ಸರ್ಕಾರಿ ಶಾಲೆ ಮಕ್ಕಳಿಗೆ ‘ಹೋಲಿಸ್ಟಿಕ್ ರಿಪೋರ್ಟ್ ಕಾರ್ಡ್’

ಸರ್ಕಾರಿ ಶಾಲೆ ಮಕ್ಕಳಿಗೆ ‘ಹೋಲಿಸ್ಟಿಕ್ ರಿಪೋರ್ಟ್ ಕಾರ್ಡ್’
ಸರ್ಕಾರಿ ಶಾಲೆ ಮಕ್ಕಳಿಗೆ ‘ಹೋಲಿಸ್ಟಿಕ್ ರಿಪೋರ್ಟ್ ಕಾರ್ಡ್’
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಥಮಿಕ ಶಿಕ್ಷಣದಲ್ಲಿ ಮಕ್ಕಳನ್ನು ಪರೀಕ್ಷೆಗಳಲ್ಲಿ ಮೌಲ್ಯಮಾಪನ ಮಾಡುವುದಕ್ಕಿಂತ ಕಲಿಕೆಯಲ್ಲಿ ಮೌಲ್ಯಮಾಪನ
  • ಹೊಸ ವ್ಯವಸ್ಥೆಯಲ್ಲಿ ಪಾಲಕರ ಮೊಬೈಲ್ ಸಂಖ್ಯೆಗೆ ಡಿಜಿಟಲ್ ರಿಪೋರ್ಟ್ ಕಾರ್ಡ್ ಅನ್ನು ಕಳುಹಿಸಲಾಗುತ್ತದೆ.
  • ಪರೀಕ್ಷೆಯ ಅಂಕಗಳು, ಶಿಕ್ಷಕರ ಅಭಿಪ್ರಾಯಗಳು ಮತ್ತು ಮಗುವಿನ ಸರ್ವತೋಮುಖ ಬೆಳವಣಿಗೆಯ ವಿವರಗಳು ಡಿಜಿಟಲ್ ರೂಪದಲ್ಲಿ ಲಭ್ಯ
ಎನ್.ಎಲ್. ಶಿವಮಾದು
ಬೆಂಗಳೂರು: ಪ್ರತಿ ವಿದ್ಯಾರ್ಥಿಯ ಕಲಿಕಾ ಮಟ್ಟವನ್ನು ತಿಳಿಯುವ ಉದ್ದೇಶದಿಂದ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಇದೇ ಮೊದಲ ಬಾರಿಗೆ ಪೂರ್ವ ಪ್ರಾಥಮಿಕ ತರಗತಿಯಿಂದ ದ್ವಿತೀಯ ಪಿಯುಸಿವರೆಗೂ ‘ಹೋಲಿಸ್ಟಿಕ್ ರಿಪೋರ್ಟ್ ಕಾರ್ಡ್’ (ಸಮಗ್ರ ವರದಿ ಚೀಟಿ) ನೀಡುವ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ.
ಮುಂದಿನ ಶೈಕ್ಷಣಿಕ ವರ್ಷ (2026-27)ದಿಂದಲೇ ಹೊಸ ನಿಯಮ ಅನುಷ್ಠಾನ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಪ್ರಾಥಮಿಕ ಶಿಕ್ಷಣದಲ್ಲಿ ಮಕ್ಕಳನ್ನು ಪರೀಕ್ಷೆಗಳಲ್ಲಿ ಮೌಲ್ಯಮಾಪನ ಮಾಡುವುದಕ್ಕಿಂತ ಕಲಿಕೆಯಲ್ಲಿ ಮೌಲ್ಯಮಾಪನ ಮಾಡುವ ನಿಟ್ಟಿನಲ್ಲಿ ಹೊಸ ಬದಲಾವಣೆಯನ್ನು ತರಲಾಗುತ್ತಿದೆ.

