34 ವಾರಗಳ ಭ್ರೂಣದ ಗರ್ಭಪಾತಕ್ಕೆ ನಿರಾಕರಣೆ| High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ಅಪ್ರಾಪ್ತ ಸಂತ್ರಸ್ತೆಯ ಆರೈಕೆಗೆ ಸರ್ಕಾರಕ್ಕೆ ನಿರ್ದೇಶನ
ಬೆಂಗಳೂರು: ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿರುವ ಅಪ್ರಾಪ್ತ ಸಂತ್ರಸ್ತೆಯೊಬ್ಬಳ 34 ವಾರಗಳ ಭ್ರೂಣದ ಗರ್ಭಪಾತಕ್ಕೆ ಅನುಮತಿ ನೀಡಲು ಹೈಕೋರ್ಟ್​ ನಿರಾಕರಿಸಿದೆ. 
ಗರ್ಭಪಾತಕ್ಕೆ ಅನುಮತಿ ಕೋರಿ ಸಂತ್ರಸ್ತೆ ಪರವಾಗಿ ಆಕೆಯ ತಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್​ ಶಂಕರ್​ ಮಗದುಮ್​ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ. ಈ ಸಮಯದಲ್ಲಿ ಗರ್ಭಪಾತ ನಡೆಸುವುದು ತಾಯಿ ಮತ್ತು ಮಗುವಿನ ಜೀವಕ್ಕೆ ಗಂಭೀರ ಅಪಾಯ ಉಂಟು ಮಾಡಬಹುದು ಎಂಬ ವೈದ್ಯಕಿಯ ವರದಿಯನ್ನು ನ್ಯಾಯಾಲಯ ಪರಿಗಣಿಸಿದೆ.
ಭ್ರೂಣವು ಈಗಾಗಲೇ 34 ವಾರ ಪೂರೈಸಿದೆ. ಈ ಹಂತದಲ್ಲಿ ಗರ್ಭಪಾತ ನಡೆಸುವುದು ವೈದ್ಯಕಿಯವಾಗಿ ಸುರಕ್ಷಿತವಲ್ಲ. 34 ವಾರಗಳ ನಂತರ ಗರ್ಭಪಾತ ಮಾಡುವುದು ಅಕಾಲಿಕ ಹೆರಿಗೆಗೆ ಸಮವಾಗಿದ್ದು, ತಾಯಿ ಮತ್ತು ಮಗು ಇಬ್ಬರಿಗೂ ಮಾರಕವಾಗಬಹುದು ಎಂದು ವೈದ್ಯರು ವರದಿ ನೀಡಿದ್ದರು. ಇದನ್ನು ಪರಿಗಣಿಸಿರುವ ನ್ಯಾಯಪೀಠ, ಕಾನೂನು ಪ್ರಕಾರ 24 ವಾರಗಳ ನಂತರದ ಗರ್ಭಪಾತಕ್ಕೆ ತಾಯಿಯ ಜೀವ ಉಳಿಸುವ ಅನಿವಾರ್ಯತೆ ಇದ್ದರೆ ಮಾತ್ರ ಅವಕಾಶವಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆಯು ಲೈಂಗಿಕ ದೌರ್ಜನ್ಯದ ಕಾರಣ ಮಾನಸಿಕ ಆಘಾತಕ್ಕೆ ಒಳಗಾಗಿದ್ದರೂ ಆಕೆಯ ದೈಹಿಕ ಸುರಕ್ಷತೆ ಮುಖ್ಯವಾಗಿದೆ. ಗರ್ಭಪಾತಕ್ಕೆ ವ್ಯತಿರಿಕ್ತವಾದ ವರದಿಯನ್ನು ವೈದ್ಯರು ನೀಡಿರುವ ಕಾರಣ ಅನುಮತಿ ನಿರಾಕರಿಸಲಾಗಿದೆ ಎಂದು ಹೇಳಿದೆ.

ನೆರವಿಗೆ ಮಾರ್ಗಸೂಚಿ:

ಸಂತ್ರಸ್ತೆಗೆ ಹೆರಿಗೆಯಾಗುವ ತನಕ ನಿರಂತರ ವೈದ್ಯಕಿಯ ಮೇಲ್ವಿಚಾರಣೆ ಮತ್ತು ಪ್ರಸವಪೂರ್ವ ಆರೈಕೆಯನ್ನು ಒದಗಿಸಬೇಕು. ಸುರಕ್ಷಿತ ಹೆರಿಗೆ ಮತ್ತು ನವಜಾತ ಶಿಶುವಿನ ಆರೈಕೆಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು. ಸಂತ್ರಸ್ತೆಗೆ ಕೌನ್ಸೆಲಿಂಗ್​ ಮತ್ತು ಪುನರ್ವಸತಿ, ಸೂಕ್ತ ಪರಿಹಾರ ಒದಗಿಸಬೇಕು. ಒಂದು ವೇಳೆ ಸಂತ್ರಸ್ತೆ ಅಥವಾ ಆಕೆಯ ಪಾಲಕರು ಮಗುವನ್ನು ಸಾಕಲು ಇಚ್ಛಿಸದಿದ್ದರೆ, ಕಾನೂನುಬದ್ಧವಾಗಿ ಮಗುವಿನ ದತ್ತು ಪ್ರಕ್ರಿಯೆಗೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶನ ನೀಡಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net