ಬೇಕಾಬಿಟ್ಟಿ ವರ್ಗಾವಣೆಗೆ ಹೈಕೋರ್ಟ್​ ಕಿಡಿ| High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ಹುದ್ದೆ ನಿಯೋಜಿಸದೆ ಕರ್ತವ್ಯದಿಂದ ಬಿಡುಗಡೆ ಮಾಡುವಂತಿಲ್ಲ
  • ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ
ಶ್ರವಣ್​ ನೀರಬಿದಿರೆ ಬೆಂಗಳೂರು
ಹುದ್ದೆ ನಿಯೋಜಿಸದೆ ವರ್ಗಾವಣೆ ಮಾಡಿ ಅಧಿಕಾರಿಗಳನ್ನು ಅತಂತ್ರಗೊಳಿಸುವ ಸರ್ಕಾರದ ವರ್ತನೆಗೆ ಹೈಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿದೆ. ಅಧಿಕಾರಿಗಳಿಗೆ ಜವಾಬ್ದಾರಿ ನೀಡದೆ ಅವರನ್ನು ಹಳೆಯ ಹುದ್ದೆಯಿಂದ ಬಿಡುಗಡೆ ಮಾಡುವುದು ಸರಿಯಲ್ಲ. ಇದು ತೆರಿಗೆದಾರರ ಹಣದ ವ್ಯವಸ್ಥಿತ ದುರ್ಬಳಕೆ ಎಂದು ಆಕ್ರೋಶ ಹೊರಹಾಕಿದೆ.
ಯಾವುದೇ ಅಧಿಕಾರಿಯನ್ನು ಹೊಸ ಜವಾಬ್ದಾರಿ ನೀಡುವ ತನಕ ಹಳೆಯ ಪೋಸ್ಟಿಂಗ್​ನಿಂದ ಬಿಡುಗಡೆ ಮಾಡುವಂತಿಲ್ಲ. ಒಂದು ವೇಳೆ ಬಿಡುಗಡೆ ಮಾಡಿದರೆ, ಅವರು ಕೆಲಸ ಮಾಡದೆ ಮನೆಯಲ್ಲಿ ಕುಳಿತ ಅವಧಿಯ ವೇತನ ಮತ್ತು ಭತ್ಯೆಯನ್ನು ವರ್ಗಾವಣೆ ಆದೇಶ ನೀಡಿದ ಸಂಬಂಧಪಟ್ಟ ಕಾರ್ಯದರ್ಶಿ ಅಥವಾ ಇಲಾಖಾ ಮುಖ್ಯಸ್ಥರ ವೇತನದಿಂದಲೇ ವಸೂಲಿ ಮಾಡಬೇಕು ಎಂದು ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. 
ಅಬಕಾರಿ ಉಪ ಆಯುಕ್ತರಾಗಿದ್ದ ಅರುಣ್​ ಕುಮಾರ್​ ಅವರನ್ನು ಯಾವುದೇ ಹುದ್ದೆ ನೀಡದೆ ವರ್ಗಾವಣೆಗೊಳಿಸಿದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್​.ಜಿ. ಪಂಡಿತ್​ ಮತ್ತು ಕೆ.ವಿ ಅರವಿಂದ್​ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ಮಹತ್ವದ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ: 

