ಮಾಜಿ ಸಚಿವ ವಿನಯ ಕುಲಕರ್ಣಿಗೆ ಬಿಗ್​ ರಿಲೀಫ್​: ಶಿಕ್ಷೆ ಅಮಾನತ್ತಿನಲ್ಲಿಟ್ಟು ಜಾಮೀನು ನೀಡಿದ ಹೈಕೋರ್ಟ್​! Vinay Kulkarni

ಮಾಜಿ ಸಚಿವ ವಿನಯ ಕುಲಕರ್ಣಿಗೆ ಬಿಗ್​ ರಿಲೀಫ್​: ಶಿಕ್ಷೆ ಅಮಾನತ್ತಿನಲ್ಲಿಟ್ಟು ಜಾಮೀನು ನೀಡಿದ ಹೈಕೋರ್ಟ್​!  Vinay Kulkarni
ಮಾಜಿ ಸಚಿವ ವಿನಯ ಕುಲಕರ್ಣಿಗೆ ಬಿಗ್​ ರಿಲೀಫ್​: ಶಿಕ್ಷೆ ಅಮಾನತ್ತಿನಲ್ಲಿಟ್ಟು ಜಾಮೀನು ನೀಡಿದ ಹೈಕೋರ್ಟ್​! Vinay Kulkarni
Published on

ಪ್ರಮುಖ ಮುಖ್ಯಾಂಶಗಳು

  • ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಸೇರಿದಂತೆ ಹತ್ತು ಮಂದಿಗೆ ಹೈಕೋರ್ಟ್​ನಿಂದ ಷರತ್ತುಬದ್ಧ ಜಾಮೀನು ಮಂಜೂರು
  • ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಅಮಾನತುಗೊಳಿಸಿ ಹೈಕೋರ್ಟ್ ನಿಂದ ಮಹತ್ವದ ಆದೇಶ ಪ್ರಕಟ
  • ಅಪರಾಧಿಗಳು ತಲಾ ಐದು ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ನೀಡಿ ದಂಡದ ಮೊತ್ತ ಕಡ್ಡಾಯವಾಗಿ ಠೇವಣಿ ಇಡಲು ಸೂಚನೆ
  • ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ದೇಶ ತೊರೆಯದಂತೆ ಹೈಕೋರ್ಟ್ ನಿಂದ ಕಟ್ಟುನಿಟ್ಟಿನ ಷರತ್ತು ವಿಧಿಸಿಕೆ
ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ( Vinay Kulkarni ) ಸೇರಿದಂತೆ ಒಟ್ಟು 10 ಮಂದಿ ಅಪರಾಧಿಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಅಮಾನತುಗೊಳಿಸಿದೆ.
ವಿನಯ ಕುಲಕರ್ಣಿ, ಚಂದ್ರಶೇಖರ ಇಂಡಿ ಮತ್ತು ಚನ್ನಕೇಶವ ಟಿಂಗರಿಕರ್ ಸೇರಿದಂತೆ ಅಪರಾಧಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ನ್ಯಾಯಾಲಯವು ವಿಧಿಸಿರುವ ಷರತ್ತುಗಳ ಪ್ರಕಾರ, ಅಪರಾಧಿಗಳು ವಿಚಾರಣಾ ನ್ಯಾಯಾಲಯ ವಿಧಿಸಿರುವ ದಂಡದ ಮೊತ್ತವನ್ನು ಕಡ್ಡಾಯವಾಗಿ ಠೇವಣಿ ಇಡಬೇಕು. ಇದರೊಂದಿಗೆ ಪ್ರತಿಯೊಬ್ಬರೂ ತಲಾ ಐದು ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಒದಗಿಸಬೇಕು ಹಾಗೂ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ದೇಶ ತೊರೆಯುವಂತಿಲ್ಲ ಎಂದು ಹೈಕೋರ್ಟ್ ಕಟ್ಟುನಿಟ್ಟಾಗಿ ತಿಳಿಸಿದೆ.
ಇದೇ ವೇಳೆ, ಈ ಹಿಂದೆ ವಿಧಿಸಲಾಗಿದ್ದ ಧಾರವಾಡ ಜಿಲ್ಲೆಗೆ ಭೇಟಿ ನೀಡಬಾರದು ಎಂಬ ನಿರ್ಬಂಧದ ಷರತ್ತು ಈಗ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಈ ತೀರ್ಪಿನಿಂದಾಗಿ ವಿನಯ ಕುಲಕರ್ಣಿ ಸೇರಿದಂತೆ ಎಲ್ಲಾ ಹತ್ತು ಮಂದಿ ಅಪರಾಧಿಗಳಿಗೆ ಕಾನೂನು ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ರಿಲೀಫ್ ಸಿಕ್ಕಂತಾಗಿದೆ.
ವಿನಯ್​ ಕುಲಕರ್ಣಿ ದೋಷಿ ಎಂದಿದ್ದ ತೀರ್ಪಿಗೂ ಹೈಕೋರ್ಟ್​ ತಡೆಯಾಜ್ಞೆ ನೀಡಿದೆ. ಇದರಿಂದ ವಿನಯ್​ ಕುಲಕರ್ಣಿಯ ಶಾಸಕ ಸ್ಥಾನಕ್ಕೆ ಮರುಜೀವ ಸಿಕ್ಕಂತಾಗಿದೆ.

