ಸಹಕಾರಿ ಕಾಯ್ದೆ ತಿದ್ದುಪಡಿಗೆ ಮಧ್ಯಂತರ ತಡೆ| High Court

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಸ್ವಾಯತ್ತೆಗೆ ಧಕ್ಕೆ ಎಂದು ಅರ್ಜಿ ಸಲ್ಲಿಸಿರುವ ಹಲವು ಸಂಘಗಳು
  • ವಿವರವಾದ ಪರಿಶೀಲನೆ ಅಗತ್ಯವಿದೆ ಎಂದ ಹೈಕೋರ್ಟ್
ಬೆಂಗಳೂರು: ಸಹಕಾರಿ ಸಂಘಗಳಿಗೆ ಸರ್ಕಾರಿ ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಧಿಕಾರ ನೀಡುವ ಸೆಕ್ಷನ್​ 53-ಎ ಸೇರಿದಂತೆ ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆಗೆ ರಾಜ್ಯ ಸರ್ಕಾರ ತಂದಿರುವ ಕೆಲವು ಮಹತ್ವದ ತಿದ್ದುಪಡಿಗಳಿಗೆ ಹೈಕೋರ್ಟ್​ ಮಧ್ಯಂತರ ತಡೆಯಾಜ್ಞೆ ನೀಡಿದೆ.
2025ರ ಸಹಕಾರಿ ಸಂಘಗಳ (ತಿದ್ದುಪಡಿ) ಕಾಯ್ದೆ ಅಡಿಯಲ್ಲಿ ಸರ್ಕಾರ ಹೊರಡಿಸಿದ ಅಧಿಸೂಚನೆ ಪ್ರಶ್ನಿಸಿ ದಕ್ಷಿಣ ಕನ್ನಡ ಮತ್ತು ಉಡುಪಿಯ ಹಲವು ಸಹಕಾರಿ ಸಂಘಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್​. ಇಂದಿರೇಶ್​ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಮದ್ಯಂತರ ಆದೇಶ ನೀಡಿದೆ.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ತಿದ್ದುಪಡಿ ಕಾಯ್ದೆಯ ಸೆಕ್ಷನ್​ 53-ಎ ಅಡಿಯಲ್ಲಿ ಸಹಕಾರಿ ಸಂಘಗಳ ಆಡಳಿತ ಮಂಡಳಿಗೆ ಸರ್ಕಾರವು ಸದಸ್ಯರನ್ನು ನಾಮನಿರ್ದೇಶನ ಮಾಡುವುದು ಸಹಕಾರಿ ಸಂಘಗಳ ಪ್ರಜಾಸತ್ತಾತ್ಮಕ ಸ್ವರೂಪ ಮತ್ತು ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತದೆ. ಸೆಕ್ಷನ್​ 98ಜಿ ಅಡಿಯಲ್ಲಿ ಒಬ್ಬ ನಾಮನಿರ್ದೇಶಿತ ಸದಸ್ಯನಿಗೆ ಮಾತ್ರ ಅವಕಾಶವಿದ್ದರೂ ಹೊಸ ತಿದ್ದುಪಡಿಗಳು ಈ ಮಿತಿಯನ್ನು ಮೀರುತ್ತಿವೆ. ಇದು ಸಂವಿಧಾನದ 19(1)(ಸಿ) ಅಡಿಯಲ್ಲಿ ನೀಡಲಾದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಮತ್ತು ಸುಪ್ರೀಂ ಕೋರ್ಟ್​ ಈ ಹಿಂದೆ ಯೂನಿಯನ್​ ಆಫ್​ ಇಂಡಿಯಾ ವರ್ಸಸ್​ ರಾಜೇಂದ್ರ ಎನ್​. ಶಾ ಪ್ರಕರಣದಲ್ಲಿ ನೀಡಿದ ತೀರ್ಪಿಗೆ ವಿರುದ್ಧವಾಗಿದೆ ಎಂದು ವಾದಿಸಿದ್ದರು. 

ಅಧಿಕಾರ ವ್ಯಾಪ್ತಿ ಮೀರಿ ಕ್ರಮ: 

ಮುಖ್ಯವಾಗಿ, ಕೇಂದ್ರ ಸರ್ಕಾರ ಅಥವಾ ನಬಾರ್ಡ್​ನಿಂದ ಸಹಾಯ ಪಡೆದ ಸಂಘಗಳಿಗೂ ರಾಜ್ಯ ಸರ್ಕಾರವು ತನ್ನ ನಾಮನಿರ್ದೇಶಿತರನ್ನು ಕಳುಹಿಸಲು ಈ ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದು ರಾಜ್ಯ ಶಾಸಕಾಂಗಕ್ಕೆ ಇರುವ ಅಧಿಕಾರ ವ್ಯಾಪ್ತಿಯನ್ನು ಮೀರಿದ ಕ್ರಮವಾಗಿದೆ. ಈ ತಿದ್ದುಪಡಿಯು ಒಕ್ಕೂಟ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿದಾರರ ವಕೀಲರು ಆತಂಕ ವ್ಯಕ್ತಪಡಿಸಿದ್ದರು. #High court
⚠️

ವಿವರವಾದ ಪರಿಶೀಲನೆ ಅಗತ್ಯ

ಅರ್ಜಿದಾರರ ವಾದಂಶಗಳನ್ನು ಆಲಿಸಿದ ನ್ಯಾಯಪೀಠ, ಈ ವಿಷಯಗಳನ್ನು ವಿವರವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು, ತಿದ್ದುಪಡಿ ಮಾಡಲಾಗಿರುವ 2(ಎ1-1), 28ಎ, 58 ಮತ್ತು 53ಎ ಸೆಕ್ಷನ್​ಗಳಿಗೆ ಮಧ್ಯಂತರ ತಡೆ ನೀಡಿ ವಿಚಾರಣೆ ಮುಂದೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net