ಬೆಳಗಾವಿ ಉತ್ತರ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾಗಿದ್ದ ಅರುಣ್​ ಕುಮಾರ್​ ಅವರನ್ನು 2025ರ ಜ.29ರಂದು ವರ್ಗಾವಣೆ ಮಾಡಲಾಗಿತ್ತು. ಅವರ ಸ್ಥಾನಕ್ಕೆ ಎಸ್​.ಸ್ವಪ್ನಾ ಎಂಬುವರನ್ನು ನಿಯೋಜಿಸಿ ಸರ್ಕಾರ ಆದೇಶಿಸಿತ್ತು. ಆದರೆ, ಅರುಣ್​ ಕುಮಾರ್​ ಅವರಿಗೆ ಹೊಸ ಜವಾಬ್ದಾರಿ ನೀಡದೆ, ಕೇವಲ ಸಕ್ಷಮ ಪ್ರಾಧಿಕಾರಕ್ಕೆ ವರದಿ ಮಾಡಿಕೊಳ್ಳಿ ಎಂದು ಸೂಚಿಸಲಾಗಿತ್ತು. ಅಂದಿನಿಂದ ಒಂದು ವರ್ಷ ಅವರು ಹುದ್ದೆ ಇಲ್ಲದೆ ಕಾಯುವಂತಾಗಿತ್ತು. ಇದನ್ನು ಪ್ರಶ್ನಿಸಿ ಅವರು ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಆ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಆದ್ದರಿಂದ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. 
ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್​, ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಳ್ಳದೆ ವೇತನ ನೀಡುವುದು ಜವಾಬ್ದಾರಿಯುತ ಆಡಳಿತದ ಲಕ್ಷಣವಲ್ಲ ಎಂದು ಹೇಳಿತ್ತು. ನ್ಯಾಯಾಲಯದ ನಿರ್ದೇಶನದಂತೆ ಅರುಣ್​ ಕುಮಾರ್​ ಅವರಿಗೆ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಉಪ ಆಯುಕ್ತರಾಗಿ ಹುದ್ದೆ ನೀಡಿ ಕಳೆದ ಜ.12ರಂದು ಸರ್ಕಾರ ಆದೇಶ ಹೊರಡಿಸಿದೆ. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಹುದ್ದೆ ನೀಡದೆ ವರ್ಗಾವಣೆ ನಡೆಸದಂತೆ ಆದೇಶಿಸಿದೆ.

ವರ್ತನೆ ಸರಿಯಲ್ಲ

ವಿಚಾರಣೆ ವೇಳೆ ಸರ್ಕಾರ ಸಲ್ಲಿಸಿದ್ದ ಅಫಿಡವಿತ್​ನಲ್ಲಿ, ಮುಖ್ಯಮಂತ್ರಿ ಮತ್ತು ಅಬಕಾರಿ ಸಚಿವರ ಕಚೇರಿಗಳ ನಡುವೆ ಕಡತಗಳು ಹಲವು ಬಾರಿ ಓಡಾಡಿರುವುದನ್ನು ಉಲ್ಲೇಖಿಸಲಾಗಿತ್ತು. ವಿಳಂಬವು ಉದ್ದೇಶಪೂರ್ವಕವಲ್ಲ, ಬದಲಿಗೆ ಆಡಳಿತಾತ್ಮಕ ಕಾರಣಗಳಿಂದಾಗಿ ಸಂಭವಿಸಿದೆ. ಅಬಕಾರಿ ಇಲಾಖೆಯಲ್ಲಿ ಅರುಣ್​ ಕುಮಾರ್​ ಅವರಲ್ಲದೆ, 4 ಗ್ರೂಪ್​ "ಎ' ಅಧಿಕಾರಿಗಳು ಮತ್ತು 20 ಗ್ರೂಪ್​ "ಸಿ' ಸಿಬ್ಬಂದಿ ಪೋಸ್ಟಿಂಗ್​ಗೆ ಕಾಯುತ್ತಿದ್ದಾರೆ ಎಂದು ಸರ್ಕಾರ ತಿಳಿಸಿತ್ತು. ಇದನ್ನು ಅವಲೋಕಿಸಿದ ನ್ಯಾಯಪೀಠ, ಹುದ್ದೆಗಳು ಖಾಲಿ ಇದ್ದರೂ ರಾಜಕೀಯ ಅಥವಾ ಆಡಳಿತಾತ್ಮಕ ಕಾರಣಗಳಿಗಾಗಿ ಸರ್ಕಾರದ ಈ ವರ್ತನೆ ಸರಿಯಲ್ಲ ಎಂದು ಕಿಡಿಕಾರಿದೆ. 

ಮುಖ್ಯ ಕಾರ್ಯದರ್ಶಿಗೆ ಸೂಚನೆ 

ಈ ತೀರ್ಪಿನ ಪ್ರತಿಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ರವಾನಿಸಲು ಹೈಕೋರ್ಟ್​ ರಿಜಿಸ್ಟ್ರಿಗೆ ನಿರ್ದೇಶಿಸಿರುವ ನ್ಯಾಯಾಲಯ, ಇದನ್ನು ಸರ್ಕಾರದ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಮುಖ್ಯಸ್ಥರ ಗಮನಕ್ಕೆ ತರಬೇಕು ಎಂದು ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net