ಸೇಡು ತೀರಿಸಿಕೊಳ್ಳಲು ಕಾನೂನು ದುರ್ಬಳಕೆ ಸಲ್ಲ| ಅತ್ಯಾಚಾರ ಪ್ರಕರಣ ರದ್ದು| High court

ಹೈಕೋರ್ಟ್​
ಹೈಕೋರ್ಟ್​
Published on
ಬೆಂಗಳೂರು: ಮದುವೆಯ ಆಮಿಷವೊಡ್ಡಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವಕೀಲರೊಬ್ಬರ ವಿರುದ್ಧ ದಾಖಲಾಗಿದ್ದ ಎಫ್​ಐಆರ್​ ರದ್ದುಗೊಳಿಸಿರುವ ಹೈಕೋರ್ಟ್​, ವೈಯಕ್ತಿಕ ಮನಸ್ತಾಪಗಳನ್ನು ತೀರಿಸಲು ಕಾನೂನಿನ ದುರ್ಬಳಕೆ ಸಲ್ಲದು ಎಂದು ತೀರ್ಪು ನೀಡಿದೆ.
ದೂರುದಾರೆ ಮಹಿಳೆ ಮತ್ತು ಅರ್ಜಿದಾರ ವಕೀಲರು ಚೆಕ್​ ಬೌನ್ಸ್​ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 2022ರಲ್ಲಿ ಪರಿಚಿತರಾಗಿದ್ದರು. ನಂತರ ಸ್ನೇಹ ಬೆಳೆದು ಅದು ದೈಹಿಕ ಸಂಬಂಧಕ್ಕೆ ಬದಲಾಗಿತ್ತು. ಮದುವೆಯ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ್ದಾರೆ. ಆದರೆ, ನಂತರ ಮದುವೆಯಾಗಲು ನಿರಾಕರಿಸಿದ್ದಾರೆ ಎಂದು ವಕೀಲರ ವಿರುದ್ಧ ಮಹಿಳೆ ದೂರು ದಾಖಲಿಸಿದ್ದರು. ಈ ಪ್ರಕರಣ ರದ್ದುಗೊಳಿಸುವಂತೆ ವಕೀಲರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. 
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮನವಿಯನ್ನು ಪುರಸ್ಕರಿಸಿದ್ದು, ಮಹಿಳೆಯು ಈಗಾಗಲೆ ವಿವಾಹಿತೆಯಾಗಿರುವಾಗ ಇಂತಹ ಆರೋಪಗಳನ್ನು ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದೆ. ಮಹಿಳೆ ವಿವಾಹಿತೆ ಮತ್ತು ಇಬ್ಬರು ಮಕ್ಕಳ ತಾಯಿ ಆಗಿರುವಾಗ ಕೇವಲ ಮದುವೆಯ ಭರವಸೆಯ ಮೇಲೆ ದೈಹಿಕ ಸಂಬಂಧಕ್ಕೆ ಒಪ್ಪಿಗೆ ನೀಡಿದ್ದರು ಎಂಬ ವಾದವನ್ನು ಒಪ್ಪಲಾಗದು. ಅದಲ್ಲದೆ, ಮದುವೆ ಭರವಸೆ ಮೇಲಿನ ಸಮ್ಮತಿಯ ಲೈಂಗಿಕ ಸಂಬಂಧವು ಎಲ್ಲ ಪ್ರಕರಣಗಳಲ್ಲಿ ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್​ನ ತೀರ್ಪುಗಳನ್ನು ಉಲ್ಲೇಖಿಸಿ ಹೇಳಿದೆ.

ದುರುದ್ದೇಶವಿದ್ದರೆ ಪ್ರಕರಣ ರದ್ದು:

ಈ ಪ್ರಕರಣದಲ್ಲಿ ಅರ್ಜಿದಾರನ ಕುಟುಂಬದವರನ್ನೂ ಎಳೆದು ತಂದಿರುವುದು ವಂಚನೆಯ ಕಥೆ ಸೃಷ್ಟಿಸುವ ಪ್ರಯತ್ನವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಆರೋಪಿಗಳು ಎಫ್ಐಆರ್​ ರದ್ದುಗೊಳಿಸಲು ನ್ಯಾಯಾಲಯದ ಮೊರೆ ಹೋದಾಗ, ಪ್ರಕರಣದಲ್ಲಿರುವ ಆರೋಪಗಳನ್ನು ಮಾತ್ರ ಗಮನಿಸದೆ, ಅದರ ಹಿಂದೆ ದುರುದ್ದೇಶ ಅಥವಾ ಸಂಚು ಇದೆಯೇ ಎಂಬ ಬಗ್ಗೆ ಅವಲೋಕನ ಮಾಡಬೇಕು ಎಂಬ ಸುಪ್ರೀಂಕೋರ್ಟ್​ ನಿರ್ದೇಶನವನ್ನು ಆದೇಶದಲ್ಲಿ ಉಲ್ಲೇಖಿಸಿದೆ.
ದೂರುದಾರರು ಕಾನೂನು ಪ್ರಕ್ರಿಯೆಗಳನ್ನು ಚಾಣಾಕ್ಷತನದಿಂದ ದುರ್ಬಳಕೆ ಮಾಡಿಕೊಂಡಿರುವ ಸಾಧ್ಯತೆಯಿದೆ. ಆದ್ದರಿಂದ ನ್ಯಾಯಾಧೀಶರು ಕೇವಲ ಲಿಖಿತ ಅಂಶಗಳಿಗೆ ಸೀಮಿತರಾಗದೆ ಸಾಲುಗಳ ನಡುವಿನ ಗೂಢಾರ್ಥಗಳನ್ನು ಅರಿಯಲು ಪ್ರಯತ್ನಿಸಬೇಕು ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ ಪ್ರಕರಣ ರದ್ದುಗೊಳಿಸಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net