ಸಿನಿಮಾ ಪ್ರದರ್ಶನಕ್ಕೆ ಸ್ಥಳಿಯ ಸಂಸ್ಥೆಯ ಲೈಸೆನ್ಸ್ ಅಗತ್ಯವಿಲ್ಲ| High court
High court
Published on:
Copied
Follow Us
ಬೆಂಗಳೂರು: ಚಲನಚಿತ್ರಗಳ ಪ್ರದರ್ಶನವು ಕರ್ನಾಟಕ ಸಿನಿಮಾ (ನಿಯಂತ್ರಣ) ಕಾಯ್ದೆಯಡಿ ಬರುವುದರಿಂದ, ಚಿತ್ರಮಂದಿರಗಳು ಸ್ಥಳಿಯ ನಗರಸಭೆ ಅಥವಾ ಪುರಸಭೆಗಳಿಂದ ಪ್ರತ್ಯೇಕವಾಗಿ ವ್ಯಾಪಾರ ಪರವಾನಗಿ ಪಡೆಯುವ ಅಗತ್ಯವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಚಿಂತಾಮಣಿಯ ಎಸ್ಎಲ್ಎನ್ ಚಿತ್ರಮಂದಿರದ ಮಾಲೀಕರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ನೀಡಿದೆ. ಚಿತ್ರಮಂದಿರ ನಡೆಸಲು ನಗರಸಭೆಯಿಂದ ವ್ಯಾಪಾರ ಪರವಾನಗಿ ಪಡೆಯುವಂತೆ ಚಿಂತಾಮಣಿ ನಗರಸಭೆಯು ನೀಡಿದ್ದ ನೋಟಿಸ್ ಅನ್ನು ನ್ಯಾಯಪೀಠ ರದ್ದುಪಡಿಸಿದೆ.
ಕರ್ನಾಟಕ ಪುರಸಭೆಗಳ ಕಾಯ್ದೆ 1964ರ ಸೆಕ್ಷನ್ 256ರ ಅಡಿಯಲ್ಲಿ ಚಲನಚಿತ್ರಗಳ ಚಿತ್ರೀಕರಣ ಮತ್ತು ಸಂಸ್ಕರಣೆಗೆ ಮಾತ್ರ ಪರವಾನಗಿ ಪಡೆಯುವ ಉಲ್ಲೇಖವಿದೆಯೇ ಹೊರತು, ಚಲನಚಿತ್ರಗಳ ಪ್ರದರ್ಶನಕ್ಕಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಸಿನಿಮಾ ಪ್ರದರ್ಶನಕ್ಕೆ ಕರ್ನಾಟಕ ಸಿನಿಮಾ (ನಿಯಂತ್ರಣ) ಕಾಯ್ದೆ ಅನ್ವಯವಾಗುತ್ತದೆ. ಈ ಕಾಯ್ದೆಯಡಿ ಜಿಲ್ಲಾಧಿಕಾರಿಗಳೇ ಪರವಾನಗಿ ನೀಡುವ ಅಧಿಕಾರ ಹೊಂದಿರುತ್ತಾರೆ. ಆದ್ದರಿಂದ ನಗರಸಭೆಯು ಪ್ರತ್ಯೇಕವಾಗಿ ವ್ಯಾಪಾರ ಪರವಾನಗಿ ಪಡೆಯುವಂತೆ ಒತ್ತಾಯಿಸುವಂತಿಲ್ಲ ಎಂದು ನ್ಯಾಯಪೀಠ ತೀರ್ಪು ನೀಡಿದೆ.
ವಾಣಿಜ್ಯ ಚಟುವಟಿಕೆಗೆ ಪರವಾನಗಿ ಅಗತ್ಯ:
ಸಿನಿಮಾ ಪ್ರದರ್ಶನಕ್ಕೆ ಪುರಸಭೆಯ ವ್ಯಾಪಾರ ಪರವಾನಗಿ ಅಗತ್ಯವಿಲ್ಲ. ಆದರೆ, ಚಿತ್ರಮಂದಿರದ ಆವರಣದಲ್ಲಿ ನಡೆಯುವ ವಾಣಿಜ್ಯ ಚಟುವಟಿಕೆಗಳಾದ ಕ್ಯಾಂಟೀನ್, ಆಹಾರ ಮಳಿಗೆಗಳು ಅಥವಾ ಇತರ ವ್ಯಾಪಾರಗಳಿಗೆ ಸ್ಥಳಿಯ ಸಂಸ್ಥೆಗಳಿಂದ ನಿಯಮಾನುಸಾರ ಪರವಾನಗಿ ಪಡೆಯುವುದು ಕಡ್ಡಾಯ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.