ಶಸ್ತ್ರಾಸ್ತ್ರ ಪರವಾನಗಿ ನವೀಕರಣಕ್ಕೆ ಕೃಷಿ ಜಮೀನು ಅಗತ್ಯವಿಲ್ಲ| High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ರಿನೀವಲ್​ ನಿರಾಕರಿಸಿದ್ದ ಮಂಗಳೂರು ಪೊಲೀಸ್​ ಆಯುಕ್ತರ ಆದೇಶ ರದ್ದು
  • ಅರ್ಜಿ ಮರುಪರಿಶೀಲನೆಗೆ ಹೈಕೋರ್ಟ್​ ನಿರ್ದೇಶನ
ಬೆಂಗಳೂರು: ಕೃಷಿ ಜಮೀನು ಹೊಂದಿಲ್ಲ ಎಂಬ ಏಕೈಕ ಕಾರಣಕ್ಕಾಗಿ ಬಂದೂಕು ಪರವಾನಿಗೆ ನವೀಕರಿಸಲು ನಿರಾಕರಿಸುವುದು ಕಾನೂನುಬಾಹಿರವಾಗಿದೆ. 1959ರ ಶಸ್ತ್ರಾಸ್ತ್ರ ಕಾಯ್ದೆಯ ಪ್ರಕಾರ ಪರವಾನಗಿ ನವೀಕರಣಕ್ಕೆ ಆಸ್ತಿಯ ಮಾಲೀಕತ್ವ ಕಡ್ಡಾಯವಲ್ಲ ಎಂದು ಹೈಕೋರ್ಟ್​ ಸ್ಪಷ್ಟಪಡಿಸಿದೆ.
ಮಂಗಳೂರಿನ ಗ್ರೆಗೊರಿ ಎಫ್​. ಪೆರಿಸ್​ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್​ ಶಂಕರ್​ ಮಗದುಮ್​ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ.
ಅರ್ಜಿದಾರರು ಕಳೆದ ಮೂರು ದಶಕಗಳಿಂದ 12 ಬೋರ್​ ಎಸ್​ಬಿಬಿಎಲ್​ ಶಸ್ತ್ರಾಸ್ತ್ರದ ಪರವಾನಗಿ ಹೊಂದಿದ್ದರು. ಆದರೆ, 2023ರ ಮಾ. 29ರಂದು ಮಂಗಳೂರು ಪೊಲೀಸ್​ ಆಯುಕ್ತರು, ಅರ್ಜಿದಾರರ ಬಳಿ ಕೃಷಿ ಜಮೀನು ಇಲ್ಲ ಎಂಬ ಕಾರಣ ನೀಡಿ ಪರವಾನಗಿ ನವೀಕರಿಸಲು ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್​ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ಏಕಸದಸ್ಯ ನ್ಯಾಯಪೀಠ, ಶಸ್ತ್ರಾಸ್ತ್ರ ಕಾಯ್ದೆಯ ಕಲಂ 14(2) ಮತ್ತು 15ರ ಅನ್ವಯ, ಯಾವುದೇ ವ್ಯಕ್ತಿಯು ಸಾಕಷ್ಟು ಆಸ್ತಿಯನ್ನು ಹೊಂದಿಲ್ಲ ಎಂಬ ಕಾರಣಕ್ಕೆ ಪರವಾನಗಿ ನಿರಾಕರಿಸುವಂತಿಲ್ಲ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ. ಕಾಯ್ದೆಯಲ್ಲಿ ಇಲ್ಲದ ಹೊಸ ಷರತ್ತುಗಳನ್ನು ಅಧಿಕಾರಿಗಳು ಹೇರುವಂತಿಲ್ಲ ಮತ್ತು ಪರವಾನಗಿ ನವೀಕರಣದ ಸಂದರ್ಭದಲ್ಲೂ ಈ ನಿಯಮಗಳು ಅನ್ವಯವಾಗುತ್ತದೆ ಎಂದು ಹೇಳಿದೆ.

ಮರುಪರಿಶೀಲನೆಗೆ ಸೂಚನೆ:

ಅರ್ಜಿದಾರರು ಸುಮಾರು 30 ವರ್ಷಗಳ ಸುದೀರ್ ಅವಧಿಗೆ ಪರವಾನಗಿ ಹೊಂದಿದ್ದು, ಈ ಅವಧಿಯಲ್ಲಿ ಶಸ್ತ್ರಾಸ್ತ್ರದ ದುರ್ಬಳಕೆ ಅಥವಾ ಯಾವುದೇ ಬೆದರಿಕೆಯ ಪ್ರಕರಣಗಳು ಕಂಡುಬಂದಿಲ್ಲ. ಹೀಗಿದ್ದರೂ ಅರ್ಜಿದಾರರ ಬಳಿ ಕೃಷಿ ಜಮೀನು ಇಲ್ಲ ಎಂಬ ಕಾರಣಕ್ಕೆ ಪರವಾನಗಿ ನವೀಕರಣಕ್ಕೆ ನಿರಾಕರಿಸಿರುವುದು ಸರಿಯಲ್ಲ ಎಂದು ನ್ಯಾಯಪೀಠ ಹೇಳಿದೆ. ಪೊಲೀಸ್​ ಆಯುಕ್ತರ ಆದೇಶವನ್ನು ರದ್ದುಪಡಿಸಲಾಗಿದ್ದು, ಕೃಷಿ ಜಮೀನಿನ ದಾಖಲೆಗಳಿಗೆ ಒತ್ತಾಯಿಸದೆ ಪರವಾನಗಿ ನವೀಕರಣ ಅಜೀ ಮರುಪರಿಶೀಲಿಸುವಂತೆ ನಿರ್ದೇಶನ ನೀಡಿದೆ. #high court
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net