ ತಂದಿದ್ದಾರೆ. ನಿರಂತರ ಸಭೆ ನಡೆಸುವ ಜತೆಗೆ ಸರ್ಕಾರದ ಹಂತದಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ತಾಂತ್ರಿಕವಾಗಿ ತಲೆದೋರಿರುವ ರೀ ಸರ್ವೇ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲಿದ್ದಾರೆ ಎಂದರು. ನಾನು ಅಧಿಕಾರ ಸ್ವೀಕರಿಸಿದ ಬಳಿಕ ಆತಗೂರು ಹೋಬಳಿಯ 431 (124 ಫಾರಂ) ಅರ್ಜಿಗಳಲ್ಲಿ 426 ಅರ್ಜಿಗಳನ್ನು ವಿಲೇ ಮಾಡಲಾಗಿದೆ ಎಂದರು.
ಪ್ರತಿ ವರ್ಷ ರಸಗೊಬ್ಬರದ ಸಮಸ್ಯೆ ತಲೆದೋರುತ್ತಿದೆ. ಹೀಗಾಗಿ ಮುಂಗಾರು ಕೃಷಿಗೆ ಯಾವುದೇ ಲೋಪವಾಗದಂತೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರತಿಭಾ ಮಾತನಾಡಿ, ಯುದ್ಧದ ಪರಿಣಾಮ ರಸಗೊಬ್ಬರ ಕೊರತೆ ಎದುರಾಗಲಿದೆ ಎಂದು ಈಗಾಗಲೇ ಕೇಂದ್ರ ಸರ್ಕಾರ ಸಂದೇಶ ರವಾನಿಸಿದೆ. ಹೀಗಾಗಿ ರೈತರು ರಸಗೊಬ್ಬರವನ್ನು ಅವಲಂಬಿಸದೆ ಕೊಟ್ಟಿಗೆ ಮತ್ತು ಸಾವಯವ ಗೊಬ್ಬರವನ್ನು ಹೆಚ್ಚಾಗಿ ಬಳಕೆ ಮಾಡಬೇಕು. ಕೃಷಿ ಇಲಾಖೆಯನ್ನು ಮತ್ತಷ್ಟು ಮೇಲ್ದರ್ಜೆಗೆ ಏರಿಸುವ ಸಂಬಂಧ ಇಡೀ ಜಿಲ್ಲೆಯಲ್ಲಿಯೇ ಮದ್ದೂರು ತಾಲೂಕಿನಲ್ಲಿ ಎಐ ಟೆಕ್ನಾಲಜಿ ತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ರೈತ ಮುಖಂಡ ಗೊಲ್ಲರದೊಡ್ಡಿ ಅಶೋಕ್ ಮಾತನಾಡಿ, ಮುಂಗಾರು ಮಳೆ ಕಾಲಿಟ್ಟಿದ್ದು, ಕೃಷಿ ಚಟುವಟಿಕೆಗಳು ಆರಂಭವಾಗುತ್ತಿವೆ. ಆದರೆ, ಈ ಸಮಯದಲ್ಲಿ ನಾಲೆಗಳ ಆಧುನೀಕರಣ, ದುರಸ್ತಿ ಕೆಲಸವನ್ನು ಅಧಿಕಾರಿಗಳು ಕೈಗೊಂಡಿದ್ದಾರೆ. ಇದರಿಂದ ರೈತರ ಬೇಸಾಯಕ್ಕೆ ಸಾಕಷ್ಟು ತೊಂದರೆಯಾಗಲಿದ್ದು, ಶೀಘ್ರ ಕಾಮಗಾರಿ ಮುಗಿಸಬೇಕು ಎಂದು ಆಗ್ರಹಿಸಿದರು.
ರಾಗಿ ಖರೀದಿ ಕೇಂದ್ರದಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ರೈತರ ಬೆಳೆಗಳಿಗೆ ಸರಿಯಾದ ಬೆಲೆ ಸಿಗದಂತಾಗಿದೆ. ಖರೀದಿ ಕೇಂದ್ರಕ್ಕೆ ತುಮಕೂರು, ಕುಣಿಗಲ್ ಸೇರಿದಂತೆ ಬೇರೆ ಕಡೆಗಳಿಂದ ಲೋಡ್‌ಗಟ್ಟಲೇ ರಾಗಿ ಬರುತ್ತಿದೆ. ದಲ್ಲಾಳಿಗಳು ನೋಂದಣಿ ಮಾಡಿಸಿ ರೈತರಿಂದ ಕಡಿಮೆ ಬೆಲೆಗೆ ಖರೀದಿಸಿ ಖರೀದಿ ಕೇಂದ್ರಕ್ಕೆ ಸಾಗಿಸುತ್ತಿದ್ದಾರೆ. ಇಂತಹ ಅಕ್ರಮ ದಂಧೆಯನ್ನು ಅಧಿಕಾರಿಗಳು ತಡೆಗಟ್ಟಬೇಕೆಂದು ಸಭೆಯಲ್ಲಿದ್ದ ರೈತ ಮುಖಂಡರು ಆಗ್ರಹಿಸಿದರು.
ತಾಪಂ ಇಇ ರಾಮಲಿಂಗಯ್ಯ, ಗ್ರೇಡ್ 2 ತಹಸೀಲ್ದಾರ್ ಸೋಮಶೇಖರ್, ವಲಯ ಅರಣ್ಯಾಧಿಕಾರಿ ಗವಿಯಪ್ಪ, ಟಿಎಚ್‌ಒ ಡಾ.ರವಿಶಂಕರ್, ಸಿಡಿಪಿಓ ಅರುಣ್ ಕುಮಾರ್, ಕಾರ್ಮಿಕ ಇಲಾಖೆ ಅಧಿಕಾರಿ ನಾಗರತ್ನಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net