ಜಾತಿ ದೌರ್ಜನ್ಯ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡಲಾಗದು| High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಿಗೆ ಬೇಲ್​ ನಿರಾಕರಣೆ
  • ಸಿಟಿಟಿವಿ ದಾಖಲೆ ಪರಿಗಣಿಸಿದ ಹೈಕೋರ್ಟ್​
ಬೆಂಗಳೂರು: ಜಾತಿ ನಿಂದನೆ ಮಾಡಿ ಯುವತಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿದ ಪ್ರಕರಣದ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿರುವ ಹೈಕೋರ್ಟ್​, ಪ್ರಬಲ ಸಾಕ್ಷ್ಯಗಳು ಇರುವಾಗ ಎಸ್​ಸಿ-ಎಸ್​ಟಿ ದೌರ್ಜನ್ಯ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ನಿರೀಕ್ಷಣಾ ಜಾಮೀನು ತಿರಸ್ಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ದೇವನಹಳ್ಳಿ ನಿವಾಸಿ ಅರುಣ್​ ಅಲಿಯಾಸ್​ ಚಾಮಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಂ.ಜಿ.ಎಸ್​. ಕಮಲ್​ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ.
ಅರ್ಜಿದಾರರ ಪರ ವಾದಿಸಿದ ವಕೀಲರು, ಆರೋಪಿಗೂ ಮತ್ತು ಯುವತಿಗೆ ಪರಿಚಯವೇ ಇರಲಿಲ್ಲ ಎಂದು ವಾದಿದ್ದರು. ಆದರೆ, ಪ್ರಾಸಿಕ್ಯೂಷನ್​ ಒದಗಿಸಿದ ಸಿಸಿಟಿವಿ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ,  ಆರೋಪಿಯು ಯುವತಿಗೆ ಹಲ್ಲೆ ಮಾಡಿರುವುದು ಸ್ಪಷ್ಟವಾಗಿದೆ. ಹಲ್ಲೆ ನಡೆದ ಮರುದಿನವೇ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಟನೆಗಳ ನಡುವಿನ ನಂಟು ಸ್ಪಷ್ಟವಾಗಿದೆ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ. ಈ ವೇಳೆ ಆರೋಪಿಯ ಅಪರಾಧ ಹಿನ್ನೆಲೆಯನ್ನೂ ನ್ಯಾಯಪೀಠ ಪರಿಗಣಿಸಿದೆ. 

ಪ್ರಕರಣದ ಹಿನ್ನೆಲೆ: 

ದೇವನಹಳ್ಳಿ ನಿವಾಸಿ 19 ವರ್ಷದ ಯುವತಿ ವರ್ಷಿಣಿ, 2025ರ ಡಿ. 11ರಂದು ಸಂಜೆ ಅಂಗಡಿಯಿಂದ ಮನೆಗೆ ವಾಪಸ್​ ಆಗುತ್ತಿದ್ದಾಗ ಆರೋಪಿ ಅರುಣ್​ ಬೈಕ್​ನಲ್ಲಿ ಬಂದು ಅಡ್ಡಗಟ್ಟಿದ್ದ. ತನ್ನನ್ನು ಪ್ರೀತಿಸುವಂತೆ, ಫೋನ್​ ಕರೆ ಹಾಗೂ ಸಂದೇಶಗಳಿಗೆ ಉತ್ತರಿಸುವಂತೆ ಪೀಡಿಸಿ, ಆಕೆಗೆ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿ ಜೀವಬೆದರಿಕೆ ಹಾಕಿದ್ದ. ಸಾರ್ವಜನಿಕವಾಗಿ ನಡೆದ ಈ ಹಲ್ಲೆ ಹಾಗೂ ತೀವ್ರ ಅಪಮಾನದಿಂದ ಮನನೊಂದ ವರ್ಷಿಣಿ, ಮರುದಿನವೇ (ಡಿ.12) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ನೆರೆಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಯ ಕೃತ್ಯ ಬೆಳಕಿಗೆ ಬಂದಿದ್ದು, ಯುವತಿಯ ತಂದೆ ನೀಡಿದ ದೂರಿನನ್ವಯ ದೇವನಹಳ್ಳಿ ಪೊಲೀಸರು ಆತ್ಮಹತ್ಯೆಗೆ ಪ್ರೇರಣೆ ಹಾಗೂ ಎಸ್​ಸಿ&ಎಸ್​ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net