ಫೆ.18ರಿಂದ ಬೆಂಗಳೂರಿನ ಪಿ.ಜಿ.ಗಳ ಸಮಗ್ರ ತಪಾಸಣೆ | ಹೈಕೋರ್ಟ್​ ಆದೇಶ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಬೆಂಗಳೂರು: ಮಹಾನಗರದಲ್ಲಿರುವ ಪೇಯಿಂಗ್​ ಗೆಸ್ಟ್​ (ಪಿ.ಜಿ.) ವಸತಿನಿಲಯಗಳು ನಿಯಮಾನುಸಾರ ನಡೆಯುತ್ತಿವೆಯೇ ಮತ್ತು ಅವುಗಳ ಕಟ್ಟಡ ನಿಮಾರ್ಣವು ಮಂಜೂರಾದ ನಕ್ಷೆಯಂತೆಯೇ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಬುಧವಾರದಿಂದ (ಫೆ.18) ಸಮಗ್ರ ತಪಾಸಣೆ ನಡೆಸುವಂತೆ ಗ್ರೇಟರ್​ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಹೈಕೋರ್ಟ್​ ನಿರ್ದೇಶನ ನೀಡಿದೆ.
ವ್ಯಾಪಾರ ಪರವಾನಗಿ ಉಲ್ಲಂಘಿಸಲಾಗಿದೆ ಎಂದು ಬಿಬಿಎಂಪಿ ನೀಡಿದ್ದ ನೋಟಿಸ್​ಗಳನ್ನು ಪ್ರಶ್ನಿಸಿ ಪೇಯಿಂಗ್​ ಗೆಸ್ಟ್​ ಅಕಾಮಡೇಷನ್​ ವೆಲ್ಫೇರ್​ ಅಸೋಸಿಯೇಷನ್​ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್​ ಗೋವಿಂದರಾಜ್​ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ಅರ್ಜಿದಾರರ ಪರ ವಾದಿಸಿದ್ದ ವಕೀಲರು, ಪಿ.ಜಿ.ಗಳ ಕಾರ್ಯನಿರ್ವಹಣೆ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತರು 2024ರ ಆ.7ರಂದು ಹೊರಡಿಸಿರುವ ಆದೇಶದಲ್ಲಿರುವ ನಿಯಮಗಳನ್ನು ಪಾಲಿಸಲಾಗಿದೆ ಎಂದಿದ್ದರು. ಆದ್ದರಿಂದ, ಈ ಕುರಿತ ವಾಸ್ತವ ಸ್ಥಿತಿಯನ್ನು ತಿಳಿಯಲು ಪಿ.ಜಿ.ಗಳ ತಪಾಸಣೆ ಅಗತ್ಯ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಕ್ಷೇತ್ರದ ಆರೋಗ್ಯಾಧಿಕಾರಿಗಳು ಮತ್ತು ಸಹಾಯಕ ನಗರ ಯೋಜನಾ ನಿರ್ದೇಶಕರ ನೇತೃತ್ವದಲ್ಲಿ ಪಿ.ಜಿ.ಗಳ ತಪಾಸಣೆ ಆರಂಭಿಸುವಂತೆ ನ್ಯಾಯಪೀಠ ನಿರ್ದೇಶನ ನೀಡಿದೆ. ಫೆ.18ರಿಂದ ಆರಂಭವಾಗಿ 2 ವಾರಗಳಲ್ಲಿ ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಎಂದು ಗಡುವು ನೀಡಿದೆ. ಒಂದು ವೇಳೆ ತಪಾಸಣೆಗೆ ಪಿ.ಜಿ. ಮಾಲೀಕರು ಸಹಕರಿಸದಿದ್ದರೆ ಅವರು ಕಾನೂನಿನ ರಿಯಾಯಿತಿಗೆ ಅರ್ಹರಲ್ಲ ಎಂದು ನ್ಯಾಯಪೀಠ ಹೇಳಿದೆ. ಮುಂದಿನ ವಿಚಾರಣೆ ಮಾ.16ಕ್ಕೆ ನಿಗದಿಯಾಗಿದೆ.

