

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:
ಮಾಹಿತಿ ಹಕ್ಕು ಕಾಯ್ದೆಯನ್ನು (ಆರ್ಟಿಐ) ದುರ್ಬಳಕೆ ಮಾಡಿಕೊಂಡು ಆಡಳಿತ ವ್ಯವಸ್ಥೆಗೆ ತೊಡಕುಂಟುಮಾಡುವ ಪ್ರಕ್ರಿಯೆಯನ್ನು ಸಹಿಸಲಾಗದು. ಸಾವಿರಾರು ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿ ವ್ಯವಸ್ಥೆಯ ಕಾರ್ಯನಿರ್ವಹಣೆಗೆ ಸಮಸ್ಯೆ ಉಂಟುಮಾಡುವುದು ಮೇಲ್ನೋಟಕ್ಕೆ ಕಾಯ್ದೆಯ ದುರ್ಬಳಕೆಯಂತೆ ಕಾಣುತ್ತಿದೆ ಎಂದು ಹೈಕೊರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ತಮ್ಮನ್ನು ಕಪ್ಪುಪಟ್ಟಿಗೆ ಸೇರಿಸಿರುವ ರಾಜ್ಯ ಮಾಹಿತಿ ಆಯೋಗದ ಕ್ರಮವನ್ನು ಪ್ರಶ್ನಿಸಿ ಜಿ.ಆರ್. ಸುಧೀಂದ್ರ ಸೇರಿ 9 ಮಂದಿ ಆರ್ಟಿಐ ಕಾರ್ಯಕರ್ತರು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯಪಟ್ಟಿದೆ.
ℹ️
ಅರ್ಜಿಗಳ ಸಂಖ್ಯೆಗೆ ಆಶ್ಚರ್ಯ
ಅರ್ಜಿದಾರರು ಸಲ್ಲಿಸಿರುವ ಅರ್ಜಿಗಳ ಸಂಖ್ಯೆ ಬಗ್ಗೆ ಹೈಕೋರ್ಟ್ ವಿಚಾರಣೆ ವೇಳೆ ಆಶ್ಚರ್ಯ ವ್ಯಕ್ತಪಡಿಸಿದೆ. ಎಂ. ಜಗದೀಶ್ ಎಂಬುವವರು 1,294 ಅರ್ಜಿಗಳು, ಎಂ, ದವಾಲ್ಸಾಬ್ ಎಂಬುವವರು 14,774 ಅರ್ಜಿಗಳು, ಹಾಗೂ ಜಿ.ಆರ್. ಸುಧೀಂದ್ರ ಎಂಬುವವರು 6,482 ಮೇಲ್ಮನವಿಗಳನ್ನು ದಾಖಲಿಸಿರುವುದು ತಿಳಿದುಬಂದಿದೆ. ತನಿಖಾ ವರದಿಗಾಗಿ ಎಂಬ ವಾದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಪೀಠ, ಇಷ್ಟು ಬೃಹತ್ ಸಂಖ್ಯೆಯಲ್ಲಿ ಮಾಹಿತಿ ಕೋರಿ ಲೇಖನಗಳನ್ನು ಪ್ರಕಟಿಸಲು ಸಾಧ್ಯವೇ ಎಂದು ತರಾಟೆಗೆ ತೆಗೆದುಕೊಂಡಿದೆ. ಮುಂದಿನ ವಿಚಾರಣೆ ಸೆ. 28ಕ್ಕೆ ನಿಗದಿಯಾಗಿದೆ.