ಸುಳ್ಳು ದಾಖಲೆ ಸೃಷ್ಟಿಸಿ 25 ಲಕ್ಷ ರೂ. ವಿಮೆಗೆ ಯತ್ನ| ಅರ್ಜಿ ವಜಾಗೊಳಿಸಿದ High court

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಪೊಲೀಸರನ್ನೊಳಗೊಂಡ ಕಟ್ಟುಕಥೆ ಎಂದು ನ್ಯಾಯಾಲಯದ ಬೇಸರ
ಬೆಂಗಳೂರು: ಅಪಘಾತವಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ವಿಮಾ ಕಂಪನಿಯಿಂದ 25 ಲಕ್ಷ ರೂಪಾಯಿ ಪರಿಹಾರ ಕೋರಿ ಹಾಸನದ ಬೇಲೂರು ತಾಲೂಕಿನ ಪೇಟೆಹಳ್ಳಿ ನಿವಾಸಿ ಪಿ.ಸಿ. ಪ್ರಜ್ವಲ್​ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ ಹೈಕೋರ್ಟ್​ ಆದೇಶಿಸಿದೆ.
ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಪರಿಹಾರ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್​ ಮತ್ತು ಟಿ.ಎಂ. ನಧಾಫ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ. ನ್ಯಾಯಾಲಯದ ಪ್ರಕ್ರಿಯೆಗಳನ್ನು ದುರ್ಬಳಕೆ ಮಾಡಿಕೊಂಡು ತಪ್ಪು ಮಾಹಿತಿ ನೀಡಿ ಅಕ್ರಮವಾಗಿ ಹಣವಂತರಾಗಲು ಹೂಡುವ ಇಂತಹ ಪ್ರಕರಣಗಳಿಗೆ ಅವಕಾಶ ನೀಡಲಾಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅಪಘಾತದ ಕತೆ ಕಟ್ಟಿದ್ದೇಗೆ?:

ಅರ್ಜಿದಾರನ ವಾದದ ಪ್ರಕಾರ, 2015ರ ಸೆ. 17ರಂದು ಬೆಳಗ್ಗೆ 7.30ರ ಸುಮಾರಿಗೆ ಹಾಸನ ತಾಲೂಕಿನ ಹಗರೆ ರಸ್ತೆಯ ಕೋಳಿ ಅಂಗಡಿಯ ಮುಂದೆ ತಮ್ಮ ತಂದೆಯ ಮೋಟಾರ್​ ಸೈಕಲ್​ ಬಳಿ ಅವರು ನಿಂತಿದ್ದರು. ಈ ವೇಳೆ ಫಾಜಿಲ್​ ಖಾನ್​ ಎಂಬುವರಿಗೆ ಸೇರಿದ ಮಾರುತಿ ಸ್ವಿಫ್ಟ್ ಕಾರು ಅತಿವೇಗದಿಂದ ಬಂದು ಅಂಗಡಿ ಮತ್ತು ಮೋಟಾರ್​ ಸೈಕಲ್​ಗೆ ಡಿಕ್ಕಿ ಹೊಡೆದಿದೆ. ಇದರಿಂದ ತಾನು ಕೆಳಗೆ ಬಿದ್ದು ತಲೆ, ಬಲಗಾಲು ಹಾಗೂ ಮಂಡಿಗೆ ತೀವ್ರ ಗಾಯಗಳಾಗಿವೆ. ಇದಕ್ಕೆ ಬೆಂಗಳೂರು ಮತ್ತು ಹಾಸನದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿರುವುದಾಗಿ ದಾಖಲೆಗಳನ್ನು ಸೃಷ್ಟಿಸಲಾಗಿತ್ತು.

ಸತ್ಯ ಬಯಲಿಗೆಳೆದ ವೈದ್ಯಕಿಯ ವರದಿ:

ಅರ್ಜಿದಾರನು ತನ್ನ ವಾದಕ್ಕೆ ಪೂರಕವಾಗಿ ಒಟ್ಟು 128 ದಾಖಲೆಗಳನ್ನುನ್ಯಾಯಾಲಯಕ್ಕೆ ಹಾಜರುಪಡಿಸಿದ್ದರೂ, ಆಸ್ಪತ್ರೆಯ ಡಿಸ್ಚಾರ್ಜ್​ ಸಮ್ಮರಿ ಅಸಲಿ ಸತ್ಯವನ್ನು ಬಯಲಿಗೆಳೆದಿದೆ. ಅಪಘಾತ ನಡೆದಿದೆ ಎಂದು ಹೇಳಲಾದ ದಿನಾಂಕಕ್ಕಿಂತ ಎರಡು ವರ್ಷಗಳ ಮೊದಲೇ ಅರ್ಜಿದಾರ ಪ್ರಜ್ವಲ್​ ಹಿಮೋಫಿಲಿಯಾ ಎಂಬ(ರಕ್ತ ಹೆಪ್ಪುಗಟ್ಟದಿರುವಿಕೆ) ಎಂಬ ಕಾಯಿಲೆಯಿಂದ ಬಳಲುತ್ತಿದ್ದನು ಎಂಬುದು ವೈದ್ಯಕಿಯ ದಾಖಲೆಗಳಿಂದ ಸಾಬೀತಾಗಿದೆ. ಇದೇ ಕಾಯಿಲೆಯಿಂದ ಆದ ಸಮಸ್ಯೆಯನ್ನು ಅಪಘಾತದ ಗಾಯಗಳೆಂದು ಬಿಂಬಿಸಲಾಗಿತ್ತು.
ಅಲ್ಲದೆ, ಘಟನಾ ಸ್ಥಳದಲ್ಲಿ ತಂದೆಯೇ ಹಾಜರಿದ್ದರೂ ಕುಟುಂಬದ ಯಾವುದೇ ಸದಸ್ಯರು ಪೊಲೀಸರಿಗೆ ದೂರು ನೀಡಿರಲಿಲ್ಲ. ಘಟನೆ ನಡೆದ ದಿನದ ಸಂಜೆ 5 ಗಂಟೆಗೆ ಆಸ್ಪತ್ರೆಯ ಅಧಿಕಾರಿಗಳ ಮೂಲಕ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಕಾರು ಮಾಲೀಕರು, ಆಸ್ಪತ್ರೆ ಸಿಬ್ಬಂದಿ ಹಾಗೂ ಪೊಲೀಸ್​ ಅಧಿಕಾರಿಗಳು ಪರಸ್ಪರ ಶಾಮೀಲಾಗಿ ಈ ಇಡೀ ಸುಳ್ಳು ಅಪಘಾತದ ಕಥೆಯನ್ನು ಸೃಷ್ಟಿಸಿದ್ದಾರೆ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿದೆ. ವಿಚಾರಣಾ ನ್ಯಾಯಾಲಯವು ಅರ್ಜಿದಾರರ ಮನವಿಯನ್ನು ನಿರಾಕರಿಸಿರುವುದು ಸೂಕ್ತವಾಗಿದೆ ಎಂದು ಆದೇಶ ನೀಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net