ಆರ್​ಟಿಐ ಮೇಲ್ಮನವಿಗಳ ಅನ್​ಲೈನ್​ ವಿಚಾರಣೆ ಕಡ್ಡಾಯವಲ್ಲ| High court

High court
High court
Published on
ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆಯಡಿ (ಆರ್​ಟಿಐ) ಸಲ್ಲಿಕೆಯಾಗುವ ಅರ್ಜಿಗಳ ವಿಚಾರಣೆಗೆ ಮೇಲ್ಮನವಿ ಪ್ರಾಧಿಕಾರಗಳಲ್ಲಿ ಆನ್​ಲೈನ್​ ವ್ಯವಸ್ಥೆಯನ್ನು ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ.
ಬೆಂಗಳೂರಿನ ಕೆ.ಎನ್​. ಪ್ರಣವ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್​ ಗೋವಿಂದರಾಜ್​ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಆನ್​ಲೈನ್​ ವಿಚಾರಣೆಯ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಆಡಳಿತಾತ್ಮಕ  ನಿರ್ಧಾರಕ್ಕೆ ಸಂಬಂಧಿಸಿದೆ ಎಂದು ಸ್ಪಷ್ಟಪಡಿಸಿದೆ.
ಸ್ವತಃ ವಾದ ಮಂಡಿಸಿದ್ದ ಅರ್ಜಿದಾರರು, ಆನ್​ಲೈನ್​ ವಿಚಾರಣೆಯ ಹಕ್ಕು ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಿರುವ ಮೂಲಭೂತ ಹಕ್ಕಾಗಿದೆ ಎಂದು ತಮ್ಮ ಬೇಡಿಕೆಯನ್ನು ಸುಪ್ರೀಂ ಕೋರ್ಟ್​ ಆದೇಶವೊಂದನ್ನು ಆಧರಿಸಿ ಸಮರ್ಥಿಸಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸೌಲಭ್ಯಗಳ ಲಭ್ಯತೆ ಇದ್ದಾಗ ಮಾತ್ರ ಈ ತತ್ವ ಅನ್ವಯಿಸುತ್ತದೆ. ಪ್ರತಿಯೊಂದು ಇಲಾಖೆಯಲ್ಲೂ ಈ ಸೌಲಭ್ಯ ಒದಗಿಸಲು ಸಾವಿರ ಕೋಟಿ ರೂಪಾಯಿ ಬೇಕಾಗಬಹುದು. ಅದನ್ನು ಯಾರು ಕೊಡುತ್ತಾರೆ ಎಂದು ಪ್ರಶ್ನಿಸಿತು.
ಸರ್ಕಾರದ ಪರ ವಾದಿಸಿದ ವಕೀಲರು, ಎಲ್ಲ ಕಡೆಗಳಲ್ಲಿ ಆನ್​ಲೈನ್​ ವ್ಯವಸ್ಥೆ ಜಾರಿಗೆ ತರಲು ಭಾರಿ ಹೂಡಿಕೆಯ ಅಗತ್ಯವಿದೆ. ಇದು ಕಾರ್ಯಸಾಧ್ಯವಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದನ್ನು ಪರಿಗಣಿಸಿರುವ ನ್ಯಾಯಪೀಠ, ಆನ್​ಲೈನ್​ ವಿಚಾರಣೆಗೆ ಒತ್ತು ನೀಡಲು ಸರ್ಕಾರಗಳಿಗೆ ಸುಪ್ರೀಂಕೋರ್ಟ್​ ಸೂಚನೆ ನೀಡಿದೆಯಾದರೂ, ಅದನ್ನು ಕಡ್ಡಾಯ ಮಾಡಿಲ್ಲ. ಇದು ರಾಜ್ಯ ಸರ್ಕಾರ ಮತ್ತು ಮೇಲ್ಮನವಿ ಪ್ರಾಧಿಕಾರಗಳ ಆಡಳಿತಾತ್ಮಕ ನಿರ್ಧಾಕ್ಕೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿದೆ.

ಏನಿದು ಪ್ರಕರಣ?

ಅರ್ಜಿದಾರರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ (ಕೆಎಸ್​ಎಲ್​ಯು) ಆರ್​ಟಿಐ ಅರ್ಜಿಯೊಂದನ್ನು ಸಲ್ಲಿಸಿದ್ದರು. ಅದಕ್ಕೆ ಸಾರ್ವಜನಿಕ ಮಾಹಿತಿ ಅಧಿಕಾರಿ ನೀಡಿದ್ದ ಉತ್ತರದಿಂದ ತೃಪ್ತಿಹೊಂದದ ಅವರು ವಿವಿಯ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಆನ್​ಲೈನ್​ ಮೂಲಕ ವಿಚಾರಣೆಗೆ ಕೋರಿದ್ದರು. ಈ ಮನವಿಯನ್ನು ತಿರಸ್ಕರಿಸಿದ್ದ ಪ್ರಾಧಿಕಾರವು ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ಅರ್ಜಿದಾರರಿಗೆ 2025ರ ನ. 25ರಂದು ತಿಳಿಸಿತ್ತು. ಈ ಕ್ರಮವನ್ನು ರದ್ದುಪಡಿಸಿ ಅನ್​ಲೈನ್​ ವಿಚಾರಣೆಗೆ ಅವಕಾಶ ಕಲ್ಪಿಸಲು ವಿವಿಗೆ ಮತ್ತು ರಾಜ್ಯದ ಎಲ್ಲ ಆರ್​ಟಿಐ ಮೇಲ್ಮನವಿ ಪ್ರಾಧಿಕಾರಗಳಲ್ಲಿ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂದು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net