

ಪ್ರಮುಖ ಮುಖ್ಯಾಂಶಗಳು
ಹಿಡಕಲ್ಲ ಜಲಾಶಯದ ಹಿನ್ನೀರಿನಲ್ಲಿ ಹೊರಹೊಮ್ಮಿದ ಇತಿಹಾಸ
| ರಾಜಾ ಲಖಮಗೌಡ ಸರ್ದೇಸಾಯಿ ಕೋಟೆ ಗೋಚರ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ
ಹುಕ್ಕೇರಿ ತಾಲೂಕಿನ ಹಿಡಕಲ್ಲ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ರಾಜಾ ಲಖಮಗೌಡ ಸರ್ದೇಸಾಯಿ ಅವರ ಭವ್ಯ ಕೋಟೆ ಧಶಕದ ನಂತರ ಕಂಡಿದೆ. ಮಳೆ ಕೊರತೆಯಿಂದ ಜಲಾಶಯದ ನೀರು ಪಾತಾಳ ಕಂಡಿರುವ ಹಳೇ ವಂಟಮೂರಿ ಗ್ರಾಮದ ಸಮೀಪದಲ್ಲಿ ಗೋಚರವಾದ ಕೋಟೆ ನೋಡುಗರ ಗಮನ ಸೆಳೆಯುತ್ತಿದೆ.
ಹಿಡಕಲ್ಲ ಜಲಾಶಯ ನಿರ್ಮಾಣಗೊಂಡ ಬಳಿಕ ೧೯೭೨-೭೩ರ ಅವಧಿಯಲ್ಲಿ ಜಲಾಶಯದ ಹಿನ್ನೀರಿನಲ್ಲಿ ಈ ಕೋಟೆ, ಮುಳುಗಡೆಯಾಗಿದೆ. ರಾಜಾ ಲಖಮಗೌಡ ಸರ್ದೇಸಾಯಿ ವಾಸ ಸ್ಥಳದಲ್ಲಿ ಈ ಕೋಟೆಯನ್ನು ಬಳಸಿ ಒಂದು ಪ್ರದೇಶದಲ್ಲಿ ಕಲ್ಲು ಮತ್ತು ಗಚ್ಚು ನಿರ್ಮಿಸಲಾಯಿತು. ಸುಮಾರು 15 ಅಡಿ ಎತ್ತರದ ಗೋಡೆಗಳು, ಭದ್ರ ಮುಖ್ಯದ್ವಾರ ಹಾಗೂ ಒಳಗೆ ಅನೇಕ ಕೋಣೆಗಳು ಇದ್ದವು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕೋಟೆಯ ಸುತ್ತಮುತ್ತಲಿನ ಸಾವಿರಾರು ಜಮೀನುಗಳು ಕೂಡ ಜಲಾಶಯದ ನೀರಿನಲ್ಲಿ ಮುಳುಗಡೆಯಾಗಿವೆ. ಕಾಲಕ್ರಮೇಣ ಕೋಟೆಯ ಕೆಲವು ಭಾಗಗಳು ಹಾನಿಗೊಳಗಾಗಿದ್ದು, ಕೆಲ ಕಿಡಿಗೇಡಿಗಳು ಕೋಟೆ ಒಳಗಿನ ಅಮೂಲ್ಯ ಕಲ್ಲುಗಳು ಮತ್ತು ಶಿಲ್ಪಗಳು ಕಿತ್ತೊಯ್ದಿದ್ದಾರೆ. ಇನ್ನೂ ಕೆಲವು ಭಾಗಗಳಲ್ಲಿ ಗೋಡೆ ಹಾನಿಗೊಳಪಡಿಸಿ, ಪುರಾತನ ವಸ್ತುಗಳ ಹುಡುಕಾಟ ನಡೆಸುತ್ತಿರುವುದು ಕಂಡುಬಂದಿದೆ.
ಕೋಟೆಯ ನಿರ್ಮಾಣ ಶೈಲಿಯ ಅಂದಿನ ವೈಭವವನ್ನು ನೆನಪಿಸುವಂತೆ ಈ ಪ್ರದೇಶದಲ್ಲಿ ಇಂತಹ ಹಳೆಯ ಕಟ್ಟಡಗಳ ಅವಶೇಷಗಳು ಇವೆ. ಜೊತೆಗೆ, ಹಿಡಕಲ್ಲ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಅನೇಕ ಪುರಾತನ ದೇವಸ್ಥಾನಗಳು ಮತ್ತು ಮೂರ್ತಿಗಳ ಅವಶೇಷಗಳು ಈ ಪ್ರದೇಶ ಐತಿಹಾಸಿಕ ಮಹತ್ವವಿದೆ ಎಂಬುದು ಸ್ಪಷ್ಟವಾಗಿದೆ.
-------------------
ಕೋಟೆ ರಕ್ಷಣೆಗೆ ಒತ್ತಾಯ:
ಹಿಡಕಲ್ಲ ಜಲಾಶಯದಲ್ಲಿ ಇದೀಗ ನೀರು ಕಡಿಮೆಯಾಗುತ್ತಿರುವ ಸಂದರ್ಭ, ಪುರಾತತ್ವ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಕೈಗೊಂಡು ಕೋಟೆ ಹಾಗೂ ಇತರ ಪುರಾತನ ಸ್ಮಾರಕಗಳನ್ನು ಸಂರಕ್ಷಿಸಬೇಕು ಎಂಬ ಸ್ಥಳೀಯರ ಒತ್ತಾಯವಾಗಿದೆ.