

ಪ್ರಮುಖ ಮುಖ್ಯಾಂಶಗಳು
ಸಿದ್ಧಿವಿನಾಯಕನ ಸುಗ್ಗಿಯಲ್ಲಿ ಸೌಹಾರ್ದ
| ಗಡಿಭಾಗದಲ್ಲಿ ಹಿಂದೂ-ಮುಸ್ಲಿಮರಿಂದ ಬೆನಕನ ಆರಾಧನೆ | ಒಗ್ಗಟ್ಟಿನಿಂದ ಹಬ್ಬ ಆಚರಣೆ
ಆನಂದ ಭಮ್ಮನ್ನವರ ಚಿಕ್ಕೋಡಿ
ಗಡಿಭಾಗ ಬೆಳಗಾವಿ ಜಿಲ್ಲೆ ಪ್ರತಿ ವರ್ಷ ಗಣೇಶೋತ್ಸವ ಆಚರಣೆ ಹಲವು ವಿಶೇಷಗಳಿಂದ ಗಮನಸೆಳೆಯುತ್ತದೆ. ಗಣೇಶ ಚತುರ್ಥಿ ಕೇವಲ ಹಿಂದೂಗಳ ಹಬ್ಬವಾಗದೆ ಭಾವೈಕ್ಯದ ವೇದಿಕೆಯಾಗಿ ಸೌಹಾರ್ದಕ್ಕೆ ಸಾಕ್ಷಿಯಾಗುತ್ತದೆ.
ಕಾಗವಾಡ ತಾಲೂಕು ಉಗಾರ ಬುದ್ರುಕ್ ಗ್ರಾಮದ ಪದ್ಮಶ್ರೀ ಕಾಲನಿಯಲ್ಲಿ ಮೆಹಬೂಬ್ ಸುಭಾನಿ ದರ್ಗಾ ಸಮೀಪದಲ್ಲಿ ೨೦೧೯ ರಿಂದ ಹಿಂದೂ, ಮುಸ್ಲಿಂರು ಜತೆಗೂಡಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಸೌಹಾರ್ದಕ್ಕೆ ಮುನ್ನುಡಿ ಬರೆದಿದ್ದಾರೆ. ಹಿಂದೂ-ಮುಸ್ಲಿಂ ಗಣಪತಿ ಮಂಡಳಿ ಹೆಸರಿನ ಸಂಘ ಸ್ಥಾಪಿಸಿ ವಿಘ್ನೇಶ್ವರನನ್ನು ಆರಾಧಿಸಲಾಗುತ್ತಿದೆ. ಈ ಬಾರಿಯೂ ಗಣೇಶನನ್ನು ಬರಮಾಡಿಕೊಳ್ಳಲು ಸಿದ್ಧತೆ ಜೋರಾಗಿದೆ.
ಗೊಂದಲಕ್ಕೆ ಆಸ್ಪದವಿಲ್ಲ:
ಉಗಾರ ಬುದ್ರುಕ್ ಗ್ರಾಮದಲ್ಲಿ ಮೊದಲಿನಿಂದಲೂ ಹಿಂದೂ, ಮುಸ್ಲಿಂ ಹಬ್ಬಗಳನ್ನು ಒಗ್ಗಟ್ಟಿನಿಂದ ಆಚರಿಸಲಾಗುತ್ತಿದೆ. ಕಳೆದ 8 ವರ್ಷಗಳಿಂದ ಯಾವುದೇ ಗೊಂದಲವಿಲ್ಲದೇ ಉಭಯ ಸಮುದಾಯದವರು ಗಣೇಶೋತ್ಸವ ಆಚರಿಸುವ ಮೂಲಕ ಮಾದರಿಯಾಗಿದ್ದಾರೆ. ಹಿಂದೂ-ಮುಸ್ಲಿಂ ಗಣಪತಿ ಮಂಡಳಿಯಲ್ಲಿ ೭ ಜನ ಮುಸ್ಲಿಮರು, ೫ ಜನ ಹಿಂದೂಗಳಿದ್ದು, ಗಣಪನಿಗೆ ಎರಡೂ ಸಮುದಾಯದವರಿಂದ ವಿಶೇಷ ಪೂಜೆ, ಅಭಿಷೇಕ, ನೈವೇದ್ಯಗಳು ಸಮರ್ಪಿತವಾದವು. ಗಣೇಶೋತ್ಸವ ನಿಮಿತ್ತ ಎರಡೂ ಸಮುದಾಯದವರು ಒಂದು ದಿನ ಇಡೀ ಗ್ರಾಮಕ್ಕೆ ಮಹಾಪ್ರಸಾದ ವ್ಯವಸ್ಥೆಯನ್ನು ಮಾಡುತ್ತಾರೆ.
-------------
ಕೋಟ್
ಗ್ರಾಮದಲ್ಲಿ ಹಿಂದೂ-ಮುಸ್ಲಿಮರು ಸೇರಿ ಗಣೇಶನನ್ನು ಪ್ರತಿಷ್ಠಾಪಿಸಲಾಯಿತು. ನಮ್ಮಲ್ಲಿ ಯಾವುದೇ ಭೇದವಿಲ್ಲ. ಎಲ್ಲ ಹಬ್ಬಗಳಲ್ಲಿ ಸೌಹಾರ್ದದಿಂದ ಭಾಗವಹಿಸಿ ಒಗ್ಗಟ್ಟು ಮೆರೆಯಿತು.
| ಮಹಾದೇವ ಕೋಳಿ ಹಿಂದೂ-ಮುಸ್ಲಿಂ ಗಣಪತಿ ಮಂಡಳಿ ಅಧ್ಯಕ್ಷ, ಉಗಾರ ಬುದ್ರುಕ್
----------------
ಬಾಕ್ಸ್...
ಮುಸ್ಲಿಂ ಕುಟುಂಬದಿಂದ ಗಣಪತಿ ತಯಾರಿಕೆ
ಮಾಂಜರಿವಾಡಿ ಗ್ರಾಮದ ಜಮಾದಾರ ಕುಟುಂಬದವರು ಪ್ರತಿ ವರ್ಷ 3000ಕ್ಕೂ ಹೆಚ್ಚು ಪರಿಸರಸ್ನೇಹಿ ಜೇಡಿ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುತ್ತಾರೆ. ಮೂರು ತಲೆಮಾರುಗಳಿಂದ ಗಣೇಶ ಮೂರ್ತಿಗಳನ್ನು ತಯಾರಿಸಲಾಗಿದೆ. ನಮ್ಮ ಕುಟುಂಬಸ್ಥರಿಗೆ ಈ ಕಲೆ ಕರಗತವಾಗಿದೆ. ಹಿಂದೂ-ಮುಸ್ಲಿಂ ಭಾವೈಕ್ಯ ಮನದಲ್ಲಿಟ್ಟುಕೊಂಡು ಭಕ್ತಿಯಿಂದ ನಿಯಮಬದ್ಧವಾಗಿ ಗಣೇಶ ಮೂರ್ತಿ ತಯಾರಿಸುತ್ತೇವೆ ಎಂಬುದು ಕುಟುಂಬದ ಮುಖ್ಯಸ್ಥ ಅಲ್ಲಾಬಕ್ಷ ಜಮಾದಾರ ಅಭಿಮತವಾಗಿದೆ.