ನೈಜೀರಿಯಾ ಪ್ರಜೆಗೆ ಜಾಮೀನು ನಿರಾಕರಣೆ| High court

High court
High court
Published on

ಪ್ರಮುಖ ಮುಖ್ಯಾಂಶಗಳು

  • 1 ಕೆಜಿ ಎಂಡಿಎಂಎ ವಶಪಡಿಸಿಕೊಂಡಿರುವ ಸಿಸಿಬಿ
  • ಡ್ರಗ್ಸ್​ ದಂಧೆಕೋರರಿಂದ ಸಮಾಜಕ್ಕೆ ಹಾನಿ ಎಂದು ನ್ಯಾಯಲಯ ಕಳವಳ
ಬೆಂಗಳೂರು:  ನಿಷೇಧಿತ ಎಂಡಿಎಂಎ ಮಾದಕ ವಸ್ತು ಸಾಗಾಟ ಆರೋಪದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ನೈಜೀರಿಯನ್​ ಪ್ರಜೆಗೆ ಜಾಮೀನು ನೀಡಲು ಹೈಕೋರ್ಟ್​ ನಿರಾಕರಿಸಿದೆ. ಪ್ರಕರಣದ ತಾಂತ್ರಿಕ ಲೋಪಗಳನ್ನು ಮುಂದಿಟ್ಟುಕೊಂಡು ಹಿಂಬಾಗಿಲಿನಿಂದ ಜಾಮೀನು ಪಡೆಯಲು ಆರೋಪಿಗಳಿಗೆ ಅವಕಾಶ ನೀಡಲಾಗದು ಎಂದು ನ್ಯಾಯಾಲಯ ಹೇಳಿದೆ.
ಆರೋಪಿ ಕ್ರಿಶ್ಚಿಯನ್​ ಸೋಪೋರುಚುಕ್ವು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಮಾದಕ ವಸ್ತುಗಳ ಸಾಗಣೆ ಮತ್ತು ಮಾರಾಟದಂತಹ ಸಮಾಜ ವಿರೋಧಿ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ನಿಲುವು ಅಗತ್ಯ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಬಂಧನದ ಸಮಯದಲ್ಲಿ ಸುಪ್ರೀಂಕೋರ್ಟ್​ ಮಾರ್ಗಸೂಚಿಗಳನ್ನು ಪಾಲಿಸಿಲ್ಲ. ಬಂಧನದ ಕಾರಣಗಳನ್ನು ಲಿಖಿತ ರೂಪದಲ್ಲಿ ನೀಡಿಲ್ಲ. ಆದ್ದರಿಂದ ಬಂಧನವನ್ನೇ ಕಾನೂನುಬಾಹಿರ ಎಂದು ಘೋಷಿಸಲು ಆರೋಪಿ ಮನವಿ ಮಾಡಿಕೊಂಡಿದ್ದನು. ಈ ವಾದವನ್ನು ತಿರಸ್ಕರಿಸಿರುವ ನ್ಯಾಯಪೀಠ, ಆರೋಪಿಗೆ ಆತ ಅರ್ಥಮಾಡಿಕೊಳ್ಳುವ ಇಂಗ್ಲಿಷ ಭಾಷೆಯಲ್ಲೇ ಬಂಧನದ ಕಾರಣಗಳಿರುವ ಪತ್ರವನ್ನು ನೀಡಲಾಗಿತ್ತು ಮತ್ತು ಅದಕ್ಕೆ ಆತ ಸಹಿ ಕೂಡ ಮಾಡಿದ್ದಾನೆ. ಅಲ್ಲದೆ, ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಪೊಲೀಸರು ತನಗೆ ಯಾವುದೇ ಹಿಂಸೆ ನೀಡಿಲ್ಲ ಮತ್ತು ತನ್ನ ಬಂಧನದ ಮಾಹಿತಿಯನ್ನು ಸ್ನೇಹಿತನಿಗೆ ತಲುಪಿಸಿದ್ದಾರೆ ಎಂದು ಆರೋಪಿಯೇ ಒಪ್ಪಿಕೊಂಡಿದ್ದಾನೆ ಎಂಬ ದಾಖಲೆಗಳನ್ನು ಪರಿಗಣಿಸಿದೆ. 