ಅಂದಹಾಗೆ, ವಿನಯ್​ ಕುಲಕರ್ಣಿ ಅವರನ್ನು ದೋಷಿ ಎಂದು ಏಪ್ರಿಲ್​ 15ರಂದು ತೀರ್ಪು ಪ್ರಕಟಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಏಪ್ರಿಲ್​ 17ರಂದು ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿ, ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಅಲ್ಲದೆ, ಇದೇ ಸಮಯದಲ್ಲಿ 16 ಲಕ್ಷ ರೂ. ಪರಿಹಾರ ಹಣವನ್ನು ಹತ್ಯೆಯಾದ ಯೋಗೀಶ್​ ಗೌಡ ಅವರ ಮಕ್ಕಳಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು. ಈ ತೀರ್ಪನ್ನು ನ್ಯಾಯಾಧೀಶರಾದ ಗಜಾನನ ಭಟ್ ಅವರು​ ಪ್ರಕಟಿಸಿದರು. ಆದರೆ, ಇದೀಗ ಹೈಕೋರ್ಟ್​ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟು, ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ಹಿನ್ನೆಲೆ ಏನು?

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ್ ಗೌಡ ಅವರ ಹತ್ಯೆ ಪ್ರಕರಣವು ಕರ್ನಾಟಕ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದ ಘಟನೆಯಾಗಿದೆ. 2016ರ ಜೂನ್ 15ರಂದು ಧಾರವಾಡದ ಸಪ್ತಾಪುರದಲ್ಲಿರುವ ತಮ್ಮದೇ ಜಿಮ್‌ನಲ್ಲಿ ಯೋಗೀಶ್ ಗೌಡ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಕೊಲೆಗೆ ರಾಜಕೀಯ ದ್ವೇಷವೇ ಮುಖ್ಯ ಕಾರಣ ಎಂಬ ಆರೋಪಗಳು ಆರಂಭದಿಂದಲೂ ಕೇಳಿಬಂದಿದ್ದವು.

ಈ ಪ್ರಕರಣದ ಪ್ರಮುಖ ತಿರುವು ಎಂದರೆ ಕಾಂಗ್ರೆಸ್ ಪ್ರಭಾವಿ ನಾಯಕ ವಿನಯ್ ಕುಲಕರ್ಣಿ ಅವರ ಬಂಧನ. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದ ಈ ಪ್ರಕರಣವನ್ನು, ನಂತರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಬಿಐ (CBI) ತನಿಖೆಗೆ ವಹಿಸಲಾಯಿತು. ಸಿಬಿಐ ತನಿಖೆಯ ವೇಳೆ ವಿನಯ್ ಕುಲಕರ್ಣಿ ಅವರು ಕೊಲೆಯ ಸಂಚು ರೂಪಿಸಿದ ಪ್ರಮುಖ ಆರೋಪಿಯಾಗಿದ್ದಾರೆ ಎಂದು ಉಲ್ಲೇಖಿಸಿ, 2020ರಲ್ಲಿ ಅವರನ್ನು ಬಂಧಿಸಲಾಯಿತು. ಸುಮಾರು ಒಂಬತ್ತು ತಿಂಗಳುಗಳ ಕಾಲ ಅವರು ಜೈಲು ಶಿಕ್ಷೆ ಅನುಭವಿಸಿದ್ದರು.


ಸಿಬಿಐ ಸಲ್ಲಿಸಿರುವ ದೋಷಾರೋಪ ಪಟ್ಟಿಯ ಪ್ರಕಾರ, ಯೋಗೀಶ್ ಗೌಡ ಮತ್ತು ವಿನಯ್ ಕುಲಕರ್ಣಿ ನಡುವೆ ಜಮೀನು ವಿಚಾರ ಹಾಗೂ ರಾಜಕೀಯ ಪ್ರಾಬಲ್ಯಕ್ಕೆ ಸಂಬಂಧಿಸಿದಂತೆ ತೀವ್ರ ಭಿನ್ನಾಭಿಪ್ರಾಯಗಳಿದ್ದವು. ಇದೇ ದ್ವೇಷದಿಂದಾಗಿ ಯೋಗೇಶ್ ಗೌಡ ಅವರನ್ನು ಹತ್ಯೆ ಮಾಡಲು ವಿನಯ್ ಕುಲಕರ್ಣಿ ಸುಪಾರಿ ನೀಡಿದ್ದರು ಮತ್ತು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರು ಎಂಬ ಗಂಭೀರ ಆರೋಪಗಳನ್ನು ಹೊರಿಸಲಾಯಿತು.

