ಅಪರಾಧ ತಡೆಯಲು ಕಾನೂನು ವಿಕಸನಗೊಳ್ಳಬೇಕು| High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ಆರೋಪಿಗಳಿಂದ ಲೋಪದೋಷಗಳ ಬಳಕೆ ಹೆಚ್ಚುತ್ತಿದೆ ಎಂದು ಅವಲೋಕನ
ಬೆಂಗಳೂರು: ಕಾನೂನಿನಲ್ಲಿರುವ ಕೆಲವೊಂದು ಲೋಪದೋಷಗಳನ್ನು ಬಳಸಿಕೊಂಡು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಪ್ರಯತ್ನಿಸುತ್ತಾರೆ. ಆದ್ದರಿಂದ, ಅದನ್ನು ತಡೆಯಬೇಕಾದರೆ ಅಪರಾಧಗಳು ವಿಕಾಸವಾದಂತೆಯೇ ಕಾನೂನು ಕೂಡ ವಿಕಸನಗೊಳ್ಳಬೇಕಿದೆ ಎಂದು ಹೈಕೋರ್ಟ್​ ಹೇಳಿದೆ.
ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್​ಐ) ತನ್ನ ವಿರುದ್ಧ ಸಲ್ಲಿಸಿರುವ ಚಾರ್ಜ್​ಶೀಟ್​ ಅನ್ನು ರದ್ದುಗೊಳಿಸಬೇಕು ಎಂದು ಕೋರಿ ಅಂತಾರಾಷ್ಟ್ರೀಯ ಡ್ರಗ್ಸ್​ ಜಾಲದ ಪ್ರಮುಖ ಆರೋಪಿ ದೆಹಲಿ ಮೂಲದ ಗುರುಪ್ರೀತ್​ ಸಿಂಗ್​ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯಪಟ್ಟಿದೆ.
ಆರೋಪಿ ಪರ ವಾದಿಸಿದ ವಕೀಲರು, ಅರ್ಜಿದಾರರ ವಿರುದ್ಧ ಇರುವ ಆರೋಪಗಳನ್ನು ನೋಡಿದರೆ ಕಟ್ಟುಕತೆಯಂತೆ ಇದೆ. ಇಂತಹ ಪ್ರವೃತ್ತಿಗೆ ಒಂದು ಮಿತಿಯಿರಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಆರ್​ಐ ಪರ ವಕೀಲರು, ಆರೋಪಿಯ ವಿರುದ್ಧ ಸೂಕ್ತ ದಾಖಲೆಗಳಿರುವುದರಿಂದಲೇ ಆತನ ವಿರುದ್ಧ ಚಾರ್ಜ್​ಶಿಟ್​ ದಾಖಲಿಸಲಾಗಿದೆ. ತನಿಖಾ ಸಂಸ್ಥೆಯು ಆತನ ಮನೆ ಮೇಲೆ ದಾಳಿ ಮಾಡಿದಾಗ ಮಾದಕ ವಸ್ತುಗಳ ಸಾಗಣೆಗೆ ಸಂಬಂಧಿಸಿದ 1 ಕೋಟಿ ರೂಪಾಯಿಗೂ ಅಧಿಕ ನಗದು, ಹಣ ಎಣಿಸುವ ಯಂತ್ರ ಮತ್ತು ಹವಾಲಾ ಜಾಲದ ಮಾಹಿತಿಯಿರುವ 6 ಮೊಬೈಲ್​ ಫೋನ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು ಹೈಡ್ರೋಪೋನಿಕ್​ ಗಾಂಜಾಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ ಎಂದು ತಿಳಿಸಿದರು.