ಡಿಜಿಟಲ್ ರಿಪೋರ್ಟ್ ಕಾರ್ಡ್

ಸಾಮಾನ್ಯವಾಗಿ ಸರ್ಕಾರಿ ಮತ್ತು ಖಾಸಗಿ ಸೇರಿ ಎಲ್ಲ ಶಾಲೆಗಳಲ್ಲಿ ಮಕ್ಕಳ ಕಲಿಕೆಯನ್ನು ತಿಳಿಸಲು ಹಾಗೂ ಪಾಲಕ/ಪೋಷಕರಿಗೆ ಸೂಚನೆಗಳಿದ್ದಲ್ಲಿ ಡೈರಿಯಲ್ಲಿಯೇ ಬರೆದು ಕಳುಹಿಸಲಾಗುತ್ತದೆ. ಹೊಸ ವ್ಯವಸ್ಥೆಯಲ್ಲಿ ಪಾಲಕರ ಮೊಬೈಲ್ ಸಂಖ್ಯೆಗೆ ಡಿಜಿಟಲ್ ರಿಪೋರ್ಟ್ ಕಾರ್ಡ್ ಅನ್ನು ಕಳುಹಿಸಲಾಗುತ್ತದೆ.
ಆಧುನಿಕ ವ್ಯವಸ್ಥೆಯ ಮೂಲಕ ಪಾಲಕರು ತಮ್ಮ ಮಕ್ಕಳ ಸಮಗ್ರ ಶೈಕ್ಷಣಿಕ ಪ್ರಗತಿಯನ್ನು ಮೊಬೈಲ್ ಅಥವಾ ಈ ಮೇಲ್ ಮೂಲಕವೇ ಸುಲಭವಾಗಿ ಪಡೆಯಬಹುದಾಗಿದೆ. ಪರೀಕ್ಷೆಯ ಅಂಕಗಳು, ಶಿಕ್ಷಕರ ಅಭಿಪ್ರಾಯಗಳು ಮತ್ತು ಮಗುವಿನ ಸರ್ವತೋಮುಖ ಬೆಳವಣಿಗೆಯ ವಿವರಗಳು ಡಿಜಿಟಲ್ ರೂಪದಲ್ಲಿ ಲಭ್ಯವಾಗಲಿವೆ.
ಇದರ ಭಾಗವಾಗಿ ಈ ವರ್ಷದಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳ ಅಂಕಪಟ್ಟಿಯನ್ನು ಡಿಜಿಲಾಕರ್‌ನಲ್ಲಿಯೇ ಡೌನ್‌ಲೋಡ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಪ್ರತಿ ತಿಂಗಳು ಎರಡು ತಿಂಗಳಿಗೊಮ್ಮ ಪಿಟಿಎಂ

ಸರ್ಕಾರಿ ಶಾಲಾ ವ್ಯವಸ್ಥೆಯ ಮಟ್ಟಿಗೆ ಕಳೆದ ನವೆಂಬರ್‌ನಲ್ಲಿ ಮೊದಲ ಬಾರಿಗೆ ಪಾಲಕ-ಶಿಕ್ಷಕ ಸಭೆ (ಪಿಟಿಎಂ)ಯನ್ನು ರಾಜ್ಯದ ಶಾಲೆಗಳಲ್ಲಿ ಆರಂಭಿಸಲಾಯಿತು. ಇದರ ಮುಂದುವರಿದ ಭಾಗವಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಪಿಟಿಎಂ ಅನ್ನು ನಡೆಸಲಾಗುತ್ತದೆ. ಈ ಸಬೆಯಲ್ಲಿ ಮಕ್ಕಳ ಕಲಿಕಾ ಮಟ್ಟವನ್ನು ತಿಳಿದು ಪಾಲಕರ ಗಮನಕ್ಕೆ ತರಲಾಗುತ್ತದೆ. ಮಗುವು ಯಾವ ವಿಭಾಗದಲ್ಲಿ ಹಿಂದುಳಿದಿದೆ ಹಾಗೂ ಉತ್ತಮವಾಗಿ ಕಲಿಯುತ್ತಿದೆ ಎಂಬುದನ್ನು ತಂದೆ-ತಾಯಿಗೆ ಮನದಟ್ಟು ಮಾಡಿಕೊಡಲಾಗುತ್ತದೆ.

ರಿಪೋರ್ಟ್ ಕಾರ್ಡ್‌ನಲ್ಲಿ ಏನೆಲ್ಲ ಇರಲಿದೆ?

