'ಬೇಲೇಕೇರಿ' ಸಿಬಿಐಗೆ ಹಿನ್ನಡೆ| ಕ್ರಿಮಿನಲ್ ಪಿತೂರಿ ಸಾಕ್ಷಿ ಒದಗಿಸಲು ವಿಫಲ ಎಂದ High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ಎಂಎಸ್​ಪಿಎಲ್​ ವಿರುದ್ಧದ ಕ್ರಿಮಿನಲ್​ ಮೊಕದ್ದಮೆ ರದ್ದು
  • ಸುಪ್ರೀಂಕೋರ್ಟ್​ ಸೂಚನೆ ಮೇರೆಗೆ ಮರುವಿಚಾರಣೆ ನಡೆಸಿದ್ದ ನ್ಯಾಯಾಲಯ
  • ಗಣಿಗಾರಿಕೆಗೆ ಪರವಾನಗಿ ಜವಾಬ್ದಾರಿ ಖರೀದಿದಾರನದ್ದಲ್ಲ ಎಂದು ಆದೇಶದಲ್ಲಿ ಉಲ್ಲೇಖ
|ಶ್ರವಣ್​ ನೀರಬಿದಿರೆ ಬೆಂಗಳೂರು
ರಾಜ್ಯದಲ್ಲಿ ಭಾರಿ ಸದ್ದು ಮಾಡಿ ಶಾಸಕ ಸತೀಶ್​ ಸೈಲ್​ ಸೇರಿದಂತೆ ಹಲವು ನಾಯಕರಿಗೆ ಉರುಳಾಗಿ ಸುತ್ತಿಕೊಂಡಿದ್ದ ಬೇಲೇಕೇರಿ ಬಂದರಿನಿಂದ ಅಕ್ರಮವಾಗಿ ಕಬ್ಬಿಣದ ಅದಿರು ಸಾಗಿಸಿದ್ದ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಎಂಎಸ್​ಪಿಎಲ್​ ಲಿಮಿಟೆಡ್​ ಮತ್ತು ಅದರ ನಿರ್ದೇಶಕರ ವಿರುದ್ಧ ಸಿಬಿಐ 2013ರಲ್ಲಿ ದಾಖಲಿಸಿದ್ದ ಕ್ರಿಮಿನಲ್​ ಮೊಕದ್ದಮೆಗಳನ್ನು ಹೈಕೋರ್ಟ್​ ರದ್ದುಗೊಳಿಸಿದೆ. ಕ್ರಿಮಿನಲ್​ ಚಟುವಟಿಕೆ ನಡೆದಿದೆ ಎಂಬುದಕ್ಕೆ ಸಿಬಿಐ ಯಾವುದೇ ಸಾಕ್ಷ್ಯ ಒದಗಿಸಿಲ್ಲ ಎಂದು ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಹೈಕೋರ್ಟ್​ ನೀಡಿದ್ದ ತೀರ್ಪನ್ನು 2024ರ ಡಿಸೆಂಬರ್​ನಲ್ಲಿ ಬದಿಗಿರಿಸಿದ್ದ ಸುಪ್ರೀಂಕೋರ್ಟ್​ ಮೆರಿಟ್​ ಆಧಾರದ ಮೇಲೆ ಮರುವಿಚಾರಣೆ ನಡೆಸುವಂತೆ ಪ್ರಕರಣವನ್ನು ಧಾರವಾಡ ಹೈಕೋರ್ಟ್​ ಪೀಠಕ್ಕೆ ವರ್ಗಾವಣೆಗೊಳಿಸಿತ್ತು. ಹೀಗಾಗಿ 2013ರಲ್ಲಿ ಸಿಬಿಐ ದಾಖಲಿಸಿದ್ದ ಎಫ್​ಐಆರ್​​ ಮತ್ತು ಚಾರ್ಜ್​ಶೀಟ್​ ಪ್ರಶ್ನಿಸಿ ಎಂಎಸ್​ಪಿಎಲ್​ ಲಿಮಿಟೆಡ್​ ಮತ್ತು ಅದರ ನಿರ್ದೇಶಕರು ಸಲ್ಲಿಸಿದ್ದ ಅರ್ಜಿಗಳನ್ನು ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಅರ್ಜಿಗಳನ್ನು ಪುರಸ್ಕರಿಸಿದೆ.
ಅಕ್ರಮ ಅದಿರು ಸಾಗಾಟದಲ್ಲಿ ಕ್ರಿಮಿನಲ್​ ಪಿತೂರಿ ನಡೆದಿದೆ ಎಂಬುದಕ್ಕೆ ನೇರ ಅಥವಾ ಸಾಂದರ್ಭಿಕ ಸಾಕ್ಷ್ಯಗಳನ್ನು ಕಂಪನಿ ಹಾಗೂ ನಿರ್ದೇಶಕರ ವಿರುದ್ಧ ಸಿಬಿಐ ಹಾಜರು ಪಡಿಸಿಲ್ಲ. ಯಾವುದೇ ರ್ನಿದಿಷ್ಟ ಆರೋಪ ಸಾಬೀತುಪಡಿಸದೆ ನಿರ್ದೇಶಕರನ್ನು ಕ್ರಿಮಿನಲ್​ ಹೊಣೆಗಾರರನ್ನಾಗಿಸಲು ಸಾಧ್ಯವಿಲ್ಲ. ಹೀಗಾಗಿ ಅವರ ವಿರುದ್ಧ ಕಾನೂನು ಪ್ರಕ್ರಿಯೆ ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಏನಿದು ಬೇಲೇಕೇರಿ ಪ್ರಕರಣ? 

ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿನ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಮಾಜ ಪರಿವರ್ತನಾ ಸಮುದಾಯ ಮತ್ತು ಇತರರು 2009ರಲ್ಲಿ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ತನಿಖೆಗಾಗಿ ಸಮಿತಿಯೊಂದನ್ನು ರಚಿಸಿತ್ತು. 2009ರ ಜನವರಿಯಿಂದ 2010ರ ಮೇ 31ರವರೆಗೆ ಬೆಲೆಕೇರಿ ಬಂದರಿನ ಮೂಲಕ ರಫ್ತು ಮಾಡಿದ್ದ 32.27 ಲಕ್ಷ ಟನ್​ ಕಬ್ಬಿಣದ ಅದಿರಿನ ಬಗ್ಗೆ ಪ್ರಾಥಮಿಕ ತನಿಖೆ ನಡೆಸಲು ಸಿಬಿಐಗೆ ಸುಪ್ರೀಂಕೋರ್ಟ್​ ನಿರ್ದೇಶನ ನೀಡಿತ್ತು. ಇದರ ಆಧಾರದಲ್ಲಿ ಸಿಬಿಐ, ಎಂಎಸ್​ಪಿಎಲ್​ ಲಿ. ಮತ್ತು ಅದರ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿತು. 9 ವರ್ಷಗಳ ತನಿಖೆಯ ನಂತರ 2022ರ ಫೆ.1ರಂದು ಚಾರ್ಜ್​ಶೀಟ್​ ಸಲ್ಲಿಸಲಾಗಿತ್ತು. ಎಂಎಸ್​ಪಿಎಲ್​ ಮತ್ತು ಅದರ ನಿರ್ದೇಶಕರಾದ ನರೇಂದ್ರ ಕುಮಾರ್​ ಎನ್​. ಬಲ್ಡೋಟಾ ಮತ್ತು ರಾಹುಲ್​ ಕುಮಾರ್​ ಎನ್​. ಬಲ್ಡೋಟಾ ಅವರು ಗಣಿ ಇಲಾಖೆಯ ಪರವಾನಗಿ ಇಲ್ಲದೆ ಅದಿರು ಖರೀದಿಸಲು ಪಿತೂರಿ ನಡೆಸಿದ್ದಾರೆ ಎಂದು ಚಾರ್ಜ್​ಶೀಟ್​ನಲ್ಲಿ ಆರೋಪಿಸಲಾಗಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್​, ಅರ್ಜಿದಾರರ ವಿರುದ್ಧ 39 ಸಾವಿರ ಮೆಟ್ರಿಕ್​ ಟನ್​ ಅಕ್ರಮ ಅದಿರು ಸಾಗಾಟ ಆರೋಪವಿದೆ ಮತ್ತು ಅದು ರಾಜ್ಯ ತನಿಖಾ ವ್ಯಾಪ್ತಿಗೆ ಬರುತ್ತದೆ ಎಂದು ಅಭಿಪ್ರಾಯಪಟ್ಟು, ಸಿಬಿಐ ದಾಖಲಿಸಿದ್ದ ಪ್ರಕರಣವನ್ನು 2024ರಲ್ಲಿ ವಜಾಗೊಳಿಸಿತ್ತು. ಇದನ್ನು ಸಿಬಿಐ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿತ್ತು. ಕಂಪನಿಯ ವಿರುದ್ಧ 1.95 ಲಕ್ಷ ಮೆಟ್ರಿಕ್​ ಟನ್​ಗಿಂತಲೂ ಹೆಚ್ಚಿನ ಅದಿರು ಸಾಗಾಣಿಕೆಯ ಆರೋಪವಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿತ್ತು. ಇದನ್ನು ಪರಿಗಣಿಸಿದ ಸುಪ್ರೀಂಕೋರ್ಟ್​, ಹೈಕೋರ್ಟ್​ನ ಆದೇಶವನ್ನು ಬದಿಗಿರಿಸಿ ಮೆರಿಟ್​ ಆಧಾರದಲ್ಲಿ ವಿಚಾರಣೆ ನಡೆಸುವಂತೆ ಹೈಕೋರ್ಟ್​ಗೆ ನಿರ್ದೇಶನ ನೀಡಿತ್ತು. 

