ಪರೋಲ್​ ಕೈದಿಗಳ ಕಾನೂನುಬದ್ಧ ಹಕ್ಕಲ್ಲ| High court

High court
High court
Published on
ಬೆಂಗಳೂರು: ಪರೋಲ್​ ನೀಡುವುದು ನಿಯಮಗಳಿಗೆ ಒಳಪಟ್ಟ ಸರ್ಕಾರದ ವಿವೇಚನಾಧಿಕಾರವಾಗಿದ್ದು, ಕೈದಿಗಳು ಅದನ್ನು ತಮ್ಮ ಕಾನೂನುಬದ್ಧ ಹಕ್ಕಾಗಿ ಸಾಧಿಸುವಂತಿಲ್ಲ ಎಂದು ಹೈಕೋರ್ಟ್​ ಸ್ಪಷ್ಟಪಡಿಸಿದೆ.
ಆರ್ಥಿಕ ವಂಚನೆ ಸೇರಿ ಆರು ಕ್ರಿಮಿನಲ್​ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಾಗಾಗಿ, ಕಳೆದ 14 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ 72 ವರ್ಷ ವಯಸ್ಸಿನ ಕೈದಿ ಅಂಬರೀಶ್​ ಎಸ್​. ಕಪಾಡಿಯಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಸಚಿನ್​ ಶಂಕರ್​ ಮಗದುಮ್​ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ. ಅರ್ಜಿದಾರರ ಅಪರಾಧ ಹಿನ್ನೆಲೆ ಗಮನಿಸಿದರೆ ಆತನಿಗೆ ಪರೋಲ್​ ಸೌಲಭ್ಯ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಈ ಹಿಂದೆ 2020ರಲ್ಲಿ ಈತ ಸಲ್ಲಿಸಿದ್ದ ಅರ್ಜಿಯನ್ನು ಜೈಲಾಧಿಕಾರಿಗಳು ವಜಾಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ಆ ವೇಳೆ ಪರೋಲ್​ ಅರ್ಜಿಯನ್ನು ಮರುಪರಿಶೀಲಿಸುವಂತೆ ನ್ಯಾಯಾಲಯವು ಅಧಿಕಾರಿಗಳಿಗೆ ಸೂಚಿಸಿತ್ತು. ಆದರೆ, ಅಷ್ಟರಲ್ಲೇ ಅರ್ಜಿದಾರನನ್ನು ಸಿಬಿಐ ತನಿಖೆಯಲ್ಲಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗುಜರಾತ್​ನ ಅಹಮದಾಬಾದ್​ ಜೈಲಿಗೆ ವರ್ಗಾಯಿಸಲಾಗಿದ್ದರಿಂದ ಆ ಆದೇಶ ಅನುಷ್ಠಾನಕ್ಕೆ ಬಂದಿರಲಿಲ್ಲ. ಇದನ್ನೇ ಆಧಾರವಾಗಿಟ್ಟುಕೊಂಡು, ತನಗೆ ಪೆರೋಲ್​ ಪಡೆಯುವ ಹಕ್ಕಿದೆ ಎಂಬ ಅರ್ಜಿದಾರನ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ. ಹಳೆಯ ಆದೇಶವು ಕೇವಲ ಮರುಪರಿಶೀಲನೆಗೆ ನೀಡಿದ್ದ ನಿರ್ದೇಶನವೇ ಹೊರತು, ಪರೋಲ್​ ನೀಡಲೇಬೇಕು ಎಂಬ ಕಡ್ಡಾಯ ಆದೇಶವಾಗಿರಲಿಲ್ಲ ಎಂದು ಪೀಠ ಹೇಳಿದೆ.
1974ರ ಕರ್ನಾಟಕ ಬಂದೀಖಾನೆ ನಿಯಮಾವಳಿಗಳ ಪ್ರಕಾರ, ಆರು ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿರುವ ಕೈದಿಗೆ ಪರೋಲ್​ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸಿಬಿಐ ಪರ ವಕೀಲರು ವಾದಿಸಿದ್ದರು.

ಆರ್ಥಿಕ ಅಪರಾಧಗಳ ಹಿನ್ನೆಲೆ:

ಅರ್ಜಿದಾರ ಕಪಾಡಿಯಾ ವಿರುದ್ಧ ವಂಚನೆ, ನಕಲಿ ದಾಖಲೆ ಸೃಷ್ಟಿ ಮತ್ತು ಹಣ ದುರುಪಯೋಗದಂತಹ ಗಂಭೀರ ಸ್ವರೂಪದ ಆರ್ಥಿಕ ಅಪರಾಧಗಳ ಪ್ರಕರಣಗಳಿವೆ. ಇದರಲ್ಲಿ ಒಂದು ಪ್ರಕರಣ ಸಿಬಿಐ ವ್ಯಾಪ್ತಿಯಲ್ಲಿದೆ. ಇಂತಹ ಸಾರ್ವಜನಿಕ ನಂಬಿಕೆಗೆ ದ್ರೋಹ ಬಗೆಯುವ ಅಪರಾಧಗಳ ಹಿನ್ನೆಲೆ ಹೊಂದಿರುವ ವ್ಯಕ್ತಿಗೆ ಸಕಾರಣವಿಲ್ಲದೆ ಪರೋಲ್​ ನೀಡುವುದು ಸೂಕ್ತವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
⚠️

ಜೈಲುವಾಸವೊಂದೇ ಮಾನದಂಡವಲ್ಲ 

ತಾನು ಈಗಾಗಲೇ 14 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿರುವುದರಿಂದ ಮಾನವೀಯ ಆಧಾರದ ಮೇಲೆ ಪರೋಲ್​ ನೀಡಬೇಕೆಂಬ ಅರ್ಜಿದಾರನ ಮನವಿಯನ್ನು ತಿರಸ್ಕರಿಸಿರುವ ನ್ಯಾಯಪೀಠ, ಕೇವಲ ಜೈಲು ವಾಸದ ಅವಧಿಯನ್ನು ಮಾತ್ರ ಪರಿಗಣಿಸಿ ಪರೋಲ್​ ನೀಡಲಾಗದು. ಅಪರಾಧದ ಸ್ವರೂಪ ಮತ್ತು ಸಮಾಜದ ಮೇಲಿನ ಅದರ ಪ್ರಭಾವವನ್ನು ಕಡೆಗಣಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್​ನ ಹಳೆಯ ತೀರ್ಪುಗಳನ್ನು ಹೈಕೋರ್ಟ್​ ಉಲ್ಲೇಖಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net