ಪಾಲಕರ ಆರೈಕೆ ಮಕ್ಕಳ ಶಾಸನಬದ್ಧ ಕರ್ತವ್ಯ| High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ಪುತ್ರಿಗೆ ತಾಯಿ ನೀಡಿದ ಗಿಫ್ಟ್​​ಡೀಡ್ ರದ್ದುಗೊಳಿಸಿದ ನ್ಯಾಯಮಂಡಳಿ
  • ನಿರ್ಧಾರ ಎತ್ತಿಹಿಡಿದ ಹೈಕೋರ್ಟ್
ಬೆಂಗಳೂರು: ಹಿರಿಯ ನಾಗರಿಕರು ತಮ್ಮ ಹೆಸರಿಗಿದ್ದ ಸ್ವಯಾರ್ಜಿತ ಆಸ್ತಿಯನ್ನು ಮಕ್ಕಳಿಗೆ ದಾನವಾಗಿ (ಗಿಫ್ಟ್ ಡೀಡ್​) ನೀಡಿದ ನಂತರ, ಮಕ್ಕಳು ಅವರನ್ನು ಸರಿಯಾಗಿ ಸಾಕಿ ಸಲಹದಿದ್ದರೆ ಅಂತಹ ದಾನಪತ್ರವನ್ನು ರದ್ದುಗೊಳಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಹೈಕೋರ್ಟ್​ ಸ್ಪಷ್ಟಪಡಿಸಿದೆ. ಮೈಸೂರಿನ ನಿವೃತ್ತ ಶಿಕ್ಷಕಿಯೊಬ್ಬರು ತಮ್ಮ ಪುತ್ರಿಗೆ ನೀಡಿದ್ದ ಆಸ್ತಿ ದಾನಪತ್ರವನ್ನು ರದ್ದುಗೊಳಿಸಿದ ಮೈಸೂರು ಉಪವಿಭಾಗ ಸಹಾಯಕ ಆಯುಕ್ತರ ಆದೇಶವನ್ನು ನ್ಯಾಯಾಲಯ ಎತ್ತಿಹಿಡಿದಿದೆ. 
ಆರ್​. ಪವಿತ್ರಾ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಸಚಿನ್​ ಶಂಕರ್​ ಮಗದುಮ್​ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ. 
ಪಾಲಕರಿಂದ ಆಸ್ತಿ ಪಡೆದ ಮೇಲೆ ಅವರನ್ನು ನೋಡಿಕೊಳ್ಳುವುದು ನೈತಿಕ ಹೊಣೆಗಾರಿಕೆ ಮಾತ್ರವಲ್ಲ. ಅದು ಶಾಸನಬದ್ಧ ಕರ್ತವ್ಯವೂ ಹೌದು. ದಾನ ಪತ್ರದಲ್ಲಿ ತಾಯಿಯನ್ನು ನೋಡಿಕೊಳ್ಳಬೇಕು ಎಂಬ ಲಿಖಿತ ಷರತ್ತು ಇಲ್ಲದಿದ್ದರೂ ಅಂತಹ ಜವಾಬ್ದಾರಿಯನ್ನು ಸಂದರ್ಭ ಮತ್ತು ನಡವಳಿಕೆಯ ಆಧಾರದ ಮೇಲೆ ಅರ್ಥೈಸಿಕೊಳ್ಳಬೇಕು. ಕುಟುಂಬದ ಸದಸ್ಯರ ನಡುವಿನ ಆಸ್ತಿ ವರ್ಗಾವಣೆಯು ಪರಸ್ಪರ ನಂಬಿಕೆ ಮತ್ತು ನೈತಿಕ ಜವಾಬ್ದಾರಿಯ ಮೇಲೆ ನಿಂತಿರುತ್ತದೆ ಎಂದು ಕೋರ್ಟ್​ ಅಭಿಪ್ರಾಯಪಟ್ಟಿದೆ.