ಈ ಘಟನೆಗೆ ಮುನ್ನ ಮತ್ತು ಘಟನೆ ನಂತರ ವಿನಯ್​ ಕುಲಕರ್ಣಿ ದೆಹಲಿಗೆ ಪ್ರವಾಸ ಮಾಡಿದ್ದರು. ಘಟನೆ ವೇಳೆ ತಾನು ಜಿಲ್ಲಾ ಕೇಂದ್ರದಲ್ಲಿ ಇರಲೇ ಇಲ್ಲ. ರಾಜಧಾನಿ ಮತ್ತು ದೆಹಲಿ ಮಧ್ಯೆ ಪ್ರವಾಸ ಮಾಡುತ್ತಾ ಏನೋ ಪ್ರಮುಖ ಕೆಲಸದಲ್ಲಿ ತೊಡಗಿಕೊಂಡಿದ್ದೆ ಎಂದು ಬಿಂಬಿಸಲು ಪ್ರಯತ್ನಿಸಿದ್ದರು ಎಂಬ ಆರೋಪವಿದೆ. 2016ರ ಜೂ. 12ರಂದು ದೆಹಲಿಗೆ ತೆರಳಿದ್ದ ಕುಲಕರ್ಣಿ 13ರಂದು ಬೆಂಗಳೂರಿಗೆ ವಾಪಸಾಗಿದ್ದರು. ಜೂ. 16ರಂದು ಪುನಃ ದೆಹಲಿಗೆ ತೆರಳಿ 18ರಂದು ರಾಜಧಾನಿಗೆ ವಾಪಸಾಗಿದ್ದರು. ಪ್ರಯಾಣದ ದಿನವೇ ವಿಮಾನ ಟಿಕೆಟ್​ ಪಡೆಯಲಾಗಿತ್ತು ಎಂಬುದನ್ನು ಸಿಬಿಐ ದಾಖಲೆ ಸಹಿತವಾಗಿ ಖಚಿತ ಪಡಿಸಿಕೊಂಡಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿತ್ತು.

ಸಿಬಿಐ ತನಿಖೆಯ ನಂತರ 2020ರಲ್ಲಿ ಬಂಧನವಾಗಿ ಜೈಲು ಸೇರಿದ ವಿನಯ್​ ಕುಲಕರ್ಣಿ ಅವರು, 2021ರ ಆಗಸ್ಟ್‌ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದು ಹೊರಬಂದಿದ್ದರು. ಆದರೆ, ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ ಆರೋಪದ ಮೇಲೆ ಸಿಬಿಐ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದಾದ ಬಳಿಕ 2025ರ ಜೂನ್ 6ರಂದು ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿ ಒಂದು ವಾರದೊಳಗೆ ಶರಣಾಗುವಂತೆ ಆದೇಶಿಸಿತು. ಅದರಂತೆ ಜೂನ್ 14ರಂದು ವಿನಯ್ ಕುಲಕರ್ಣಿ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಶರಣಾದರು. ಈ ವೇಳೆ ಅವರನ್ನು ಸಿಬಿಐ ವಶಕ್ಕೆ ಪಡೆಯಿತು. ಬಳಿಕ ವಿನಯ್​ ಕುಲಕರ್ಣಿ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು.

ಜೈಲು ಸೇರಿದ ನಂತರ ವಿನಯ್ ಕುಲಕರ್ಣಿ ಜಾಮೀನು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, 2026ರ ಜನವರಿ 27ರಂದು ಹೈಕೋರ್ಟ್ ಅರ್ಜಿ ವಜಾಗೊಳಿಸಿ, ಸುಪ್ರೀಂ ಕೋರ್ಟ್‌ನಲ್ಲಿ ಮಾತ್ರ ಮನವಿ ಮಾಡುವಂತೆ ಸೂಚಿಸಿತು. ನಂತರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. 2026ರ ಫೆಬ್ರವರಿ 27ರಂದು ಜಾಮೀನು ಅನುಮೋದನೆಯಾಗಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದರು. ಆದರೆ, ಏಪ್ರಿಲ್​ 15ರಂದು ಮತ್ತೆ ಜೈಲು ಸೇರಿದ್ದರು. ಇದೀಗ ಜಾಮೀನು ಸಿಕ್ಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net