ಶೇಷಗಿರಿ ಹಾನಗಲ್ ಅವರ ತಬಲಾ ವಾದನ ಎಂದಾಕ್ಷಣ ನೆನಪಾಗುವುದು ‘ಗಂಗಾ ಚಲನ್’. ಇದು ಕೂಡ ಅವರದೇ ಪ್ರಯೋಗ. ಸಾಮಾನ್ಯವಾಗಿ ತಬಲಾ ನುಡಿಸುವವರು ಕಾಯದಾಗಳನ್ನೋ ಬೋಲುಗಳನ್ನೋ ಒಂದು ಪಟ್ಟು, ಎರಡು ಪಟ್ಟು, ನಾಲ್ಕು, ಸಾಧ್ಯವಾದರೆ ಎಂಟುಪಟ್ಟು ವೇಗದಲ್ಲಿ ಬಾರಿಸುವುದುಂಟು. ಅದು ಸಾಂಪ್ರದಾಯಿಕ ಪದ್ಧತಿ. ಹಾನಗಲ್ ಅದಕ್ಕೊಂದು ಹೊಸರೂಪ ಕೊಟ್ಟರು. ಒಂದು, ಒಂದೂವರೆ, ಎರಡು, ಮೂರು, ನಾಲ್ಕು, ಐದು, ಆರು, ಏಳು, ಎಂಟು... ಹೀಗೆ ಚಲಿಸುವಂತಹ ನಡೆಯೊಂದನ್ನು ರೂಪಿಸಿದರು. ಸಂಗೀತದ ಭಾಷೆಯಲ್ಲಿ ಹೇಳುವುದಾದರೆ ಚತುಶ್ರ, ಖಂಡ, ತಿಸ್ರ, ಮಿಶ್ರ, ಚತುಶ್ರ ಮೇಲ್ ಕಾಲ... ಹೀಗೆ ಸಾಗುವ ವಾದನ. ಅದಕ್ಕೆ ಅವರಿಟ್ಟ ಹೆಸರು ಗಂಗಾ ಚಲನ್. ಇದರಲ್ಲಿ ಪೇಷ್ಕಾರ್, ಚಕ್ರಧಾರ್, ಕಾಯದಾ ಕೂಡ ನುಡಿಸತೊಡಗಿ ಬೆರಗು ಹುಟ್ಟಿಸಿದ್ದಲ್ಲದೇ ಅದೊಂದು ತಬಲಾವಾದನದ ಭಾಗವಾಗುವಂತೆ ಮಾಡಿಬಿಟ್ಟರು. ತಮ್ಮ ಶಿಷ್ಯರಿಗೂ ಅದನ್ನು ಕಲಿಸಿದರು. ಗಂಗಾ ಎಂದರೆ ಅಕ್ಕ ಗಂಗೂಬಾಯಿ ಹಾನಗಲ್. ಗಂಗಾನದಿಯ ಹರಿವು ಮತ್ತು ಗಂಗೂಬಾಯಿಯವರ ಗಾನಲಹರಿಯನ್ನು ಸಂಕೇತಿಸುವ ವಿಶಿಷ್ಟ ಲಯ ಇದಾಗಿರುವುದರಿಂದ ಅದು ಗಂಗಾ ಚಲನ್!.