ಏನಿದು ಪ್ರಕರಣ?:

ನಿವೃತ್ತ ಶಾಲಾ ಶಿಕ್ಷಕಿಯಾದ ಹೇಮಾ ಎಂಬುವರು ತಮ್ಮ ಪತಿಯೊಂದಿಗೆ ಮನಸ್ತಾಪ ಉಂಟಾದಾಗ ಸುಮಾರು 3 ವರ್ಷಗಳ ಕಾಲ ತನ್ನ ಮಗಳ ಮನೆಯಲ್ಲಿ ವಾಸವಿದ್ದರು. ಈ ಸಂದರ್ಭದಲ್ಲಿ ಮೈಸೂರಿನಲ್ಲಿರುವ ಸ್ವಯಾರ್ಜಿತ ಆಸ್ತಿಯಾದ ಮನೆಯನ್ನು ತಮ್ಮ ಹೆಸರಿಗೆ ದಾನವಾಗಿ ನೀಡಿದರೆ, ಅದರಿಂದ ಬರುವ ಬಾಡಿಗೆ ಹಣದಲ್ಲಿ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಅವರ ಪುತ್ರಿ ಮತ್ತು ಪುತ್ರ ಭರವಸೆ ನೀಡಿದ್ದರು. ಇದನ್ನು ನಂಬಿದ ತಾಯಿ, ಮನೆಯ ತಳಮಹಡಿಯನ್ನು ಮಗಳ ಹೆಸರಿಗೂ ಮತ್ತು ಮೊದಲ ಮಹಡಿಯನ್ನು ಮಗನಿಗೂ 2024ರಲ್ಲಿ ದಾನ ಪತ್ರದ ಮೂಲಕ ವರ್ಗಾಯಿಸಿದ್ದರು. 
ಆದರೆ, ಆಸ್ತಿ ಕೈ ಸೇರಿದ ನಂತರ ಮಕ್ಕಳು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಎರಡೂ ಮಹಡಿಗಳ ಬಾಡಿಗೆಯನ್ನು ಮಕ್ಕಳೇ ವಸೂಲಿ ಮಾಡುತ್ತಿದ್ದರೂ, ತನ್ನನ್ನು ಬಾಡಿಗೆ ಮನೆಯಲ್ಲಿ ಇರಿಸಿದ್ದಾರೆ. ಸರಿಯಾದ ಸೌಲಭ್ಯ ನೀಡದೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಮೈಸೂರು ಉಪವಿಭಾಗ ಸಹಾಯಕ ಆಯುಕ್ತರ ನೇತೃತ್ವದ ಹಿರಿಯ ನಾಗರಿಕರ ಕಲ್ಯಾಣ ನ್ಯಾಯಮಂಡಳಿಗೆ ತಾಯಿ ದೂರು ನೀಡಿದ್ದರು. ವಿಚಾರಣೆ ನಡೆಸಿದ ನ್ಯಾಯಮಂಡಳಿಯು ದಾನ ಪತ್ರವನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪುತ್ರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. High court
⚠️

ಕಾಯ್ದೆಯ ಉದ್ದೇಶವೇ ರಕ್ಷಣೆ 

ವಯಸ್ಸಾದ ಪಾಲಕರು ಬೀದಿಗೆ ಬೀಳಬಾರದು ಎಂಬುದು ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆಯ ಮೂಲ ಉದ್ದೇಶವಾಗಿದೆ. ಹಾಗಿರುವಾಗ ದಾನಪತ್ರದಲ್ಲಿ ತಾಯಿಯನ್ನು ನೋಡಿಕೊಳ್ಳಬೇಕು ಎಂಬ ಷರತ್ತು ಇಲ್ಲ ಎಂಬ ತಾಂತ್ರಿಕ ಕಾರಣಗಳಿಗೆ ಪಾಲಕರ ಹಕ್ಕುಗಳನ್ನು ನಿರಾಕರಿಸಲು ಸಾಧ್ಯವಿಲ್ಲ. ಸ್ವಂತ ಮನೆಯಿರುವ ಪುತ್ರಿ, ತಾಯಿಯಿಂದ ಸಿಕ್ಕ ಆಸ್ತಿಯ ಬಾಡಿಗೆಯನ್ನು ಪಡೆಯುತ್ತ ತಾಯಿಯನ್ನು ಬಾಡಿಗೆ ಮನೆಯಲ್ಲಿಟ್ಟಿರುವುದು ಕಾನೂನುಬದ್ಧ ಕರ್ತವ್ಯದ ಉಲ್ಲಂನೆಯಾಗಿದೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net