- ರಿಪೋರ್ಟ್ ಕಾರ್ಡ್‌ನಲ್ಲಿ ಪ್ರತಿ ಎರಡು ತಿಂಗಳ ಅವಧಿಯಲ್ಲಿದ್ದ ಪಠ್ಯಕ್ರಮ/ಪಾಠಗಳ ಬೋಧನೆ ಏನಿತ್ತು?, ಇದರಲ್ಲಿ ಮಗುವು ಎಷ್ಟರ ಮಟ್ಟಿಗೆ ಕಲಿಕೆಯಲ್ಲಿ ತೊಡಗಿದೆ.
- ಮೊದಲ ಸಭೆಯಲ್ಲಿ ಮೊದಲೆರಡು ತಿಂಗಳಿನಲ್ಲಿ ಮಾಸಿಕ ಕಿರು ಪರೀಕ್ಷೆಯ ಸಾರಾಂಶ ಮತ್ತು ಶೈಕ್ಷಣಿಕ ಸಾಧನೆ. ಇತರೆ ಪಠ್ಯೇತರ ಚಟುವಟಿಕೆಗಳಲ್ಲಿ ಮಗುವಿನ ಕಲಿಕೆ, ನಡವಳಿಕೆ ಮತ್ತು ಇತರೊಂದಿಗೆ ಬೆರೆಯುವ ಮಾಹಿತಿಯನ್ನು ನೀಡಲಾಗುತ್ತದೆ.
- ವಿಷಯವಾರು ಮಗುವಿನ ಕಲಿಕೆ ಇರುತ್ತದೆ. ಸಾಮಾನ್ಯವಾಗಿ ಕನ್ನಡದಲ್ಲಿ ಮುಂದಿರುವ ವಿದ್ಯಾರ್ಥಿಯು ಇಂಗ್ಲಿಷ್‌ನಲ್ಲಿ ಹಿಂದಿ ಉಳಿದಿರಬಹುದು. ಗಣಿತದಲ್ಲಿ ಮುಂದಿರುವವರು ವಿಜ್ಞಾನದಲ್ಲಿ ಸಾಧಾರಣವಾಗಿ ಕಲಿತಿರಬಹುದು. ಇದನ್ನು ಯಾವ ರೀತಿಯಲ್ಲಿ ಸರಿಪಡಿಸಿಕೊಳ್ಳಬೇಕು. ಇದರಲ್ಲಿ ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಯ ಪಾತ್ರವೇನು? ಎಂಬುದನ್ನು ತಿಳಿಸಲಾಗುತ್ತದೆ.
- ಮಗುವಿನ ಹಾಜರಾತಿ, ತರಗತಿ ಪರೀಕ್ಷೆಗಳು, ವಿದ್ಯಾರ್ಥಿ ಆಧಾರಿತ ಯೋಜನೆಗಳು, ಕಾರ್ಯ ಯೋಜನೆಗಳು, ಕಲೆ, ದೈಹಿಕ ಶಿಕ್ಷಣದ ಶಿಸ್ತು, ಜೀವನ ಕೌಶಲಗಳು ಮತ್ತು ಮಗುವಿನ ವರ್ತನೆಯನ್ನು ಒಳಗೊಂಡ ಮಾಹಿತಿ ಇರಲಿದೆ

ಶಿಕ್ಷಕರು, ಪಾಲಕರ ಜಬಾಬ್ದಾರಿ ಹೆಚ್ಚಲಿದೆ

ಪ್ರಸ್ತುತ ಒಂದರಿಂದ 8ನೇ ತರಗತಿವರೆಗೂ ಯಾವುದೇ ಮಕ್ಕಳನ್ನು ಅನುತ್ತೀರ್ಣ ಮಾಡುವಂತಿಲ್ಲ ಎಂಬ ಕಾರಣದಿಂದ ಸರ್ಕಾರಿ ಶಾಲೆಗಳಲ್ಲಿ ಕೆಲವೆಡೆ ಶಿಕ್ಷಕರು ಕಲಿಕೆಯಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪವಿದೆ. ರಿಪೋರ್ಟ್ ಕಾರ್ಡ್‌ನಲ್ಲಿ ಮಗುವಿನ ಕಲಿಕೆಯನ್ನು ತಿಳಿದಾಗ ಪಾಲಕರು ಶಿಕ್ಷಕರು ಪ್ರಶ್ನಿಸಬಹುದಾಗಿದೆ. ಈ ದೃಷ್ಟಿಯಿಂದ ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲೇಬೇಕಿದೆ.
"

ಸರ್ಕಾರಿ ಶಾಲೆಗಳಲ್ಲಿ ಮೊದಲ ಬಾರಿಗೆ ಮಕ್ಕಳ ಕಲಿಕೆಯನ್ನು ತಿಳಿಯುವ ರಿಪೋರ್ಟ್ ಕಾರ್ಡ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತದೆ. ಈ ವ್ಯವಸ್ಥೆಯು ಮಕ್ಕಳ ಕಲಿಕೆಯ ನೈಜ ಮಾಹಿತಿಯನ್ನು ಒದಗಿಸಲಿದೆ. ಬಳಿಕ ಮಕ್ಕಳ ಕಲಿಕೆಯನ್ನು ಸುಧಾರಿಸುವ ಕ್ರಮ ಜರುಗಿಸಲು ಸಹಕಾರಿಯಾಗಲಿದೆ.

- ರಶ್ಮಿ ಮಹೇಶ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net