ಡ್ರಗ್ಸ್​ ಜಾಲದ ಆರೋಪಿಗೆ ನಿರೀಕ್ಷಣಾ ಜಾಮೀನು ನಿರಾಕರಣೆ| High court

High court
High court
Published on
ಬೆಂಗಳೂರು: ಥೈಲ್ಯಾಂಡ್​ನಿಂದ ಬೆಂಗಳೂರಿಗೆ ಹೈಡ್ರೋಪೋನಿಕ್​ ಗಾಂಜಾ ಸಾಗಿಸುತ್ತಿದ್ದ ಅಂತಾರಾಷ್ಟ್ರೀಯ ಡ್ರಗ್ಸ್​ ಜಾಲದೊಂದಿಗೆ ಸಂಬಂಧ ಹೊಂದಿರುವ ಆರೋಪ ಎದುರಿಸುತ್ತಿರುವ ಕಾಸರಗೋಡಿನ ಚಾಲಕನೊಬ್ಬನಿಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್​ ನಿರಾಕರಿಸಿದೆ.
ಮಹಮ್ಮದ್​ ಜಿದಾನ್​ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಸ್​. ವಿಶ್ವಜಿತ್​ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ. ತಾನೊಬ್ಬ ಸಾಮಾನ್ಯ ಚಾಲಕ ಎಂದು ವಾದಿಸಿದ್ದ ಆರೋಪಿಯ ಬ್ಯಾಂಕ್​ ಖಾತೆಯಲ್ಲಿ ಲಾಂತರ ರೂಪಾಯಿಗಳ ಶಂಕಾಸ್ಪದ ವಹಿವಾಟು ಮತ್ತು ಪದೇ ಪದೇ ವಿದೇಶಿ ಪ್ರವಾಸ ಮಾಡಿರುವುದು ಪತ್ತೆಯಾಗಿದ್ದು, ಬಂಧಿಸಿ ವಿಚಾರಣೆ ನಡೆಸುವುದು ಅಗತ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
2025ರ ಫೆ.6ರಂದು ಬ್ಯಾಂಕಾಕ್​ನಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೈಕಲ್​ ಅಲ್ಫೋನ್ಸ್​ ಎಂಬಾತನ ಬಳಿಯಿದ್ದ 1.5 ಕೆ.ಜಿ. ಹೈಡ್ರೋಪೋನಿಕ್​ ಗಾಂಜಾವನ್ನು ನಾಕೋರ್ಟಿಕ್ಸ್​ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ) ಅಧಿಕಾರಿಗಳು ವಶಪಡಸಿಕೊಂಡು, ಆತನನನ್ನು ಬಂದಿಸಿದ್ದರು. ಅವನ ಹೇಳಿಕೆ ಆಧಾರಿಸಿ ಕೋಲ್ಕತ ವಿಮಾನ ನಿಲ್ದಾಣದಲ್ಲಿ ಅತುಲ್​ ಮೋಹನ ಎಂಬಾತನನ್ನು ಬಂಧಿಸಿ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಇವರಿಬ್ಬರ ವಿಚಾರಣೆ ವೇಳೆ ಈ ಡ್ರಗ್ಸ್​ ದಂಧೆಯ ಹಿಂದೆ ರಾಹುಲ್​, ಜ್ನಾಸ್​ ಮತ್ತು ಮಹಮ್ಮದ್​ ಜಿದಾನ್​ ಎಂಬುವವರು ಇರುವ ವಿಚಾರ ಬೆಳಕಿಗೆ ಬಂದಿತ್ತು. 

ತಲೆ ಮರೆಸಿಕೊಂಡಿರುವ ಆರೋಪಿ:

ಈ ಪ್ರಕರಣದಲ್ಲಿ ಉಳಿದ ಆರೋಪಿಗಳು ವಿಚಾರಣೆಗೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದರೆ, ಮಹಮ್ಮದ್​ ಜಿದಾನ್​ ಮಾತ್ರ ಕಳೆದೊಂದು ವರ್ಷದಿಂದ ತಲೆಮರೆಸಿಕೊಂಡಿದ್ದಾನೆ. ಆರೋಪಿಯು ಕಳೆದ ಐದು ವರ್ಷಗಳಲ್ಲಿ 7 ಬಾರಿ ವಿದೇಶ ಪ್ರವಾಸ ಮಾಡಿದ್ದು, ಅದರಲ್ಲಿ ಥೈಲ್ಯಾಂಡ್​ಗೆ 4 ಬಾರಿ ಭೇಟಿ ನೀಡಿದ್ದಾನೆ. ಆತನ ಖಾತೆಯಲ್ಲಿ ಲಾಂತರ ರೂಪಾಯಿಗಳ ಅನುಮಾನಾಸ್ಪದ ವಹಿವಾಟು ನಡೆದಿದೆ ಎಂದು ಎನ್​ಸಿಬಿ ವಾದಿಸಿತ್ತು. ಇದನ್ನು ಪರಿಗಣಿಸಿರುವ ಹೈಕೋರ್ಟ್​ ಅರ್ಜಿ ವಜಾಗೊಳಿಸಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net