ನಕ್ಷೆ ಪರಿಶೀಲಿಸಿ ವರದಿ ಸಲ್ಲಿಸಿ

ಕೇವಲ ಸೌಲಭ್ಯಗಳಲ್ಲದೆ, ಪಿ.ಜಿ. ನಡೆಸುತ್ತಿರುವ ಕಟ್ಟಡಗಳು ಬಿಬಿಎಂಪಿಯಿಂದ ಮಂಜೂರಾದ ನಕ್ಷೆಯಂತೆ ನಿಮಾರ್ಣವಾಗಿವೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಒಂದು ವೇಳೆ ನಕ್ಷೆ ಮಂಜೂರಾತಿ ಇಲ್ಲದಿದ್ದರೆ, ಅಸ್ತಿತ್ವದಲ್ಲಿರುವ ಕಟ್ಟಡ ಬೈಲಾಗಳಿಗೆ ಅನುಗುಣವಾಗಿದೆಯೇ ಮತ್ತು ಆ ವಲಯದಲ್ಲಿ ವಾಣಿಜ್ಯ ಬಳಕೆಗೆ ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸಲು ಹೈಕೋರ್ಟ್​ ಸೂಚಿಸಿದೆ.

ಪಿ.ಜಿ.ಗಳು ಪಾಲಿಸಬೇಕಾದ ನಿಯಮಗಳು

  • ಪ್ರವೇಶ, ನಿರ್ಗಮನ ಸ್ಥಳ, ಕಾರಿಡಾರ್​ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ 90 ದಿನಗಳ ದೃಶ್ಯಾವಳಿ ಸಂಗ್ರಹಿಸಿಡಬೇಕು.
  • ಪ್ರತಿ ನಿವಾಸಿಗೆ ಕನಿಷ್ಠ 70 ಚದರ ಅಡಿ ವಿಸ್ತೀರ್ಣದ ವ್ಯಾಪ್ತಿ ಇರಬೇಕು.
  • ಪ್ರಥಮ ಚಿಕಿತ್ಸಾ ಕಿಟ್​, ಸ್ವಚ್ಛ ಶೌಚಗೃಹ ವ್ಯವಸ್ಥೆ.
  • ಶುದ್ಧ ಕುಡಿಯುವ ನೀರಿನ ಲಭ್ಯತೆ ಮತ್ತು ಪ್ರತಿಯೊಬ್ಬರಿಗೂ ಒಟ್ಟು 135 ಲೀಟರ್​ ನೀರಿನ ಲಭ್ಯತೆ.
  • ಪಿ.ಜಿ.ಗಳಲ್ಲಿ ಅಡುಗೆಮನೆ ಇದ್ದರೆ ವ್ಯಾಪಾರ ಪರವಾನಗಿ ಪಡೆದ 3 ತಿಂಗಳೊಳಗೆ ಎ್​ಎಸ್​ಎಸ್​ಎಐ ಪರವಾನಗಿ ಪಡೆಯಬೇಕು.
  • ದಿನದ 24 ಗಂಟೆ ಭದ್ರತಾ ಸಿಬ್ಬಂದಿ ನಿಯೋಜನೆ.
  • ಅಗ್ನಿಶಾಮಕ ದಳದಿಂದ ಕಡ್ಡಾಯವಾಗಿ ನಿರಾಕ್ಷೇಪಣಾ ಪತ್ರ (ಎನ್​ಒಸಿ) ಪಡೆದಿರಬೇಕು.
  • ತುರ್ತು ಸಹಾಯವಾಣಿ ಸಂಖ್ಯೆ ಕಡ್ಡಾಯ ಪ್ರದರ್ಶಿಸಬೇಕು, ಹಸಿ/ ಒಣ ಕಸದ ವೈಜ್ಞಾನಿಕ ವಿಂಗಡಿಸಬೇಕು.
  • ಈ ಎಲ್ಲ ನಿಯಮಗಳು ಪಾಲನೆಯಾಗುತ್ತಿದೆ ಎಂದು 6 ತಿಂಗಳಿಗೊಮ್ಮೆ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ನಿಯಮಗಳು ಉಲ್ಲಂನೆಯಾಗುತ್ತಿರುವುದು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net