ಬದಲಾವಣೆಗೆ ಸೂಕ್ತ ಸಮಯ:

ಉಭಯ ಪಕ್ಷಗಾರರ ವಾದದ ವೇಳೆ ಮಧ್ಯಪ್ರವೇಶಿಸಿದ ನ್ಯಾಯಪೀಠ, ತನಿಖಾ ಸಂಸ್ಥೆಗಳು ಸರಿಯಾಗಿ ನಿಯಮ ಪಾಲಿಸಿದರೆ ಯಾವ ಕೋರ್ಟ್​ಗಳು ಕೂಡ ತನಿಖೆಯಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಅಲ್ಲದೆ, ಅಪರಾಧಗಳಲ್ಲಿ ಕೂಡ ವಿಕಸನಗಳಾಗುತ್ತಿದ್ದು, ಅದಕ್ಕೆ ಸರಿಯಾಗಿ ಕಾನೂನು ಕೂಡ ವಿಕಸನವಾಗಬೇಕು. ಇಲ್ಲವಾದಲ್ಲಿ ನಿಯಮಗಳಲ್ಲಿ ಲೋಪದೋಷ ಹುಡುಕುವ ಮೂಲಕ ಆರೋಪಿಗಳು ತಪ್ಪಿಸಲು ಪ್ರಯತ್ನಿಸುತ್ತಾರೆ. ಮಾದಕ ವಸ್ತು ನಿಯಂತ್ರಣ ಕಾಯ್ದೆಯಲ್ಲಿ (ಎನ್​ಡಿಪಿಎಸ್​) ಕೆಲವೊಂದು ಬದಲಾವಣೆಗಳನ್ನು ಮಾಡಲು ಕೇಂದ್ರ ಸರ್ಕಾರಕ್ಕೆ ಇದು ಸೂಕ್ತ ಸಮಯ ಎಂದು ಅವಲೋಕನ ಮಾಡಿತು. ಅರ್ಜಿಗೆ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಡಿಆರ್​ಐ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಜು. 29ಕ್ಕೆ ಮುಂದೂಡಿತು. 
ℹ️

ಪ್ರಕರಣದ ಹಿನ್ನೆಲೆ

ದುಬೈನಲ್ಲಿ ನೆಲೆಸಿರುವ ಹರ್​ಪ್ರೀತ್​ ಸಿಂಗ್​ ಎಂಬಾತ ಬ್ಯಾಂಕಾಕ್​ ಮತ್ತಿತರ ದೇಶಗಳಿಂದ ಮಾದಕ ವಸ್ತುಗಳನ್ನು ಖರೀದಿಸಿ ಭಾರತಕ್ಕೆ ಸಾಗಿಸುತ್ತಿದ್ದ. ಆತನ ಸಹೋದರನಾದ ಗುರುಪ್ರೀತ್​ ಸಿಂಗ್​ ಭಾರತದಲ್ಲಿ ಹಣಕಾಸಿನ ವ್ಯವಹಾರ ಮತ್ತು ಸಾಗಾಟದ ಹೊಣೆ ಹೊತ್ತುಕೊಂಡಿದ್ದ. ಈ ವಹಿವಾಟುಗಳಿಗೆ ಹವಾಲಾ ಮತ್ತು ಕ್ರಿಪ್ಟೋ ಕರೆನ್ಸಿಗಳ ಮೂಲಕ ಪಾವತಿ ಮಾಡಲಾಗುತ್ತಿತ್ತು ಎಂಬುದು ಡಿಆರ್​ಐ ಪತ್ತೆ ಮಾಡಿತ್ತು. ದೆಹಲಿಯಲ್ಲಿರುವ ಗುರುಪ್ರೀತ್​ ಸಿಂಗ್​ ಮನೆ ಮೇಲೆ ಡಿಆರ್​ಐ ಅಧಿಕಾರಿಗಳು ದಾಳಿ ನಡೆಸಿದಾಗ 1.2 ಕೋಟಿ ರೂಪಾಯಿ ನಗದು ಮತ್ತು ಹಲವು ದೇಶಗಳ ವಿದೇಶಿ ಕರೆನ್ಸಿಗಳು ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ದೇಶದ ಹಲವು ಕಡೆಗಳಲ್ಲಿ ದಾಳಿ ನಡೆಸಿದ್ದ ಡಿಆರ್​ಐ 60 ಕೆ.ಜಿ. ಗೂ ಅಧಿಕ ಹೈಡ್ರೋಪೋನಿಕ್​ ಗಾಂಜಾ ವಶಪಡಿಸಿಕೊಂಡಿದ್ದರು. ಈ ಪ್ರಕರಣ ರದ್ದುಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net