50 ಸಾವಿರ ಮೆ.ಟನ್​ಗಿಂತ ಹೆಚ್ಚಿದ್ದರೆ ಕ್ರಿಮಿನಲ್​ ಕೇಸ್

​ಪ್ರಾಥಮಿಕ ವಿಚಾರಣೆಗೆ ಒಳಪಟ್ಟಿದ್ದ ಮತ್ತು ಅಧಿಕೃತ ಪರವಾನಗಿ ಇಲ್ಲದೆ 50 ಸಾವಿರ ಮೆಟ್ರಿಕ್​ ಟನ್​ಗಿಂತ ಹೆಚ್ಚಿನ ಕಬ್ಬಿಣದ ಅದಿರನ್ನು ರಫ್ತು ಮಾಡಿದ ರಫ್ತುದಾರರ ವಿರುದ್ಧ ಮಾತ್ರ ಕ್ರಿಮಿನಲ್​ ಪ್ರಕರಣ ದಾಖಲಿಸಲು ಸಿಬಿಐಗೆ 2013ರಲ್ಲಿ ನ್ಯಾಯಾಲಯ ಅನುಮತಿ ನೀಡಿತ್ತು. 50 ಸಾವಿರ ಮೆಟ್ರಿಕ್​ ಟನ್​ಗಿಂತ ಕಡಿಮೆ ಇರುವ ಪ್ರಕರಣಗಳ ತನಿಖೆಯನ್ನು ರಾಜ್ಯಮಟ್ಟದಲ್ಲಿ ನಡೆಸಬೇಕು ಎಂದು ಸುಪ್ರೀಂ ಕೋರ್ಟ್​ ಹೇಳಿತ್ತು.

