ಗಿರಿಜನ ಕಲ್ಯಾಣದ ₹59 ಲಕ್ಷ ಗುಳುಂ ಶಂಕೆ

High court
High court
Published on

ಪ್ರಮುಖ ಮುಖ್ಯಾಂಶಗಳು

  • ತನಿಖೆಗೆ ಅನುಮತಿ ನಿರಾಕರಿಸಿದ್ದ ಸರ್ಕಾರದ ಆದೇಶ ರದ್ದು
  • ಲೋಕಾ ಅರ್ಜಿ ಪುರಸ್ಕರಿಸಿದ ಹೈಕೋರ್ಟ್​
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಸಂಯೋಜಿತ ಗಿರಿಜನ ಕಲ್ಯಾಣ ಯೋಜನೆಯಡಿ ಮೀಸಲಿಟ್ಟಿದ್ದ ಅನುದಾನದಲ್ಲಿ ಸುಮಾರು 59 ಲಕ್ಷ ರೂ. ದುರುಪಯೋಗಪಡಿಸಿಕೊಂಡ ಆರೋಪ ಎದುರಿಸುತ್ತಿರುವ ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಲು ಲೋಕಾಯುಕ್ತಕ್ಕೆ ಅನುಮತಿ ನಿರಾಕರಿಸಿದ್ದ ಸರ್ಕಾರದ ಆದೇಶವನ್ನು ಹೈಕೋರ್ಟ್​ ರದ್ದುಗೊಳಿಸಿದೆ.
ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನಿರ್ದೇಶನಾಲಯದಲ್ಲಿ ಉಪ ನಿರ್ದೇಶಕರಾಗಿದ್ದ ಗಣೇಶಪ್ಪ ಎಂಬುವರ ವಿರುದ್ಧ ಅಭಿಯೋಜನೆಗೆ ಅನುಮತಿ ಕೋರಿ ಲೋಕಾ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಸರ್ಕಾರ 2016ರಲ್ಲಿ ತಿರಸ್ಕರಿಸಿತ್ತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್​. ಕಮಲ್​ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಆದೇಶ ನೀಡಿದೆ.
2007ರಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮೀಸಲು ಅರಣ್ಯ ಪ್ರದೇಶದ ಗಿರಿಜನ ಕಾಲನಿಯಲ್ಲಿರುವ ಕೆರೆಯೊಂದನ್ನು ನವೀಕರಿಸಲು ಸರ್ಕಾರ 1.20 ಕೋಟಿ ರೂ. ಬಿಡುಗಡೆ ಮಾಡಿತ್ತು. ಜಿಪಂ ಇಂಜಿನಿಯರಿಂಗ್​ ವಿಭಾಗದಿಂದ ಈ ಕೆಲಸ ಪೂರ್ಣಗೊಳ್ಳದ ಕಾರಣ, ಕಾಮಗಾರಿಯನ್ನು ಕುಶಾಲನಗರದಲ್ಲಿನ ಕೊಡಗು ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು. 

ರಾಜಕಾರಣಿಗಳ ಶಾಮೀಲು ಶಂಕೆ: 

ಈ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದಲ್ಲಿ ತನಿಖೆ ನಡೆಸಿದ ಲೋಕಾಯುಕ್ತ ಸಂಸ್ಥೆ, ಯೋಜನಾ ಸಮನ್ವಯ ಅಧಿಕಾರಿಯಾಗಿದ್ದ ಗಣೇಶಪ್ಪ ಯಾವುದೇ ಪರಿಶೀಲನೆ ಮತ್ತು ಸೂಕ್ತ ದಾಖಲೆಗಳಿಲ್ಲದೆ ನಿರ್ಮಿತಿ ಕೇಂದ್ರಕ್ಕೆ 59 ಲಕ್ಷ ರೂ. ಮುಂಗಡ ಹಣ ಬಿಡುಗಡೆ ಮಾಡಿದ್ದಾರೆ. ದಾಖಲೆಗಳಲ್ಲಿ 39.50 ಲಕ್ಷ ರೂ. ವೆಚ್ಚವಾಗಿದೆ ಎಂದು ತೋರಿಸಲಾಗಿದ್ದರೂ ವಾಸ್ತವದಲ್ಲಿ ಯಾವುದೇ ಕೆಲಸ ನಡೆದಿರಲಿಲ್ಲ. ಉಳಿದ 19.50 ಲಕ್ಷ ರೂಪಾಯಿಗಳ ಬಗ್ಗೆ ಯಾವುದೇ ದಾಖಲೆಗಳನ್ನು ಇಟ್ಟಿಲ್ಲ. ರಾಜಕಾರಣಿಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಸೇರಿ ಈ ಹಣವನ್ನು ದುರ್ಬಳಕೆ ಮಾಡಲಾಗಿದೆ ಎಂದು ವರದಿ ನೀಡಿತ್ತು. ಅಲ್ಲದೆ, ಅಧಿಕಾರಿ ವಿರುದ್ಧ ಅಭಿಯೋಜನೆಗೆ ಸರ್ಕಾರದ ಅನುಮತಿ ಕೋರಿತ್ತು. ಇದನ್ನು ಸರ್ಕಾರ ತಿರಸ್ಕರಿಸಿತ್ತು. 

ಸಾರ್ವಜನಿಕ ಹಣದ ನಿರ್ಲಕ್ಷ್ಯ ಸಲ್ಲ

ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಲೋಕಾಯುಕ್ತ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ, ಅಧಿಕಾರಿಯ ವಿರುದ್ಧ ತನಿಖೆಗೆ ಅನುಮತಿ ನಿರಾಕರಿಸುವಾಗ ಸರ್ಕಾರವು ವಿವೇಚನೆ ಬಳಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ತನಿಖಾ ಸಂಸ್ಥೆ ಸಲ್ಲಿಸಿರುವ ಸಾಕ್ಷ್ಯಗಳನ್ನು ಸರಿಯಾಗಿ ಪರಿಶೀಲಿಸಿಲ್ಲ. 59 ಲಕ್ಷ ರೂ. ಸಾರ್ವಜನಿಕ ಹಣದ ಬಗ್ಗೆ ನಿರ್ಲಕ್ಷ್ಯ ಮಾಡಿರುವುದು ಸರಿಯಲ್ಲ ಎಂದು ಲೋಕಾಯುಕ್ತ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net