ಬೇಗೂರು ಕೆರೆ ಬಳಿ ಕಾರ್ಯಾಚರಣೆ:

ಬೆಂಗಳೂರಿನ ಬೇಗೂರು ಕೆರೆಯ ಏರಿಯ ರಸ್ತೆಯ ಬಳಿ ಆಫ್ರಿಕನ್​ ಪ್ರಜೆಯೊಬ್ಬ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಐಟಿ- ಉದ್ಯೋಗಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿಯ ಆಂಟಿ ನಾಕೋರ್ಟಿಕ್​ ವಿಭಾಗದ ಪೊಲೀಸರು. 2025ರ ಏ.5ರ ರಾತ್ರಿ ದಾಳಿ ನಡೆಸಿತ್ತು. ಪೊಲೀಸರನ್ನು ನೋಡಿ ಓಡಲು ಯತ್ನಿಸಿದ ಆರೋಪಿಯನ್ನು ಬೆನ್ನಟ್ಟಿ ಹಿಡಿದಾಗ ಆತನ ದ್ವಿಚಕ್ರ ವಾಹನದ ಡಿಕ್ಕಿಯಲ್ಲಿ 1 ಕೆಜಿ ಎಂಡಿಎಂಎ ಕ್ರಿಸ್ಟಲ್​ ಪತ್ತೆಯಾಗಿತ್ತು. ಇದರ ಮಾರುಕಟ್ಟೆ ಮೌಲ್ಯ ಪ್ರತಿ ಗ್ರಾಂಗೆ 15ರಿಂದ 20 ಸಾವಿರ ರೂಪಾಯಿಗಳಾಗಿದ್ದು, ಮಾದಕ ವಸ್ತುವಿನೊಂದಿಗೆ ತೂಕದ ಯಂತ್ರ ಮತ್ತು ಮೊಬೈಲ್​ ಫೋನ್​ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ವೀಸಾ ಇಲ್ಲದೆ ಅಕ್ರಮ ವಾಸ 

ಆರೋಪಿಯು ಸುಮಾರು ಎಂಟು ವರ್ಷಗಳ ಹಿಂದೆಯೇ ವಾಣಿಜ್ಯ ವೀಸಾ ಅಡಿಯಲ್ಲಿ ಭಾರತಕ್ಕೆ ಬಂದಿದ್ದ. ಆದರೆ, ಆತನ ವೀಸಾ ಅವಧಿ ಮುಕ್ತಾಯವಾಗಿದ್ದರೂ, ಯಾವುದೇ ಮಾನ್ಯತೆ ಇರುವ ದಾಖಲೆಗಳಿಲ್ಲದೆ ದೇಶದಲ್ಲಿ ಕಾನೂನುಬಾಹಿರವಾಗಿ ನೆಲೆಸಿದ್ದಾನೆ. ಎನ್​ಡಿಪಿಎಸ್​ ಕಾಯ್ದೆಯ ಕಠಿಣ ನಿಯಮಗಳಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಜಾಮೀನು ನೀಡಲಾಗದು. ಅಲ್ಲದೆ, ಆರೋಪಿಗೆ ಅಂತರಾಜ್ಯ ಸಂಪರ್ಕವಿದ್ದು, ಸಮಾಜದ ಸ್ವಾಸ್ಥ್ಯಕ್ಕೆ ಹಾನಿ ಎಸಗುತ್ತಿದ್ದಾನೆ. ಬಂಧನದ ಪ್ರಕ್ರಿಯೆಯಲ್ಲೂ ಲೋಪವಾಗಿಲ್ಲ. ಆದ್ದರಿಂದ ಜಾಮೀನು ನೀಡಬಾರದು ಎಂದು ಪ್ರಾಸಿಕ್ಯೂಷನ್​ ವಾದಿಸಿತ್ತು.

ಯುವಜನರಿಗೆ ಮಾರಣಾಂತಿಕ ಹಾನಿ:

ಸುಪ್ರೀಂಕೋರ್ಟ್​ನ ಹಿಂದಿನ ತೀರ್ಪನ್ನು ಉಲ್ಲೇಖಿಸಿರುವ ನ್ಯಾಯಪೀಠ, ಕೊಲೆಗಾರನು ಒಬ್ಬ ವ್ಯಕ್ತಿ ಅಥವಾ ಇಬ್ಬರನ್ನು ಕೊಲ್ಲುತ್ತಾನೆ. ಆದರೆ, ಮಾದಕ ವಸ್ತುಗಳ ದಂಧೆಕೋರರು ದೇಶದ ಯುವಜನರ ಮೇಲೆ ಮಾರಣಾಂತಿಕ ಹಾನಿ ಎಸಗುವ ಮೂಲಕ ಇಡೀ ಸಮಾಜದ ನಾಶಕ್ಕೆ ಕಾರಣರಾಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದೆ. high court
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net