ಹೈಕೋರ್ಟ್​ ಆದೇಶವೇನು?
  • ಐಪಿಸಿ ಸೆಕ್ಷನ್ 120 (ಬಿ) ಕ್ರಿಮಿನಲ್​ ಪಿತೂರಿ ಆರೋಪದಡಿ ಸಿಬಿಐ ಎಫ್​ಐಆರ್​ ದಾಖಲಿಸಿದೆ. 
  • ಕ್ರಿಮಿನಲ್​ ಅಪರಾಧ ನಡೆದಿದೆ ಎಂಬುದಕ್ಕೆ ನೇರ ಅಥವಾ ಸಾಂದರ್ಭಿಕ ಸಾಕ್ಷ್ಯಾಧಾರ ಇರಬೇಕು. 
  • ಎರಡೂ ಸಾಕ್ಷ್ಯ ಇಲ್ಲದಿದ್ದಾಗ ವಿಚಾರಣೆ ಮುಂದುವರಿಸಲು ಅನುಮತಿ ನೀಡಬಾರದು ಎಂದಿದೆ  
  • ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ವಿಚಾರಣೆಗೆ ಅನುಮತಿ ಕೊಟ್ಟರೆ ಕಾನೂನು ಪ್ರಕ್ರಿಯೆಯ ದುರ್ಬಳಕೆ ಆಗುತ್ತದೆ. 
  • ಸೆಕ್ಷನ್​ 420 ಅನ್ವಯ ಚಾರ್ಜ್​ಶೀಟ್​ ಸಲ್ಲಿಸಿದಾಗ ಸೂಕ್ತವಾದ ಸಾಕ್ಷ್ಯಾಧಾರಗಳು ಇರಲೇಬೇಕು 
  • ತಪ್ಪಿತಸ್ಥರು ಎಂದು ಹೇಳಲಾದ ಹೇಳಿಕೆಗಳನ್ನು ಆಧರಿಸಿ ಮುಂದುವರಿಯಬಾರದು

ಪರವಾನಿಗೆ ಹೊಣೆ ಖರೀದಿದಾರನಿಗಿಲ್ಲ: 

ರಾಜಧನ ಮತ್ತು ಅರಣ್ಯ ಅಭಿವೃದ್ಧಿ ತೆರಿಗೆ ಪಾವತಿಸದೆ ಸರ್ಕಾರಕ್ಕೆ ನಷ್ಟ ಉಂಟು ಮಾಡಲಾಗಿದೆ. ಪರವಾನಿಗೆ ಇಲ್ಲದೆ ಅದಿರು ಗಣಿಗಾರಿಕೆ ಮಾಡಲಾಗಿದೆ ಎಂದು ಸಿಬಿಐ ವಾದಿಸಿತ್ತು. ಇದನ್ನು ವಿರೋಧಿಸಿದ ಎಂಎಸ್​ಪಿಎಲ್​, ಗಣಿಗಾರಿಕೆಗೆ ಪರವಾನಿಗೆಗಳನ್ನು ಪಡೆಯುವ ಜವಾಬ್ದಾರಿ ಖರೀದಿದಾರರದಲ್ಲ. ನಮ್ಮ ಖರೀದಿ ಒಪ್ಪಂದಗಳಲ್ಲಿ ಅದಿರು ಪೂರೈಕೆದಾರರು ಅಧಿಕೃತ ಪರವಾನಿಗೆಗಳನ್ನು ಪಡೆದಿರಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.

ಕ್ರಿಮಿನಲ್​ ಕೇಸ್​ ರದ್ದು 

ಅರ್ಜಿದಾರರ ವಾದಗಳನ್ನು ಪರಿಗಣಿಸಿದ ನ್ಯಾಯಾಲಯ, ಸಿಬಿಐ ತನ್ನ ವಾದಗಳಿಗೆ ಪುರಾವೆಗಳನ್ನು ಒದಗಿಸಿಲ್ಲ. ಅಕ್ರಮ ನಡೆಸಲು ಪಿತೂರಿ ನಡೆಸಿದ್ದಾರೆ ಎಂದು ಸಾಬೀತಾಗದ ಹೊರತು ಅದಿರು ಪೂರೈಕೆದಾರರ ತಪ್ಪಿಗೆ ಖರೀದಿದಾರರನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟು, ಸಿಬಿಐ ದಾಖಲಿಸಿದ್ದ ಕ್ರಿಮಿನಲ್​ ಪ್ರಕರಣವನ್ನು ವಜಾಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net