ಕಪ್ಪತಗುಡ್ಡ ವನ್ಯಜೀವಿ ಧಾಮ ವ್ಯಾಪ್ತಿ ವಿಸ್ತರಣೆ| High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಹೈಕೋರ್ಟ್​ ನಿರ್ದೇಶನ.
  • ಕಲ್ಲು ಕ್ರಷರ್​ ಕಂಪನಿಗಳ ಅರ್ಜಿ ವಜಾ.
ಬೆಂಗಳೂರು: ಗದಗ ಜಿಲ್ಲೆಯ ಕಪ್ಪತಗುಡ್ಡ ವನ್ಯಜೀವಿ ಧಾಮದ ವ್ಯಾಪ್ತಿಯನ್ನು 178 ಚದರ ಕಿ.ಮೀ.ಗೆ ಸೀಮಿತಗೊಳಿಸಬೇಕು ಎಂದು ಕೋರಿದ್ದ ಅರ್ಜಿಗಳನ್ನು ತಿರಸ್ಕರಿಸಿರುವ ಹೈಕೋರ್ಟ್​, ರಾಜ್ಯ ವನ್ಯಜೀವಿ ಮಂಡಳಿ ತನ್ನ 11ನೇ ಸಭೆಯಲ್ಲಿ ಶಿಫಾರಸು ಮಾಡಿರುವಂತೆ 300 ಚ.ಕಿ.ಮೀ. ಅರಣ್ಯ ಪ್ರದೇಶವನ್ನು 'ವನ್ಯಜೀವಿ ಧಾಮ' ಎಂದು ಘೋಷಿಸಿ ಹೊಸದಾಗಿ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ವನ್ಯಜೀವಿ ಧಾಮದ ಗಡಿ ಪರಿಷ್ಕರಣೆ ಮಾಡಿ ತಮ್ಮ ಕಲ್ಲು ಕ್ರಷರ್​ ಘಟಕಗಳ ಕಾರ್ಯಾಚರಣೆಗೆ ಅನುಮತಿ ನೀಡಬೇಕು ಎಂದು ಕೋರಿ ಹಲವು ಖಾಸಗಿ ಕಂಪನಿಗಳು ಸಲ್ಲಿಸಿದ್ದ ಅರ್ಜಿಗಳನ್ನು ತಿರಸ್ಕರಿಸಿರುವ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ಆದೇಶ ನೀಡಿದೆ. 
ಕಪ್ಪತಗುಡ್ಡ ಅರಣ್ಯ ಪ್ರದೇಶವು ಸಮೃದ್ಧ ಜೀವವೈವಿಧ್ಯತೆಯನ್ನು ಹೊಂದಿರುವುದರಿಂದ ಅದನ್ನು ಸಂರಕ್ಷಿಸುವುದು ಅಗತ್ಯವಾಗಿದೆ. ಆದ್ದರಿಂದ ವನ್ಯಜೀವಿ ಧಾಮದ ಸುತ್ತಲಿನ "ಇಕೋ ಸೆನ್ಸಿಟಿವ್​ ಜೋನ್​' ವ್ಯಾಪ್ತಿಯಲ್ಲಿರುವ ಕಲ್ಲು ಕ್ರಷರ್​ ಮತ್ತು ಗಣಿಗಾರಿಕೆಗಳನ್ನು ಮುಂದುವರಿಸಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಕೈಬಿಟ್ಟಿದ್ದ ಪ್ರದೇಶ ಸೇರ್ಪಡೆಗೆ ಸೂಚನೆ:

ರಾಜ್ಯ ವನ್ಯಜೀವಿ ಮಂಡಳಿಯು ತನ್ನ 11ನೇ ಸಭೆಯಲ್ಲಿ ಸುಮಾರು 300 ಚರದ ಕಿ.ಮೀ. ಮೀಸಲು ಅರಣ್ಯವನ್ನುವನ್ಯಜೀವಿ ಧಾಮ ಎಂದು ಘೋಷಿಸಲು ಶಿಫಾರಸು ಮಾಡಿತ್ತು. ಆದರೆ, 2019ರ ಮೇ. 16ರಂದು ಅಧಿಸೂಚನೆ ಹೊರಡಿಸಿದ್ದ ಸರ್ಕಾರ, ಕೇವಲ 244.15 ಚ.ಕಿ.ಮೀ. ಪ್ರದೇಶವನ್ನು ಮಾತ್ರವನ್ಯಜೀವಿ ಧಾಮ ಎಂದು ಘೋಷಿಸಿತ್ತು. ಮಂಡಳಿಯ ಶಿಫಾರಸು ಇದ್ದರೂ ಸುಮಾರು 55 ಚ.ಕಿ.ಮೀ. ಪ್ರದೇಶವನ್ನು ಅಧಿಸೂಚನೆಯಿಂದ ಕೈಬಿಟ್ಟಿರುವುದಕ್ಕೆ ಯಾವುದೇ ಸೂಕ್ತ ಕಾರಣಗಳನ್ನು ಸರ್ಕಾರ ನೀಡಿಲ್ಲ ಎಂದು ಹೈಕೋರ್ಟ್​ ಹೇಳಿದೆ.
ಆದ್ದರಿಂದ ಬಾಕಿ ಉಳಿದ ಅರಣ್ಯ ಪ್ರದೇಶವನ್ನೂ ವನ್ಯಜೀವಿ ಧಾಮದ ವ್ಯಾಪ್ತಿಗೆ ಸೇರಿಸಿ ಹೊಸ ಅಧಿಸೂಚನೆ ಹೊರಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೂ, ಅಭಯಾರಣ್ಯದ ಗಡಿಗಳಿಂದ ಒಂದು ಪ್ರದೇಶವನ್ನು ಹೊರಗಿಡುವುದು ಅಗತ್ಯ ಎಂದು ಸರ್ಕಾರ ಪರಿಗಣಿಸಿದರೆ, ಕಾನೂನುಬದ್ಧವಾಗಿ ಮುಂದುವರಿಯುವ ಸರ್ಕಾರದ ನಿರ್ಧಾರಗಳನ್ನು ಈ ಆದೇಶ ತಡೆಯುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. 

ಅಪರೂಪದ ವನ್ಯಜೀವಿ ತಾಣ

ಕಪ್ಪತಗುಡ್ಡ ಪ್ರದೇಶವು ಜೀವವೈವಿಧ್ಯತೆಯಿಂದ ಕೂಡಿದ್ದು, ಇಲ್ಲಿ ಚಿರತೆ, ತೋಳ, ಹೈನಾ, ಕೃಷ್ಣಮೃಗ ಸೇರಿದಂತೆ ಸನೇಕ ಅಪರೂಪದ ಪ್ರಾಣಿಗಳಿವೆ ಎಂದು ವೈಲ್ಡ್​ಲೈಫ್ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾದ (ಡಬ್ಲ್ಯುಐಐ) ವರದಿಗಳು ದೃಢಪಡಿಸಿವೆ. ಈ ಪ್ರದೇಶದ ಸಸ್ಯವರ್ಗವು ಅನೇಕ ಔಷಧೀಯ ಸಸ್ಯಗಳನ್ನು ಹೊಂದಿದ್ದು, ಅವುಗಳನ್ನು ಶಾಶ್ವತವಾಗಿ ಸಂರಕ್ಷಿಸುವುದು ಅಗತ್ಯ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net